ಮುಗ್ಗರಿಸುತ್ತಿರುವ ರೂಪಾಯಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದೇಶದ ಕರೆನ್ಸಿ- ರೂಪಾಯಿ ಬೆಲೆಯು, ಅಮೆರಿಕದಡಾಲರ್ ಎದುರು ಕುಸಿಯುತ್ತಲೇ ಸಾಗಿದೆ. ಅಂತರ ಬ್ಯಾಂಕ್ ವಿದೇಶ ವಿನಿಮಯ ದರದಲ್ಲಿ ಆಗಸ್ಟ್ ತಿಂಗಳಲ್ಲಿ ಒಂದು ಡಾಲರ್‌ಗೆ 44 ರೂಪಾಯಿಗಳಂತೆ ಇದ್ದದರ, ಈಗ 52 ರೂಪಾಯಿಗಳಿಗೆ ಏರಿದೆ. ಈ ವರ್ಷದಲ್ಲಿ ಇದುವರೆಗೆ ರೂಪಾಯಿ ಬೆಲೆ ಶೇ 13ರಷ್ಟು ಕಡಿಮೆಯಾಗಿರುವುದು ಆತಂಕದ ಸಂಗತಿ. ಡಾಲರ್‌ನ ಪೂರೈಕೆಗಿಂತ ಬೇಡಿಕೆ ಹೆಚ್ಚಿಗೆ ಇರುವುದರಿಂದ ಈ ಬಿಕ್ಕಟ್ಟು. ಬ್ಯಾಂಕುಗಳು ಮತ್ತು ಆಮದುದಾರರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್‌ನ ಬೇಡಿಕೆ ಹೆಚ್ಚಿದೆ. ರಫ್ತುದಾರರಿಗೆ ಇದು ಶುಭ ಸುದ್ದಿಯಾಗಿದ್ದರೆ, ಆಮದುದಾರರ ಪಾಲಿಗೆ ಕಹಿಯಾದ ಸಂಗತಿ. ಚಿನ್ನಾಭರಣ, ಸಿದ್ಧ ಉಡುಪು, ಸಾಫ್ಟ್‌ವೇರ್ ಸೇರಿದಂತೆ ಪ್ರಮುಖ ರಫ್ತು ವಹಿವಾಟುದಾರರು ಹೆಚ್ಚು ಲಾಭ ಬಾಚಿಕೊಳ್ಳುತ್ತಿದ್ದಾರೆ. ವಿದೇಶಗಳಲ್ಲಿ ದುಡಿಯುತ್ತಿರುವ ಡಾಲರ್‌ನಲ್ಲಿ ವೇತನ ಪಡೆಯುವವರುಮತ್ತು ಅನಿವಾಸಿ ಭಾರತೀಯರು ಸ್ವದೇಶಕ್ಕೆ ಡಾಲರ್ ರವಾನಿಸಿ ಹೆಚ್ಚು ಹಣ ಸಂಪಾದಿಸಲು ಅವಕಾಶ. ಬಿಡಿಭಾಗ ಮತ್ತಿತರ ಕಚ್ಚಾ ಸರಕನ್ನು ಆಮದು ಮಾಡಿಕೊಳ್ಳುವ ಉದ್ದಿಮೆಗಳಿಗೆ ಇದರ ಬಿಸಿ ತಟ್ಟಿದ್ದು ಆಮದು ದುಬಾರಿಯಾಗಿದೆ. ಕಂಪ್ಯೂಟರ್‌ಗಳೂ ತುಟ್ಟಿಯಾಗುತ್ತಿವೆ. ವಿದೇಶಗಳಲ್ಲಿನ ಉನ್ನತ ವ್ಯಾಸಂಗವೂ ದುಬಾರಿಯಾಗಿ ಪರಿಣಮಿಸಿದೆ. ಇದೊಂದು ಕೇವಲ ಬೇಡಿಕೆ - ಪೂರೈಕೆಗಳು ಕರೆನ್ಸಿ ಬೆಲೆ ನಿರ್ಧರಿಸುವ ಅಲ್ಪಾವಧಿ ವಿದ್ಯಮಾನವಲ್ಲ. ಚಾಲ್ತಿ ಖಾತೆ ಕೊರತೆ ಹೆಚ್ಚಳ, ಬಂಡವಾಳ ಹರಿವು ಕಡಿಮೆಯಾಗಿರುವುದು ಮತ್ತು ಆರ್ಥಿಕ ವೃದ್ಧಿ ದರ ಕುಂಠಿತಗೊಂಡಿರುವುದೂ ಈ ಪರಿಸ್ಥಿತಿಗೆ ಕಾರಣ. ಆಮದು ದುಬಾರಿಯಾಗಿ ಈಗಾಗಲೇ ಗರಿಷ್ಠ ಮಟ್ಟದಲ್ಲಿ ಇರುವ ಹಣದುಬ್ಬರದ ಮೇಲೆ ಇನ್ನಷ್ಟು ಹೊರೆ ಬೀಳಲಿದೆ.