ಸರಣಿ ನಿರ್ಲಕ್ಷ್ಯ ಜಾರ್ಖಂಡ್‌ನ ಗಿರಿಧ್ ಜಿಲ್ಲೆಯಲ್ಲಿ ಹೌರಾ-ಡೆಹರಾಡೂನ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ತಗಲಿ ಏಳು ಪ್ರಯಾಣಿಕರು ಸಜೀವ ದಹನವಾದ ಮರುದಿನವೇ ಶ್ರಿನಗರ ಮತ್ತು ಒಡಿಶಾದಲ್ಲಿ ಎರಡು ರೈಲು ಅಪಘಾತಗಳು ನಡೆದಿವೆ. 2011 ಒಂದು ರೀತಿಯಲ್ಲಿ ಸರಣಿ ಅಪಘಾತಗಳ ವರ್ಷ. ಕಳೆದ ಜುಲೈನಿಂದ ಇಲ್ಲಿಯವರೆಗೆ ರೈಲು ಹಳಿ ತಪ್ಪಿದ ಮೂರು ದುರ್ಘಟನೆಗಳು ಮತ್ತು ಮುಖಾಮುಖಿ ಡಿಕ್ಕಿ ಹೊಡೆದು ಐದು ಅಪಘಾತಗಳು ನಡೆದಿವೆ. ಈ ಅಪಘಾತಗಳಲ್ಲಿ ಸುಮಾರು 130 ಮಂದಿ ಸಾವಿಗೀಡಾಗಿದ್ದಾರೆ. ಸುರಕ್ಷಿತ ಪ್ರಯಾಣದ ರೈಲು ಅಪಘಾತಗಳಿಗೆ ಮಾನವ ನಿರ್ಲಕ್ಷ್ಯ, ತಾಂತ್ರಿಕ ದೋಷ ಮತ್ತು ದುಷ್ಕೃತ್ಯ ಕಾರಣವಾಗಿರುತ್ತವೆ. ಈ ಮೂರೂ ಕಾರಣಗಳು ಅನಿರೀಕ್ಷಿತವಲ್ಲ. ಆದರೆ ಇವುಗಳನ್ನು ತಡೆಯುವ ಯಾವ ಪ್ರಯತ್ನವೂ ಯಶಸ್ವಿ ಆಗಿಲ್ಲ. ರೈಲ್ವೆ ಇಲಾಖೆಗೆ ಸುರಕ್ಷತೆ ಎಂದೂ ಆದ್ಯತೆಯ ವಿಷಯವಾಗದೆ ಇರುವುದೂ ಇದಕ್ಕೆ ಕಾರಣ. ಕಳೆದ ಆರು ಬಜೆಟ್‌ಗಳಲ್ಲಿ ರೈಲ್ವೆ ಇಲಾಖೆ ಪ್ರಯಾಣ ದರವನ್ನು ಹೆಚ್ಚಿಸದಿರುವ ಕಾರಣ ನಿರೀಕ್ಷಿತ ರೀತಿಯಲ್ಲಿ ರೈಲು ಮಾರ್ಗಗಳ ವಿಸ್ತರಣೆ ಮತ್ತು ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನುವುದು ನಿಜ. ಆದರೆ ಸುರಕ್ಷತೆಗಾಗಿ ಹಣಕಾಸಿನ ಕೊರತೆ ಇದ್ದಂತಿಲ್ಲ. ಹತ್ತು ಮತ್ತು ಹನ್ನೊಂದನೇ ಯೋಜನೆಗಳಲ್ಲಿ ರೈಲ್ವೆ ಸುರಕ್ಷತೆಗಾಗಿ ಸಾಕಷ್ಟು ಹಣ ನೀಡಲಾಗಿದೆ. ಆದರೆ ಅದನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಲು ರೈಲ್ವೆ ಇಲಾಖೆ ವಿಫಲವಾಗಿದೆ. ಅಮಾಯಕ ಪ್ರಯಾಣಿಕರ ಜೀವದ ಜತೆ ರೈಲ್ವೆ ಇಲಾಖೆ ಮತ್ತೆಮತ್ತೆ ಚೆಲ್ಲಾಟ ನಡೆಸುತ್ತಾ ಬಂದಿದೆ. ಗಿರಿಧ್ ಜಿಲ್ಲೆಯಲ್ಲಿ ನಡೆದಿರುವ ಅಪಘಾತದಲ್ಲಿ ದುಷ್ಕರ್ಮಿಗಳ ಕೈವಾಡ ಶಂಕಿಸಲಾಗಿದೆ. ಮಾವೋವಾದಿಗಳು ಪ್ರಯಾಣಿಕರ ರೈಲುಗಳನ್ನೇ ಗುರಿಯಾಗಿಟ್ಟುಕೊಂಡಿರುವುದು ರೈಲ್ವೆ ಇಲಾಖೆಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಹೀಗಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ವಿಫಲವಾಗಿದೆ. ರೈಲ್ವೆ ಇಲಾಖೆಗೆ ಪ್ರತ್ಯೇಕವಾದ ಪೊಲೀಸ್ ವಿಭಾಗ ಇದೆ. ದೂರದ ಊರಿನ ಪ್ರಯಾಣದ ರೈಲಿನಲ್ಲಿ ಒಂದಿಬ್ಬರು ಪೊಲೀಸರು ಕಾಟಾಚಾರದ ಗಸ್ತು ನಡೆಸುವುದಷ್ಟೇ ಇಲಾಖೆ ಕೆಲಸ ಎಂಬಂತಾಗಿದೆ. ಉಗ್ರಗಾಮಿಗಳ ಬೆದರಿಕೆಯ ಹೊರತಾಗಿಯೂ ಇದನ್ನು ಆಧುನಿಕ ತಂತ್ರಜ್ಞಾನ ಮತ್ತು ಸಂಪರ್ಕ ವ್ಯವಸ್ಥೆಯನ್ನು ಬಳಸಿಕೊಂಡು ಸುಧಾರಣೆಗೊಳಪಡಿಸುವ ಬಗ್ಗೆ ಸರ್ಕಾರ ಗಮನ ನೀಡಿಲ್ಲ. ಇದಕ್ಕೆ ಮುಖ್ಯ ಕಾರಣ ರಾಜಕೀಯ ಇಚ್ಛಾಶಕ್ತಿಯ ಕೊರತೆ. ಕಳೆದ ಹದಿನೈದು ವರ್ಷಗಳ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ರೈಲ್ವೆ ಇಲಾಖೆ ಪ್ರಾದೇಶಿಕ ಪಕ್ಷಗಳ ಕೈಯಲ್ಲಿಯೇ ಇದೆ. ರಾಜ್ಯಮಟ್ಟದಲ್ಲಿ ತಮ್ಮ ಪಕ್ಷದ ನೆಲೆ ಭದ್ರಪಡಿಸಿಕೊಳ್ಳಲು ಇಲಾಖೆಯನ್ನು ಬಳಸಿಕೊಳ್ಳುವುದನ್ನು ಹೊರತುಪಡಿಸಿ ಈ ಪಕ್ಷಗಳಿಗೆ ಸೇರಿದ ಸಚಿವರು ಇಲಾಖೆಯ ಅಭಿವೃದ್ಧಿಗೆ ಕಿಂಚಿತ್ತೂ ಕಾಣಿಕೆ ನೀಡಿಲ್ಲ. ಸದ್ಯ ರೈಲ್ವೆ ಇಲಾಖೆಯ ಸಚಿವರಾಗಿರುವವರು ತೃಣಮೂಲ ಕಾಂಗ್ರೆಸ್‌ಗೆ ಸೇರಿದವರು. ಅವರು ನಾಮ್‌ಕಾವಸ್ತೆ ಸಚಿವರು, ರಿಮೋಟ್ ಕಂಟ್ರೋಲ್ ಮೂಲಕ ಕಾರುಬಾರು ನಡೆಸುತ್ತಿರುವವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ರೈಲ್ವೆ ಇಲಾಖೆಯನ್ನು ಪ್ರಾದೇಶಿಕ ಪಕ್ಷಗಳ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸದೆ ರೈಲ್ವೆ ಇಲಾಖೆಯ ಕಾಯಕಲ್ಪ ಅಸಾಧ್ಯ. ಪ್ರಧಾನಿ ಮನಮೋಹನ್‌ಸಿಂಗ್ ಮೊದಲು ಈ ಕೆಲಸ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.