ಎಂಇಎಸ್ ಕರಾಳ ವರ್ತನೆ ರಾಜ್ಯದ ಅಂಗೀಕೃತ ಆಡಳಿತ ಭಾಷಾ ನೀತಿಯನ್ನು ಸಾರ್ವಜನಿಕವಾಗಿ ವಿರೋಧಿಸಿದ್ದಲ್ಲದೆ ಜನರನ್ನು ಭಾಷೆಯ ಹೆಸರಿನಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಶಾಂತಿ ಭಂಗಕ್ಕೆ ಯತ್ನಿಸಿದ ಪ್ರಕರಣಗಳನ್ನು ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸುತ್ತಿರುವುದು ಸರಿಯಲ್ಲ. ಕರ್ನಾಟಕ ರಾಜ್ಯೋತ್ಸವದ ದಿನ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಬೆಳಗಾವಿ ಮಹಾನಗರದ ಪ್ರಥಮ ಪ್ರಜೆಯಾದ ಮೇಯರ್ ಅದರಲ್ಲಿ ಪಾಲುಗೊಳ್ಳದೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟಿಸಿದ್ದ `ಕರಾಳ ದಿನ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚೋದನಾತ್ಮಕ ಭಾಷಣ ಮಾಡಿದ್ದರ ಕುರಿತಾಗಿ ಮೂರು ವಾರಗಳ ನಂತರವೂ ಕ್ರಮ ಕೈಗೊಳ್ಳಲು ಮೀನ ಮೇಷ ಎಣಿಸುತ್ತಿರುವುದು ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಸೂಚಿಸುತ್ತದೆ. ಬೆಳಗಾವಿಯ ಮೇಯರ್ ಮತ್ತು ಉಪಮೇಯರ್ ಅವರು `ಕರಾಳ ದಿನ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ವಿರೋಧಿ ನಿಲುವನ್ನು ಪ್ರದರ್ಶಿಸಿದ್ದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಮಹಾನಗರಪಾಲಿಕೆಯ 18 ಸದಸ್ಯರು ಸಾಮೂಹಿಕ ರಾಜೀನಾಮೆಯ ಮೂಲಕ ಒತ್ತಡ ತರುವಂಥ ಪರಿಸ್ಥಿತಿ ಉಂಟಾಗಿರುವುದಕ್ಕೂ ಸರ್ಕಾರದ ನಿರಾಸಕ್ತಿಯೇ ಕಾರಣ. ಕನ್ನಡ- ಮರಾಠಿ ಭಾಷಿಕರ ಮಧ್ಯೆ ವಿರಸ ಮೂಡಿಸಲು ಇಂಥ ಪ್ರಕರಣಗಳನ್ನು ಸೃಷ್ಟಿಸುತ್ತ ಜನಪ್ರತಿನಿಧಿಗಳಾಗಿ ತಮ್ಮ ಕರ್ತವ್ಯ ನಿರ್ಲಕ್ಷಿಸುತ್ತಿರುವ ಎಂಇಎಸ್‌ನ ರಾಜಕೀಯ ಪುಂಡಾಟಿಕೆಯನ್ನು ಸಮರ್ಥವಾಗಿ ಕಾನೂನು ಪ್ರಕಾರ ನಿಗ್ರಹಿಸಲು ರಾಜ್ಯ ಸರ್ಕಾರ ಮನಸ್ಸು ಮಾಡದಿರುವುದೇ ಇಂಥ ಘಟನೆಗಳಿಗೆ ಕಾರಣ. ಸ್ಥಳೀಯ ಸಂಸ್ಥೆಯಾಗಿ ಬೆಳಗಾವಿ ಮಹಾನಗರಪಾಲಿಕೆಗೆ ನಾಗರಿಕರಿಗೆ ಅತ್ಯವಶ್ಯಕ ಮೂಲಸೌಕರ್ಯಗಳನ್ನು ಒದಗಿಸುವ ಪ್ರಾಥಮಿಕ ಹೊಣೆಗಾರಿಕೆ. ಆದರೆ `ಬೆಳಗಾವಿಯನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಬೇಕು~ ಎಂಬಂಥ ರಾಜಕೀಯ ಸಂಗತಿಗಳನ್ನೇ ಅಲ್ಲಿ ಅಧಿಕಾರಕ್ಕೆ ಬಂದ ಮರಾಠಿ ಭಾಷಿಕ ಪ್ರತಿನಿಧಿಗಳು ಮುಂದೆ ಮಾಡುತ್ತ ತಮ್ಮ ರಾಜಕೀಯ ನಡೆಸುತ್ತ್ದ್ದಿದುದು ಇದುವರೆಗಿನ ವಿದ್ಯಮಾನ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಈಗಾಗಲೇ ಇತ್ಯರ್ಥವಾಗಿರುವ ಸಂಗತಿ. ಇದನ್ನು ಸ್ಥಳೀಯ ಮರಾಠಿಗರೂ ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಲಕ್ಷಿಸಿ ಎಂಇಎಸ್ ನಡೆಸುತ್ತಿದ್ದ ರಾಜಕೀಯವನ್ನು ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ಮರಾಠಿಗರು ಅರ್ಥ ಮಾಡಿಕೊಂಡಿದ್ದಾರೆ. ಅವರು ಕನ್ನಡಿಗರೊಂದಿಗೆ ಸಾಮರಸ್ಯದಿಂದ ಇರುವುದರಿಂದಲೇ ಈಚಿನ ವರ್ಷಗಳಲ್ಲಿ ಎಂಇಎಸ್ ರಾಜಕೀಯ ಪ್ರಾಬಲ್ಯ ಕುಸಿದಿದೆ. ಅದನ್ನು ಮತ್ತೆ ಗಳಿಸಲು, ಹೀಗೆ, ಜನತೆಯನ್ನು ಭಾಷೆಯ ಹೆಸರಿನಲ್ಲಿ ಭಾವನಾತ್ಮಕವಾಗಿ ಪ್ರಚೋದಿಸುವ ಕಸರತ್ತನ್ನು ಎಂಇಎಸ್ ನಡೆಸುತ್ತಿದೆ. ಸ್ಥಳೀಯ ಸಂಸ್ಥೆಯಾಗಿರುವ ಮಹಾನಗರಪಾಲಿಕೆ ಕರ್ನಾಟಕ ಪುರಸಭೆ ಕಾಯ್ದೆ ಅನ್ವಯ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪಾಲಿಕೆ ಆಡಳಿತ ರಾಜ್ಯದ ಕಾನೂನಿಗೆ ಅನುಗುಣವಾಗಿ ನಡೆಯುತ್ತಿದೆಯೇ ಎಂಬುದನ್ನು ಸರ್ಕಾರ ಕಾಲಕಾಲಕ್ಕೆ ಪರಿಶೀಲಿಸಬೇಕು. ಆಡಳಿತ ಲೋಪ ಗಳಿದ್ದರೆ ಅವನ್ನು ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಬೇಕು. ಗಂಭೀರ ಸ್ವರೂಪದ ಉಲ್ಲಂಘನೆ ನಡೆದ ಪ್ರಕರಣಗಳಿದ್ದರೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇದರಲ್ಲಿ ರಾಜಕೀಯ ಲಾಭದ ಸಂಕುಚಿತ ದೃಷ್ಟಿ ಸಲ್ಲದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.