ಚುನಾವಣೆ ಅಕ್ರಮ: ಶಿಕ್ಷೆಯ ಭಯವಿಲ್ಲ ಬಳ್ಳಾರಿ ಗ್ರಾಮಾಂತರ ವಿಧಾನ ಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿ ಅಬ್ಬರದ ಪ್ರಚಾರ ಕಾರ್ಯ ನಡೆದಿದೆ. ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವಂತಾಗಲು ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ, ಅದರ ಉಲ್ಲಂಘನೆ ರಾಜಾರೋಷಾಗಿ ನಡೆದಿದೆ. ನಗದು ಹಣ ಸಾಗಾಣಿಕೆ ಪತ್ತೆಯಾಗಿದೆ. ಪ್ರಚಾರಕ್ಕಾಗಿ ದೇವಸ್ಥಾನ ಮತ್ತು ಧಾರ್ಮಿಕ ಸ್ಥಳಗಳ ದುರುಪಯೋಗ ನಡೆದಿದೆ. ಈ ಸಂಬಂಧ ಪಕ್ಷವೊಂದರ ಅಧ್ಯಕ್ಷರು ಮತ್ತು ಒಬ್ಬ ಸಚಿವರಿಗೆ ಚುನಾವಣಾ ಅಧಿಕಾರಿ ನೊಟೀಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದ್ದಾರೆ. ಇದು ಸಹಜ ಪ್ರಕ್ರಿಯೆ. ಚುನಾವಣಾ ಅಧಿಕಾರಿ ನೀಡಿದ ನೊಟೀಸ್‌ಗೆ ಉತ್ತರ ಕೊಡಲಾಗಿದೆಯೇ ಅಥವಾ ಅದನ್ನು ನಿರ್ಲಕ್ಷಿಸಲಾಗಿದೆಯೇ ಎನ್ನುವುದು ನಂತರ ಯಾರ ಗಮನಕ್ಕೂ ಬರುವುದಿಲ್ಲ. ಸರ್ಕಾರ, ಅಧಿಕಾರಿಗಳು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸುವುದು ಹೊಸದಲ್ಲ. ಹಿಂದೆಲ್ಲ ಆಗಿದೆ. ಈಗಲೂ ಆಗುತ್ತಿದೆ. ಆದರೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಯಾರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಂಡದ್ದು ಮಾತ್ರ ಬೆಳಕಿಗೆ ಬರುತ್ತಿಲ್ಲ. ಹೀಗಾಗಿ ಪ್ರತಿಯೊಂದು ಚುನಾವಣೆಗಳಲ್ಲೂ ನೀತಿ ಸಂಹಿತೆ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೆ ಈ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ ಎನ್ನುವ ಅಭಿಪ್ರಾಯಕ್ಕೆ ಜನರು ಬರುವಂತಾಗಿದೆ. ಚುನಾವಣೆ ಘೋಷಣೆ ಆದ ಬಳಿಕ ಸರ್ಕಾರ ಯಾವುದೇ ಹೊಸ ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ. ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ ಎನ್ನುವುದು ಸೇರಿದಂತೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೂ ಅನ್ವಯವಾಗುವಂತೆ ಹಲವು ಸಂಹಿತೆಗಳನ್ನು ಚುನಾವಣಾ ಆಯೋಗ ಪ್ರಕಟಿಸುತ್ತದೆ. ಟಿ.ಎನ್. ಶೇಷನ್ ಚುನಾವಣಾ ಆಯೋಗದ ಅಧ್ಯಕ್ಷರಾದ ಬಳಿಕ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು, ಭ್ರಷ್ಟಾಚಾರ ಮತ್ತು ವಾಮಮಾರ್ಗ ಹಿಡಿಯುವ ಕೃತ್ಯಗಳಿಗೆ ಕಡಿವಾಣ ಹಾಕಿದ್ದು ಶ್ಲಾಘನೀಯ. ಅವರ ಅಧಿಕಾರಾವಧಿ ಮುಗಿದ ನಂತರವೂ ಚುನಾವಣಾ ಆಯೋಗ ಹಲವು ಕಠಿಣ ಕ್ರಮಗಳನ್ನು ಮುಂದುವರಿಸಿಕೊಂಡು ಬಂದಿರುವುದು ಮೆಚ್ಚುವ ಸಂಗತಿ. ಆದರೂ, ಪ್ರತಿಯೊಂದು ಚುನಾವಣೆಯಲ್ಲೂ ನೀತಿ ಸಂಹಿತೆಯ ಉಲ್ಲಂಘನೆ ಯಾವ ಎಗ್ಗಿಲ್ಲದೆ ನಡೆಯುವುದು ಮುಂದುವರಿದಿದೆ. ಮತದಾರರಿಗೆ ಹಣ ಮತ್ತು ಉಡುಗೊರೆಗಳನ್ನು ಕೊಡುವ ಮೂಲಕ ಅವರನ್ನು ಭ್ರಷ್ಟಗೊಳಿಸುವ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಏನೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದರೂ ಫಟಿಂಗ ರಾಜಕಾರಣಿಗಳು ಕಳ್ಳದಾರಿ ಕಂಡು ಹಿಡಿದು ಚುನಾವಣಾ ಅಕ್ರಮಗಳಲ್ಲಿ ಮೇಲುಗೈ ಸಾಧಿಸುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಒಂದೇ ಒಂದು ಗುರಿ ಅವರದು. ಹೀಗಾಗಿ ಚುನಾವಣೆಯ ಪಾವಿತ್ರ್ಯವೇ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಅಕ್ರಮಗಳನ್ನು ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ಕ್ರಮಕೈಗೊಳ್ಳಲು ಹಿಂದೇಟು ಹಾಕಬಾರದು. ಅಕ್ರಮಗಳನ್ನು ಮಾಡಿದವರ ವಿರುದ್ಧ ಏನೇನು ಕ್ರಮಕೈಗೊಳ್ಳಲಾಗಿದೆ ಎನ್ನುವುದನ್ನು ಚುನಾವಣಾ ಆಯೋಗ ಸಾರ್ವಜನಿಕರಿಗೆ ಬಹಿರಂಗಪಡಿಸುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.