ಜವಾಬ್ದಾರಿಯಿಂದ ವರ್ತಿಸಿ ಅಣ್ಣಾ ಹಜಾರೆ ಚಳವಳಿ `ದೇಶದ ಸಂಸದೀಯ ವ್ಯವಸ್ಥೆಗೆ ಹಾನಿ ಮಾಡುತ್ತಿದೆ~ ಎಂದು ನಮ್ಮ ಸಂಸದರು ಈಗಲೂ ಆರೋಪಿ ಸುತ್ತಿದ್ದಾರೆ. ಆದರೆ ಅವರು ಮಾಡುತ್ತಿರುವುದು ಏನು? ಸಂಸತ್‌ನ ಚಳಿಗಾಲದ ಅಧಿವೇಶನದ ಮೊದಲ ಎರಡು ದಿನ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಕಾದಾಟಕ್ಕೆ ಬಲಿಯಾಗಿದೆ. ಸಾಮಾನ್ಯ ಸ್ಥಿತಿಯಲ್ಲಿ ಎರಡೂ ಸದನಗಳಲ್ಲಿ ದಿನಕ್ಕೆ ತಲಾ ಐದು ಗಂಟೆಗಳ ಕಾಲ ಕಲಾಪ ನಡೆಯಬೇಕು. ಕಳೆದೆರಡು ದಿನಗಳಲ್ಲಿ ದಿನಕ್ಕೆ ಒಂದು ಗಂಟೆ ಕಾಲ ಕಲಾಪ ಕೂಡಾ ನಡೆದಿಲ್ಲ. ಒಂದು ಗಂಟೆಯ ಕಲಾಪಕ್ಕೆ ವ್ಯಯವಾಗುವ ತೆರಿಗೆದಾರರ ಹಣ ಅಂದಾಜು 25 ಲಕ್ಷ ರೂಪಾಯಿ. ಈ ಲೆಕ್ಕದಲ್ಲಿ ಈಗಾಗಲೇ ಕನಿಷ್ಠ ಎರಡು ಕೋಟಿ ರೂಪಾಯಿ ನಷ್ಟವಾಗಿದೆ. ಆರ್ಥಿಕ ನಷ್ಟದ ಜತೆಯಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ಕಾನೂನು ರಚನೆಗೆ ವ್ಯಯವಾಗಬೇಕಾಗಿದ್ದ ಅಮೂಲ್ಯ ಸಮಯ ಪೋಲಾಗಿದೆ. ಲೋಕಪಾಲರ ನೇಮಕ, ನ್ಯಾಯಾಂಗ ಗುಣಮಟ್ಟ ಮತ್ತು ಉತ್ತರದಾಯಿತ್ವ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಮತ್ತು ಬಿತ್ತನೆ ಬೀಜ ಸೇರಿದಂತೆ 31 ಮಸೂದೆಗಳು ಸ್ಥಾಯಿಸಮಿತಿಯಲ್ಲಿ ಚರ್ಚೆಯಾಗಿ ಮಂಜೂರಾತಿಗಾಗಿ ಸಂಸತ್‌ನ ಮುಂದಿವೆ. ರಾಷ್ಟ್ರೀಯ ಆಹಾರ ಭದ್ರತೆ, ಅಕ್ರಮ ಹಣ ಹೂಡಿಕೆ, ಬಳಕೆದಾರರ ರಕ್ಷಣೆ, ಗಣಿ ಮತ್ತು ಖನಿಜ ಅಭಿವೃದ್ಧಿ ಹಾಗೂ ನಿಯಂತ್ರಣ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸೇರಿದಂತೆ 23 ಮಸೂದೆಗಳು ಸಂಸತ್‌ನಲ್ಲಿ ಮಂಡನೆಗಾಗಿ ಕಾದಿವೆ. ಇವುಗಳ್ಯಾವುದರ ಪರಿವೆಯೇ ಇಲ್ಲದವರಂತೆ ನಮ್ಮ ಬೇಜವಾಬ್ದಾರಿ ಜನಪ್ರತಿನಿಧಿಗಳು ವೈಯಕ್ತಿಕ ಪ್ರತಿಷ್ಠೆಯ ಕ್ಷುಲ್ಲಕ ರಾಜ ಕೀಯಕ್ಕೆ ಸಂಸತ್ ಸದನಗಳನ್ನು ಅಖಾಡ ಮಾಡಿರುವುದು ಜನದ್ರೋಹದ ಕೆಲಸ. 2ಜಿ ತರಂಗಾಂತರ ಹಗರಣದಲ್ಲಿ ಗೃಹಸಚಿವ ಪಿ.ಚಿದಂಬರಮ್ ಪಾತ್ರವೂ ಇರುವುದರಿಂದ ಅವರು ರಾಜೀನಾಮೆ ನೀಡುವವರೆಗೆ ಸದನದಲ್ಲಿ ಅವರನ್ನು ಬಹಿಷ್ಕರಿಸುವುದಾಗಿ ಬಿಜೆಪಿ ಪಟ್ಟು ಹಿಡಿದಿದೆ. ಹಗರಣದ ಆರೋಪ ಪಟ್ಟಿಯಲ್ಲಿ ಇಲ್ಲಿಯವರೆಗೆ ಚಿದಂಬರಮ್ ಹೆಸರು ಸೇರಿಲ್ಲ. ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಕೂಡಾ ಈ ಬಗ್ಗೆ ಅಭಿಪ್ರಾಯ ಕಾದಿರಿಸಿದೆ. ಈ ಹಿನ್ನೆಲೆಯಲ್ಲಿ ಬಹಿಷ್ಕಾರದ ಕ್ರಮಕ್ಕೆ ಯಾವ ಸಮರ್ಥನೆಯೂ ಇಲ್ಲ. ಚಿದಂಬರಮ್ ಮೇಲಿನ ಆರೋಪದ ಬಗ್ಗೆ ಬಿಜೆಪಿಗೆ ಅಷ್ಟೊಂದು ನಂಬಿಕೆ ಇದ್ದರೆ ಸದನದಲ್ಲಿ ಚರ್ಚಿಸಿ ನಿಜಸಂಗತಿಯನ್ನು ದೇಶದ ಮುಂದೆ ಬಯಲು ಮಾಡಲಿ. ಇದೇ ವೇಳೆ, ಬೆಲೆ ಏರಿಕೆ ಮತ್ತು ಕಪ್ಪುಹಣದ ಬಗ್ಗೆ ಚರ್ಚೆಗಾಗಿ ಕ್ರಮವಾಗಿ ಎಡಪಕ್ಷಗಳು ಮತ್ತು ಬಿಜೆಪಿ ಸಲ್ಲಿಸಿರುವ ನಿಲುವಳಿ ಸೂಚನೆಯ ಕೋರಿಕೆಯನ್ನು ಯುಪಿಎ ವಿರೋಧಿಸುತ್ತಿರುವುದು ಕೂಡಾ ಪಲಾಯನವಾದದಂತೆಯೇ ಕಾಣುತ್ತಿದೆ. ಈ ಎರಡು ವಿಷಯಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆದರೆ ಮಾತ್ರ ಸರ್ಕಾರ ಆಡುತ್ತಾ ಬಂದಿರುವ ಬೊಗಳೆ ಮಾತುಗಳ ಹಿಂದಿನ ನಿಜಸಂಗತಿ ಏನೆಂಬುದು ದೇಶಕ್ಕೆ ಗೊತ್ತಾಗಲು ಸಾಧ್ಯ. ಇದು ಸಾಧ್ಯವಾಗಬೇಕಾದರೆ ವಿರೋಧಪಕ್ಷಗಳು ಬಹಿಷ್ಕಾರದಂತಹ ಕ್ರಮವನ್ನು ಕೈಬಿಟ್ಟು ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು. ಇದಕ್ಕಾಗಿ ಆಡಳಿತ ಪಕ್ಷ ಸ್ವಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಮಾತುಕತೆಯ ಮೂಲಕ ವಿರೋಧಪಕ್ಷಗಳ ಮನವೊಲಿಸಬೇಕು. ಅವುಗಳು ಬಯಸುವ ರೀತಿಯ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.