ಪ್ರಯೋಗಶೀಲತೆ ನಿರಂತರವಾಗಿರಲಿ ಸಾಂಸ್ಕೃತಿಕ ನಗರ ಧಾರವಾಡದಲ್ಲಿ ಮೂರು ದಿನ ನಡೆದ `ಧಾರವಾಡ ಸಾಹಿತ್ಯ ಸಂಭ್ರಮ' ಸೃಜನಾತ್ಮಕ ಅನುಭೂತಿ ಹಾಗೂ ಬೌದ್ಧಿಕ ವಿಚಾರಮಂಥನಗಳಿಗೆ ವೇದಿಕೆಯಾದದ್ದು ವಿಶಿಷ್ಟ. ಸಾಹಿತ್ಯ ಸಮ್ಮೇಳನಗಳು ಹಾಗೂ ವಿಚಾರಸಂಕಿರಣಗಳ ಮಾದರಿಗಳಿಗಿಂತ ಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳ ಆಯೋಜನೆ ಸಾಹಿತ್ಯಾಸಕ್ತರಿಗೆ ನೀಡಿದ ಅನುಭವ ಅನನ್ಯವಾದದ್ದು. ಮಾಮೂಲಿ ಭಾಷಣಗಳಿಗಿಂತ ಓದು, ಸಂಭಾಷಣೆ, ಸಂವಾದ, ಚರ್ಚೆ, ಪ್ರಶ್ನೋತ್ತರಗಳ ವಿಧಾನಗಳು ಹೊಸ ಪ್ರಯೋಗಗಳಾಗಿ ಜನರನ್ನು ಆಕರ್ಷಿಸಿದ್ದು ಕನ್ನಡ ಸಾರಸ್ವತಲೋಕದಲ್ಲಿ ಹೊಸ ಮೈಲಿಗಲ್ಲು. `ಹಳಗನ್ನಡ ಕಾವ್ಯವಾಚನ'ದಿಂದ ಹಿಡಿದು `ಸಾಹಿತ್ಯ ಕೃತಿಯಿಂದ ಸಿನಿಮಾ'ದವರೆಗೆ ವಸ್ತು ಹರಹು ಇತ್ತು. ಜೈಪುರ ಸಾಹಿತ್ಯ ಉತ್ಸವದಿಂದ ಪ್ರೇರಣೆ ಪಡೆದು ಸಂಘಟಿಸಲಾದ ಈ `ಸಂಭ್ರಮ', ಆರಂಭಕ್ಕೆ ಮೊದಲೇ ಹಲವು ನೆಲೆಗಳಲ್ಲಿ ಕನ್ನಡ ಸಾಹಿತ್ಯಲೋಕದಲ್ಲಿ ಪ್ರತಿರೋಧ, ಟೀಕೆ, ಚರ್ಚೆಗಳನ್ನು ಹುಟ್ಟುಹಾಕಿತು. ಜೈಪುರ ಸಾಹಿತ್ಯ ಉತ್ಸವದ ನಿಬಂಧನೆಗಳ ಕುರುಡು ಅನುಕರಣೆಯಲ್ಲಿ ರೂಪಿಸಲಾಗಿದ್ದ ನಿಬಂಧನೆಗಳು ಹಾಗೂ ಪ್ರತಿನಿಧಿ ಶುಲ್ಕಕ್ಕೆ ವ್ಯಕ್ತವಾದ ಪ್ರತಿಭಟನೆಯಿಂದಾಗಿ ಸಂಘಟಕರು ನಿಬಂಧನೆಗಳನ್ನು ಹಿಂತೆಗೆದುಕೊಂಡು ಪ್ರವೇಶವನ್ನು ಮುಕ್ತಗೊಳಿಸಿದಂತಹ ವಿದ್ಯಮಾನವೂ ಸಂಭವಿಸಿತು. ಶ್ರೇಷ್ಠತೆಯ ವ್ಯಸನ, ನವ್ಯ ಆಂದೋಲನದ ಪುನರುತ್ಥಾನ, ಸಾಹಿತ್ಯದ ಕಾರ್ಪೊರೇಟೀಕರಣ, ಸಾಹಿತ್ಯದ ಅಗ್ರಹಾರೀಕರಣ ಎಂಬೆಲ್ಲಾ ನೆಲೆಗಳಲ್ಲಿ ಟೀಕೆಗಳು ವ್ಯಕ್ತವಾದವು. ಜೊತೆಗೆ `ಜನತೆಯೆಡೆಗೆ ಸಾಹಿತ್ಯ' ಎಂಬ ಸಮಾವೇಶದ ಆಯೋಜನೆಗೂ `ಧಾರವಾಡ ಸಾಹಿತ್ಯ ಸಂಭ್ರಮ' ಈಗ ಪ್ರೇರಕವಾಗಿದೆ. ಲಾಗಾಯ್ತಿನಿಂದಲೂ ಕನ್ನಡ ಸಾಹಿತ್ಯಲೋಕದಲ್ಲಿ ವಾಗ್ವಾದಗಳು ನಡೆದುಕೊಂಡೇ ಬಂದಿರುವುದನ್ನು ಮರೆಯಲಾಗದು. ಇಂತಹ ವಾಗ್ವಾದಗಳು ಕನ್ನಡ ಸಾಹಿತ್ಯ ಸಂವೇದನೆಗಳನ್ನು ವಿಸ್ತರಿಸಿವೆ. ಆ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಿಕೆಯೂ ಹೆಚ್ಚಿದೆ. ವರ್ತಮಾನದ ಕಾಲ ಸಂಕೀರ್ಣವಾದದ್ದು. ನಮ್ಮ ಬದುಕನ್ನು