ವ್ಯರ್ಥ ಕಸರತ್ತು ಮಾಲ್ಡೀವ್ಸ್‌ನಲ್ಲಿ ನಡೆದ ಪ್ರಾದೇಶಿಕ ಸಹಕಾರ ಉದ್ದೇಶದ ದಕ್ಷಿಣ ಏಷ್ಯದೇಶಗಳ ಸಂಘಟನೆಯ (ಸಾರ್ಕ್) 17ನೇ ಶೃಂಗ ಸಭೆ ಮಹತ್ವವಾದುದೇನನ್ನೂ ಸಾಧಿಸಿಲ್ಲ. ಮತ್ತೆ ಅದೇ ಭಾಷಣಗಳು, ಒಂದಿಷ್ಟು ನಿರ್ಣಯಗಳು. ಸಾರ್ಕ್ ಅಸ್ತಿತ್ವಕ್ಕೆ ಬಂದು 26 ವರ್ಷಗಳಾದರೂ ಕನಿಷ್ಠ ವಾಣಿಜ್ಯ - ವ್ಯಾಪಾರ ಕ್ಷೇತ್ರದಲ್ಲಿಯಾದರೂ ಸದಸ್ಯ ದೇಶಗಳ ನಡುವೆ ಉತ್ತಮ ಸಹಕಾರ ಸಾಧಿಸಲು ಸಾಧ್ಯವಾಗಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಣ ವೈಮನಸ್ಯ ಸಾರ್ಕ್ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿದೆ ಎಂಬ ಅಭಿಪ್ರಾಯವನ್ನು ಶೃಂಗಸಭೆಯಲ್ಲಿ ಭಾಗವಹಿಸಿದ್ದ ಹಲವು ಪ್ರತಿನಿಧಿಗಳು ಈ ಬಾರಿಯೂ ವ್ಯಕ್ತಮಾಡಿದ್ದಾರೆ. ಹಿಂದಿನ ಶೃಂಗಸಭೆಯ ಸಂದರ್ಭದಲ್ಲಿ ನಡೆದಂತೆ ಈ ಸಾರಿಯೂ ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳು ಪ್ರತ್ಯೇಕವಾಗಿ ಭೇಟಿ ಮಾಡಿ ಸಂಬಂಧಗಳ ಸುಧಾರಣೆ ದಿಸೆಯಲ್ಲಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾತುಕತೆಗಳಲ್ಲಿಯೂ ಮಹತ್ವಪೂರ್ಣವಾದ ನಿರ್ಧಾರಗಳೇನೂ ಆಗಿಲ್ಲ. ಸೌಹಾರ್ದಯುತ ಮಾತುಕತೆ ನಡೆಸುವುದೇ ಒಳ್ಳೆಯ ಬೆಳವಣಿಗೆ ಎನ್ನುವುದಾದರೆ ಅದು ಆಗಿರುವುದಂತೂ ನಿಜ. ಆದರೆ ಇಷ್ಟರಿಂದಲೇ ಏನೂ ಆಗದು. 2008ರ ಮುಂಬೈ ದಾಳಿ ಸಂಚಿನ ರೂವಾರಿಗಳ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳದ ಹೊರತು ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗಳು ಆರಂಭವಾಗುವ ಸಾಧ್ಯತೆ ಇಲ್ಲ ಮತ್ತು ಎಂದು ಅಂಥ ಇನ್ನೊಂದು ದಾಳಿ ನಡೆದರೆ ಬಾಂಧವ್ಯಕ್ಕೆ ಸ್ಪಷ್ಟವಾಗಿ ಹಿನ್ನಡೆಯಾಗಲಿದೆ ಎಂಬ ಪ್ರಧಾನಿ ಮನಮೋಹನ ಸಿಂಗ್ ಅವರ ಎಚ್ಚರಿಕೆ ವಾಸ್ತವ ಸ್ಥಿತಿಗೆ ಹಿಡಿದ ಕನ್ನಡಿ. ಕೆಲ ದಿನಗಳ ಹಿಂದೆಯಷ್ಟೇ ಪಾಕಿಸ್ತಾನ ಭಾರತಕ್ಕೆ `ಪರಮಾಪ್ತ ರಾಷ್ಟ್ರ~ದ ಸ್ಥಾನ ಘೋಷಿಸಿ ಅಚ್ಚರಿ ಹುಟ್ಟಿಸಿತ್ತು. ಆದರೆ ಒಂದೇ ದಿನದಲ್ಲಿ ಹಾಗೆ ಇನ್ನೂ ಘೋಷಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿ ಗೊಂದಲ ಹುಟ್ಟಿಸಿತು. ಭಾರತದ ಜೊತೆಗಿನ ಮೈತ್ರಿ ವೃದ್ಧಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸದಾ ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ತಂತ್ರ ಅನುಸರಿಸುತ್ತಿದೆ. ಭಾರತವೂ ಅದೇ ತಂತ್ರವನ್ನು ಸ್ವಲ್ಪ ಭಿನ್ನವಾಗಿ ಅನುಸರಿಸುತ್ತಿದೆ. ಎರಡೂ ದೇಶಗಳ ನಡುವಣ ಬಾಂಧವ್ಯ ರಾಜಕೀಯ ಆಯಾಮ ಪಡೆದುಕೊಂಡಿರುವುದು ಮತ್ತು ಪರಸ್ಪರ ವಿಶ್ವಾಸ ಇಲ್ಲದಿರುವುದೇ ಈ ಗೊಂದಲಕ್ಕೆ ಕಾರಣ. ಭಯೋತ್ಪಾದಕರ ನಿರ್ಮೂಲನೆಗಾಗಿ ಮಿಲಿಟರಿ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ಅಮೆರಿಕದ ಆಡಳಿಗಾರರು ಪಾಕಿಸ್ತಾನಕ್ಕೆ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನ -ಪಾಕಿಸ್ತಾನ, ಪಾಕಿಸ್ತಾನ -ಭಾರತ, ಆಫ್ಘಾನಿಸ್ತಾನ- ಭಾರತದ ನಡುವಣ ಸಂಬಂಧಗಳು ಪುನರ್‌ರೂಪುಗೊಳ್ಳುವ ಸಾಧ್ಯತೆಗಳು ಕಾಣುತ್ತಿವೆ. ಇದೀಗ ಪಾಕಿಸ್ತಾನಕ್ಕೆ ಭಾರತ ಮತ್ತು ಆಫ್ಘಾನಿಸ್ತಾನದ ಜೊತೆಗೆ ಉತ್ತಮ ಮೈತ್ರಿ ಸಾಧಿಸುವುದು ಅನಿವಾರ್ಯವಾಗಿದೆ. ಪಾಕಿಸ್ತಾನದ ಈ ರಾಜಕೀಯ ಲೆಕ್ಕಾಚಾರವನ್ನು ಭಾರತ ಸರಿಯಾಗಿ ಗ್ರಹಿಸಿ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.