ಕ್ಷಮೆ ಸಾಲದು, ಕ್ರಮ ಬೇಕು ಭಾರತದ ಗಣ್ಯರ ಭದ್ರತಾ ತಪಾಸಣೆ ನಡೆಸಿ ಅಮೆರಿಕ ಅವಮಾನಿಸುವುದು ಇದು ಮೊದಲ ಸಲವೇನಲ್ಲ. ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ಪ್ರವಾಸ ಹೊರಟಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನೇ ದೆಹಲಿ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಭದ್ರತಾ ಸಿಬ್ಬಂದಿ ತಪಾಸಣೆಗೊಳಪಡಿಸಿ ಅವಮಾನಿಸಿದ್ದರು. ಅದಕ್ಕಿಂತ ಮೊದಲು ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್, ನಂತರ ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರಿಗೂ ಇದೇ ರೀತಿ ಅಗೌರವವನ್ನುಂಟು ಮಾಡಲಾಗಿತ್ತು. ಚಿತ್ರನಟರಾದ ಅಮೀರ್ ಖಾನ್, ಶಾರುಖ್ ಖಾನ್, ಮುಮ್ಮುಟ್ಟಿ ಮೊದಲಾದವರನ್ನು ಮುಸ್ಲಿಮರೆನ್ನುವ ಕಾರಣಕ್ಕೆ ನಿಲ್ಲಿಸಿ ತಪಾಸಣೆಗೊಳಪಡಿಸಲಾಗಿದೆ. ಮುಸ್ಲಿಂ ಹೆಸರನ್ನು ಹೋಲುವ ಮುಸ್ಲಿಮೇತರ ಗಣ್ಯರನ್ನೂ ಅಮೆರಿಕದ ಭದ್ರತಾ ಸಿಬ್ಬಂದಿಯ ತಪಾಸಣೆ ಬೆನ್ನು ಬಿಟ್ಟಿಲ್ಲ. ಈಗ ಎರಡನೇ ಬಾರಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜಾಕೆಟ್ ಮತ್ತು ಬೂಟುಗಳನ್ನು ಕೇಳಿ ಪಡೆದು ಅವುಗಳಲ್ಲಿ ಸ್ಫೋಟಕಗಳಿವೆಯೇ ಎಂಬುದನ್ನು ಅಮೆರಿಕದ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿದೆ. ಹಿಂದಿನ ಎಲ್ಲ ಘಟನೆಗಳಂತೆಯೇ ಈ ಬಾರಿ ಕೂಡಾ ಭಾರತದ ವಿದೇಶಾಂಗ ಸಚಿವರು ಕಟುಶಬ್ದಗಳಿಂದ ಅಮೆರಿಕದ ಭದ್ರತಾ ಸಿಬ್ಬಂದಿಯ ನಡವಳಿಕೆಯನ್ನು ಖಂಡಿಸಿದ್ದಾರೆ. ಅಮೆರಿಕ ಕ್ಷಮಾಪಣೆ ಕೇಳಿ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದೆ. ಸ್ವಾಭಿಮಾನ ಹೊಂದಿರುವ ಯಾವ ದೇಶವೂ ಇದನ್ನು ಸಹಿಸಲು ಸಾಧ್ಯ ಇಲ್ಲ. ಅಮೆರಿಕದ ಗಣ್ಯರು ಆಗಮಿಸಿದಾಗ ಅವರಿಗೆ ವಿಶೇಷ ಬಿಗಿ ಭದ್ರತೆ ನೀಡಿ ಭಾರತ ಔದಾರ್ಯ ಮೆರೆಯುತ್ತದೆ. ಆದರೆ ಅಮೆರಿಕ ಮಾತ್ರ ತಮ್ಮ ದೇಶಕ್ಕೆ ಭೇಟಿ ನೀಡುವ ಭಾರತದ ಗಣ್ಯರಿಗೆ ಅವಮಾನದ ಉಡುಗೊರೆ ನೀಡುತ್ತಾ ಬಂದಿದೆ. ಇದು ಕ್ಷಮೆ ಯಾಚಿಸಿ ಕೊನೆಗೊಳಿಸುವ ಪ್ರಕರಣ ಅಲ್ಲ. ಅಬ್ದುಲ್ ಕಲಾಂ ಅವರನ್ನು ತಪಾಸಣೆಗೊಳಪಡಿಸಿದ್ದಕ್ಕಾಗಿ ಅಮೆರಿಕ ಕ್ಷಮೆ ಯಾಚಿಸುವ ಜತೆಯಲ್ಲಿಯೇ ಪರೋಕ್ಷವಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವುದನ್ನು ಗಮನಿಸಬೇಕಾಗುತ್ತದೆ. ಭದ್ರತಾ ತಪಾಸಣೆಯಿಂದ ವಿನಾಯಿತಿ ಪಡೆದ ಭಾರತೀಯರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸೇರದೆ ಇದ್ದ ಕಾರಣದಿಂದಾಗಿ ತಪಾಸಣೆ ನಡೆಸಲಾಗಿದೆ ಎಂದು ಅಮೆರಿಕ ಹೇಳಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಸಂಪುಟ ಸಚಿವರನ್ನು ಹೊರತುಪಡಿಸಿ ಉಳಿದ ಯಾರಿಗೂ, ಅಮೆರಿಕ ವಿಮಾನ ನಿಲ್ದಾಣಗಳು ಮತ್ತು ನೇರವಾಗಿ ಅಮೆರಿಕಕ್ಕೆ ಭಾರತದಿಂದ ಹೊರಡುವ ವಿಮಾನಗಳಲ್ಲಿ ಭದ್ರತಾ ತಪಾಸಣೆಯಿಂದ ವಿನಾಯಿತಿ ನೀಡಲು ಅಮೆರಿಕ ನಿರಾಕರಿಸುತ್ತಲೇ ಬಂದಿದೆ. ಮಾಜಿಗಳಾಗಿರುವ ಗಣ್ಯರೇನು ನೂರಾರು ಸಂಖ್ಯೆಯಲ್ಲಿ ಇಲ್ಲದ ಕಾರಣ ಈ ನಿಯಮವನ್ನು ಸಡಿಲಿಸುವುದರಿಂದ ಭದ್ರತಾ ಸಮಸ್ಯೆ ಉಂಟಾಗಲಾರದು. ಈ ಬಗ್ಗೆ ಅಮೆರಿಕದ ಸರ್ಕಾರದ ಜತೆ ಭಾರತ ಗಂಭೀರವಾಗಿ ಮಾತುಕತೆ ನಡೆಸಿ ರಾಜತಾಂತ್ರಿಕ ಒತ್ತಡದ ಮೂಲಕ ಈ ಅವಮಾನಕಾರಿ ನಿಯಮಾವಳಿಯನ್ನು ಬದಲಾಯಿಸಲು ಪ್ರಯತ್ನಿಸಬೇಕು. ಇದಕ್ಕೆ ಆ ದೇಶ ಒಪ್ಪದಿದ್ದರೆ ಬ್ರೆಜಿಲ್ ದೇಶದ ಮಾದರಿಯಲ್ಲಿ ಅಮೆರಿಕದ ಗಣ್ಯರನ್ನು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ತಪಾಸಣೆಗೊಳಪಡಿಸಲು ಭಾರತ ಹಿಂಜರಿಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.