ಆವರಿಸಿಕೊಳ್ಳುತ್ತಿರುವ ಜಾಗತೀಕರಣ ಹಾಗೂ ತಂತ್ರಜ್ಞಾನದ ಆವಿಷ್ಕಾರಗಳು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಬದುಕುಗಳಲ್ಲಿ ಅಪಾರ ಪಲ್ಲಟಗಳನ್ನು ಉಂಟು ಮಾಡುತ್ತಿವೆ. ಈ ಪಲ್ಲಟಗಳು, ಪಲ್ಲಟಗಳು ತರುವ ತಲ್ಲಣಗಳು, ಸ್ಥಳೀಯ ಅಸ್ಮಿತೆಯ ನಾಶ, ಕಾರ್ಪೊರೇಟ್ ಅನುಭವಗಳು ಸೃಷ್ಟಿಸುವ ಪ್ರಶ್ನೆಗಳಿಗೆಲ್ಲಾ ಕನ್ನಡಸಾಹಿತ್ಯಲೋಕ ಮುಖಾಮುಖಿಯಾಗಬೇಕಿರುವ ಸಂದರ್ಭ ಇದು. ಸ್ಥಳೀಯ ಸಂಸ್ಕೃತಿಗಳಲ್ಲಿರುವ ಚೈತನ್ಯದಾಯಕ ಸೆಲೆಗಳನ್ನು ಗುರುತಿಸಿಕೊಂಡು, ಸಂಕುಚಿತ ದೃಷ್ಟಿಕೋನಗಳನ್ನು ಪ್ರಜ್ಞಾಪೂರ್ವಕವಾಗಿ ಮೀರಿ ಪೋಷಿಸುವುದು ಜಾಗತೀಕರಣದ ಜೊತೆ ಹೆಜ್ಜೆ ಹಾಕುತ್ತಿರುವ ಇಂದಿನ ಸಂದರ್ಭದಲ್ಲಿ ಅತ್ಯಗತ್ಯ. ವರ್ತಮಾನದ ಈ ಸಂಕ್ರಮಣಘಟ್ಟಕ್ಕೆ ಕಣ್ಣುಮುಚ್ಚಿಕೊಳ್ಳುವುದು ಸರಿಯಲ್ಲ. ಸ್ಥಳೀಯ ಮಟ್ಟಗಳಲ್ಲಿ ನಡೆಯುವ ಜಿಲ್ಲೆ, ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಿಂದ ಹಿಡಿದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳವರೆಗೆ ಅವುಗಳದೇ ಅನನ್ಯತೆ, ಮಹತ್ವ ಇದ್ದೇ ಇದೆ. ಅವುಗಳ ಸಾಂಸ್ಕೃತಿಕ ಮಹತ್ವ ಹಾಗೂ ಸ್ಥಾನಮಾನಗಳನ್ನು ಅಲ್ಲಗಳೆಯುವುದು ಸಾಧ್ಯವೇ ಇಲ್ಲ. ಹೀಗಾಗಿ ಯಾವೊಂದು ಸಮ್ಮೇಳನವೂ ಮತ್ತೊಂದಕ್ಕೆ ಪರ್ಯಾಯ ಎಂದು ಭಾವಿಸಬೇಕಾದ ಅಗತ್ಯ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಸಮ್ಮೇಳನವೂ ಪರಿಪೂರ್ಣವಾಗಿರುವುದು ಸಾಧ್ಯವಿಲ್ಲ. ಅದರದೇ ಕುಂದುಕೊರತೆ, ಮಿತಿಗಳು ಇದ್ದೇ ಇರುತ್ತವೆ. ಇದೇ ಆದರ್ಶ, ಮಾದರಿ ಎಂದು ಹೇಳುವುದೇ ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಭಿನ್ನಾಭಿಪ್ರಾಯಗಳು, ವಿಭಿನ್ನ ವೈಚಾರಿಕ ನಿಲುವುಗಳು ಹೇರಿಕೆಗಳಾಗದೆ, ಮಂಥನಗಳಾಗಿ ಹೊಸ ಹೊಳಹುಗಳು ಹುಟ್ಟುವುದು ಮುಖ್ಯ. ಈ ದಿಕ್ಕಿನಲ್ಲಿ ನಿರಂತರ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಮೂಲಕ ಸಾಹಿತ್ಯ ಸಮಾವೇಶಗಳು ಕನ್ನಡ ಸಾಂಸ್ಕೃತಿಕಲೋಕವನ್ನು ಸತ್ವಪೂರ್ಣಗೊಳಿಸುವುದು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.