ಅಗತ್ಯ ವಸ್ತುಗಳ ಬೆಲೆಗಳೂ ತುಟ್ಟಿಯಾಗಲಿವೆ. ದೇಶಿ ಉದ್ದಿಮೆ ಸಂಸ್ಥೆಗಳ ಲಾಭದ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ಸ್ಥಳೀಯ ಮಾರುಕಟ್ಟೆಯಲ್ಲಿನ ದುಬಾರಿ ಬಡ್ಡಿ ದರಗಳಿಂದಾಗಿ ಸಾಗರೋತ್ತರ ಮೂಲಗಳಿಂದ ಅಗ್ಗದ ದರಕ್ಕೆ 21 ಶತಕೋಟಿ ಡಾಲರ್‌ಗಳಷ್ಟು (1,05,000 ಕೋಟಿ ರೂಪಾಯಿ) ಸಾಲ ಪಡೆದ ಸಂಸ್ಥೆಗಳು ಈಗ ಸಂಕಷ್ಟಕ್ಕೆ ಗುರಿಯಾಗಿವೆ. ವಿದೇಶಿ ಕರೆನ್ಸಿಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಮೂಲಕ `ಆರ್‌ಬಿಐ~ ವಿದೇಶಿ ವಿನಿಮಯ ದರ ನಿಯಂತ್ರಿಸಬಹುದಾಗಿದ್ದರೂ ತಟಸ್ಥ ಧೋರಣೆ ತಳೆದಿರುವುದು ಅರ್ಥವಾಗದು. ರೂಪಾಯಿ ಬೆಂಬಲಕ್ಕೆ ನಿಲ್ಲಬೇಕಾದ ಕೇಂದ್ರೀಯ ಬ್ಯಾಂಕ್,ತನಗೆ ಸಂಬಂಧವೇ ಇಲ್ಲದಂತೆ ದೂರವೇ ನಿಂತಿರುವುದು ಪ್ರಶ್ನಾರ್ಹ. ಮಾರುಕಟ್ಟೆ ಶಕ್ತಿಗಳೇ ವಿನಿಮಯ ದರ ನಿರ್ಧರಿಸುತ್ತವೆ. ರೂಪಾಯಿ ಮೌಲ್ಯ ಕುಸಿತ ತಡೆಯುವಲ್ಲಿ `ಆರ್‌ಬಿಐ~ಗೆ ಸೀಮಿತ ಅಧಿಕಾರ ಇದೆ ಎಂದು ಹಣಕಾಸು ಇಲಾಖೆಯೇ ಫರ್ಮಾನು ಹೊರಡಿಸುತ್ತಿರುವುದು ಅಚ್ಚರಿ ಮೂಡಿಸಿದೆ. ವಿದೇಶಿ ವಿನಿಮಯದ ಬೃಹತ್ ಮೊತ್ತವನ್ನು ತನ್ನ ಬಳಿ ಇರಿಸಿಕೊಂಡಿರುವ `ಆರ್‌ಬಿಐ~, ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸಿ ಬಿಕ್ಕಟ್ಟಿನ ತೀವ್ರತೆ ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಉದ್ದಿಮೆ ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದಲಾದರೂ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವುದನ್ನು ತಡೆಯಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.