ಭ್ರಷ್ಟರ ರಕ್ಷಣೆಯ ಹುನ್ನಾರ ಅಧಿಕಾರಕ್ಕೆ ಬಂದ ಮೂರೂವರೆ ತಿಂಗಳಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ತಾವು ರಾಜ್ಯದ ಅತ್ಯುನ್ನತ ಆಡಳಿತ ಹುದ್ದೆಗೆ ಬರುವುದಕ್ಕೆ ಪರೋಕ್ಷವಾಗಿ ಕಾರಣವಾದ ಪ್ರಬಲ ತನಿಖಾ ಸಂಸ್ಥೆ ಲೋಕಾಯುಕ್ತವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ಜನತೆಯ ಅರಿವಿಗೆ ಬರುತ್ತಿದೆ. ಮಾಜಿ ಮುಖ್ಯಮಂತ್ರಿಯ ವಿರುದ್ಧದ ಪ್ರಮುಖ ಭ್ರಷ್ಟಾಚಾರದ ಪ್ರಕರಣದಲ್ಲಿ ತನಿಖೆಯನ್ನು ಆರಂಭಿಸಿದ ಲೋಕಾಯುಕ್ತ ಎಡಿಜಿಪಿ ಜೀವನ್‌ಕುಮಾರ್ ಗಾಂವ್ಕರ್ ಅವರನ್ನು ಎರಡೇ ತಿಂಗಳಲ್ಲಿ ವರ್ಗಾಯಿಸಿದ ಕ್ರಮ ಇದಕ್ಕೆ ನಿದರ್ಶನ. ಅದು ತನಿಖೆಯನ್ನು ದುರ್ಬಲಗೊಳಿಸುವ ದುರುದ್ದೇಶದ ವರ್ಗಾವಣೆಯೆಂಬುದು ಸ್ಪಷ್ಟ. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದಾಗ ಕರ್ತವ್ಯಲೋಪ ಎಸಗಿದ ಹಾಗೂ ಲೋಕಾಯುಕ್ತದಿಂದಲೇ ತನಿಖೆಗೆ ಒಳಪಟ್ಟು ಶಿಸ್ತುಕ್ರಮದ ತೂಗುಕತ್ತಿಯನ್ನು ಎದುರಿಸುತ್ತಿರುವ ಕಳಂಕಿತ ಪೊಲೀಸ್ ಅಧಿಕಾರಿಗಳನ್ನು ಲೋಕಾಯುಕ್ತದ ಈ ಉನ್ನತ ಹುದ್ದೆಗಳಿಗೆ ತಂದಿರುವ ಕ್ರಮವೂ ಪ್ರಶ್ನಾರ್ಹ. ಇದು, ಈಗಾಗಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಹಂತಕ್ಕೆ ಬಂದಿರುವ ಹಿಂದಿನ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಇತರ ಪ್ರಭಾವಿ ಆರೋಪಿಗಳ ಭ್ರಷ್ಟಾಚಾರದ ತನಿಖೆಯನ್ನು ಆರೋಪಿಗಳಿಗೆ ಅನುಕೂಲಕರವಾಗುವಂತೆ ಮಾರ್ಪಡಿಸಿಕೊಳ್ಳುವ ಕುಟಿಲ ತಂತ್ರವಲ್ಲದೆ ಬೇರೆ ಅಲ್ಲ. ಭ್ರಷ್ಟಾಚಾರದ ಆರೋಪ ಹೊತ್ತು ಅಧಿಕಾರ ತ್ಯಜಿಸಿದ ಯಡಿಯೂರಪ್ಪ ಅವರ ಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ತಮ್ಮ ವಿಭಿನ್ನ ಆಡಳಿತ ವೈಖರಿ ಒಂದು ತಿಂಗಳಲ್ಲಿಯೇ ವ್ಯಕ್ತವಾಗಲಿದೆ ಎಂಬ ಆಶಾಭಾವನೆಯನ್ನು ಸದಾನಂದಗೌಡರು ಮೂಡಿಸಿದ್ದರು. ಆದರೆ ಮೂರೂವರೆ ತಿಂಗಳ ನಂತರವೂ ಅವರು ಯಡಿಯೂರಪ್ಪ ಅವರ ಆಣತಿಯನ್ನು ಪಾಲಿಸುವ ಆಜ್ಞಾಪಾಲಕನಂತೆಯೇ ವರ್ತಿಸುತ್ತಿದ್ದಾರೆ. ಇದು ಕರ್ನಾಟಕದ ಆರುಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿಗೆ ಸಲ್ಲದ ಅಸಹಾಯಕತೆ. ಭ್ರಷ್ಟಾಚಾರ ನಡೆಸಿದವರ ವಿರುದ್ಧ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸುತ್ತಿದ್ದ ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ತಮ್ಮ ಪುತ್ರನಿಗೆ ಸಂಬಂಧಿಸಿದ ಆದಾಯ ಮೀರಿದ ಆಸ್ತಿ ಸಂಪಾದನೆ ಕುರಿತಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಎಡಿಜಿಪಿ ಅವರಿಗೆ ದೂರವಾಣಿಯಲ್ಲಿ ಬೆದರಿಕೆ ಹಾಕಿದ ಘಟನೆ ಆ ರಾಜಕೀಯ ಪಕ್ಷ ಮುಟ್ಟಿದ ಹತಾಶ ಸ್ಥಿತಿಯ ನಿದರ್ಶನ. ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ ಈ ಪ್ರಕರಣ ಪಾಳೇಗಾರಿಕೆ ಮನಃಸ್ಥಿತಿಯ ದ್ಯೋತಕ. ಎಡಿಜಿಪಿ ದರ್ಜೆಯ ಅಧಿಕಾರಿ ಈ ಸಂಬಂಧದಲ್ಲಿ ಬರೆದ ಪತ್ರವನ್ನು ಸರ್ಕಾರ ಪೂರಕ ಸಾಕ್ಷ್ಯವಿಲ್ಲವೆಂಬ ತಾಂತ್ರಿಕ ನೆಪ ಒಡ್ಡಿ ಹಗುರವಾಗಿ ಪರಿಗಣಿಸಬಾರದು. ಅಧಿಕಾರಿಗಳಿಗೆ ಬೆದರಿಕೆ ಹಾಕಿದ ವ್ಯಕ್ತಿಗಳನ್ನು ಕಾಯ್ದೆ ವ್ಯಾಪ್ತಿಗೆ ತರುವ ದಿಟ್ಟತನವನ್ನು ಸರ್ಕಾರ ಪ್ರದರ್ಶಿಸಬೇಕು. ದಕ್ಷಿಣ ಭಾರತದಲ್ಲಿ ಇದೇ ಮೊದಲ ಸಲ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಅಂಟಿದ ಭ್ರಷ್ಟಾಚಾರದ ಕಳಂಕವನ್ನು ತೊಡೆಯುವುದೆಂದರೆ ಭ್ರಷ್ಟರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ಅದಕ್ಕೆ ಲೋಕಾಯುಕ್ತವನ್ನು ಬಲಪಡಿಸುವುದೊಂದೇ ಪರಿಹಾರ. ಈಗಾಗಲೇ ಬಿರುಸಾಗಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಸುಸೂತ್ರವಾಗಿ ನಡೆಯುವುದಕ್ಕೆ ಸರ್ಕಾರ ಅಡ್ಡಿಯಾಗಬಾರದು. ನಿಷ್ಕಾರಣವಾಗಿ ವರ್ಗ ಮಾಡಿರುವ ಲೋಕಾಯುಕ್ತ ಎಡಿಜಿಪಿ ಅವರನ್ನು ಮತ್ತೆ ಲೋಕಾಯುಕ್ತಕ್ಕೆ ನಿಯೋಜಿಸಿ ತನಿಖೆಗಳು ತಾರ್ಕಿಕ ಅಂತ್ಯ ಮುಟ್ಟುವುದಕ್ಕೆ ನೆರವಾಗಬೇಕು. ಹೀಗೆ ಮಾಡದಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟದ ಪ್ರತಾಪ ಕೊಚ್ಚಿಕೊಳ್ಳುವ ಬಿಜೆಪಿ, ವಾಸ್ತವವಾಗಿ ಸಮಯಸಾಧಕ, ಅಪ್ರಾಮಾಣಿಕ ರಾಜಕೀಯ ಪಕ್ಷವೆಂಬುದು ನಿಚ್ಚಳವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.