ಚಿಲ್ಲರೆ ವಲಯಕ್ಕೆ ವಿದೇಶಿ ಹೂಡಿಕೆ ಹಲವು ವರ್ಷಗಳ ಕಾಯುವಿಕೆ ಹಾಗೂ ಹಿಂಜರಿಕೆಗಳ ನಂತರ ಕಡೆಗೂ ಯುಪಿಎ ಸರ್ಕಾರ ಚಿಲ್ಲರೆ ಮಾರುಕಟ್ಟೆ (ರೀಟೇಲ್) ವಲಯವನ್ನು ವಿದೇಶಿ ನೇರ ಹಣಹೂಡಿಕೆಗೆ ಮುಕ್ತವಾಗಿಸಲು ಮುಂದಾಗಿದೆ. ಬಹು ಬ್ರಾಂಡ್‌ನಲ್ಲಿ ಶೇ 51 ಹಾಗೂ ಏಕ ಬ್ರಾಂಡ್‌ನಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳಕ್ಕೆ ( ಎಫ್‌ಡಿಐ) ಅವಕಾಶ ನೀಡುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಪ್ರಧಾನಿಯವರ ಉದಾರೀಕರಣದ ಪ್ರವೃತ್ತಿಯನ್ನು ಗಮನಿಸಿದಲ್ಲಿ ಈ ನಿರ್ಧಾರ ಬಹಳ ಹಿಂದೆಯೇ ಪ್ರಕಟವಾಗಿರಬೇಕಿತ್ತು. ಈಗಲೂ ಈ ನಿರ್ಧಾರಕ್ಕೆ ರಾಜಕೀಯ ವಿರೋಧ ವ್ಯಕ್ವವಾಗಿದೆ. ಯುಪಿಎ ಮಿತ್ರಪಕ್ಷವಾದ ತೃಣಮೂಲ ಕಾಂಗ್ರೆಸ್ ಈಗಾಗಲೇ ವಿರೋಧ ತೋರಿದೆ. ಶಿರೋಮಣಿ ಅಕಾಲಿ ದಳ ಬಿಟ್ಟು ಉಳಿದೆಲ್ಲಾ ಪ್ರತಿಪಕ್ಷಗಳೂ ಪ್ರತಿಭಟಿಸಿವೆ. ಈ ಮಧ್ಯೆ ವ್ಯಾಪಾರಿ ಸಂಘಟನೆಗಳೂ ರಾಷ್ಟ್ರದಾದ್ಯಂತ ಪ್ರತಿಭಟನೆಗೆ ಸಜ್ಜಾಗುತ್ತಿವೆ. ಬಹುಶಃ ಬರಲಿರುವ ದಿನಗಳಲ್ಲಿ ಈ ನಿರ್ಧಾರದಿಂದಾಗುವ ಪ್ರಯೋಜನಗಳನ್ನು ಕುರಿತಂತೆ ಮನಗಾಣಿಸಬೇಕಾದ ವಿವರಣೆಗಳನ್ನು ನೀಡುವ ಸ್ಥಿತಿ ಕೇಂದ್ರ ಸರ್ಕಾರಕ್ಕೆ ಒದಗುವ ಸೂಚನೆ ಇದೆ. ಭಾರತದ ಚಿಲ್ಲರೆ ಮಾರುಕಟ್ಟೆಯ ವಾರ್ಷಿಕ ಮೌಲ್ಯ ಸುಮಾರು 450,000 ಕೋಟಿ ರೂಪಾಯಿ. ಈ ಬೃಹತ್‌ಪೇಟೆಯಲ್ಲಿ ವಿಶ್ವದ ಚಿಲ್ಲರೆ ಮಾರಾಟದ ದೈತ್ಯ ಕಂಪೆನಿಗಳಾದ ವಾಲ್‌ಮಾರ್ಟ್, ಟೆಸ್ಕೊದಂತಹ ಕಂಪೆನಿಗಳು ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಲು ಉತ್ಸುಕವಾಗಿವೆ. ಆದರೆ ಈ ದೈತ್ಯ ಕಂಪೆನಿಗಳ ಕಾರ್ಯಾಚರಣೆಗಳ ಭರಾಟೆಯಲ್ಲಿ ಚಿಲ್ಲರೆ ಮಾರಾಟ ನಡೆಸುವ ಸಣ್ಣ ವ್ಯಾಪಾರಿಗಳು, ಕಿರಾಣಿ ಅಂಗಡಿಗಳು ಕೊಚ್ಚಿಹೋಗಬಹುದೆಂಬ ಭೀತಿ ಸಹಜವಾದುದೆ. ಚಿಲ್ಲರೆ ವಲಯವನ್ನು ಮುಕ್ತಗೊಳಿಸುವುದರಿಂದ ರೈತರು ಹಾಗೂ ಗ್ರಾಹಕರಿಗೆ ಅಪಾರ ಪ್ರಯೋಜನಗಳಾಗಲಿವೆ ಎಂಬುದು ಸರ್ಕಾರದ ವಾದ. ಇದರಿಂದಾಗಿ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ರಾಷ್ಟ್ರದೊಳಗೆ ಅಪಾರ ಪ್ರಮಾಣದ ವಿದೇಶಿ ನೇರ ಹೂಡಿಕೆಯೂ ಲಭ್ಯವಾಗಲಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 40 ಲಕ್ಷ ಹಾಗೂ ಪಟ್ಟಣಗಳ್ಲ್ಲಲ್ಲಿ 50 ರಿಂದ 60 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಭರವಸೆ ಹೊಂದಲಾಗಿದೆ. ಇಷ್ಟಕ್ಕೂ ಈಗಿರುವ ವ್ಯವಸ್ಥೆಯಲ್ಲಿ ರೈತರಿಗೆ ಲಾಭ ಸಿಕ್ಕುತ್ತಿಲ್ಲ ಎಂಬುದು ಕಟು ವಾಸ್ತವ. ವಿಶ್ವಬ್ಯಾಂಕ್ ಅಧ್ಯಯನವೊಂದರ ಪ್ರಕಾರ, ಹಣ್ಣು ಹಾಗೂ ತರಕಾರಿಗೆ ಗ್ರಾಹಕ ನೀಡುವ ಹಣದಲ್ಲಿ ಶೇ 12ರಿಂದ 15ರಷ್ಟು ಮಾತ್ರವೇ ರೈತರಿಗೆ ದಕ್ಕುತ್ತಿದೆ. ಈಗಾಗಲೇ ಚೀನಾ, ಇಂಡೊನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್ ಹಾಗೂ ದಕ್ಷಿಣ ಆಪ್ರಿಕಾದಂತಹ ರಾಷ್ಟ್ರಗಳು ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ 100ರಷ್ಟು ಎಫ್‌ಡಿಐ ನೀತಿಯನ್ನು ಹೊಂದಿದ್ದು ಈ ರಾಷ್ಟ್ರಗಳಲ್ಲಿ ತೀವ್ರತರವಾದ ದುಷ್ಪರಿಣಾಮಗಳೇನೂ ಕಂಡು ಬಂದಿಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಅದೇನೇ ಇರಲಿ, ಈ ನಿರ್ಧಾರದಿಂದ ತೀವ್ರತರ ಸ್ಪರ್ಧೆ ಏರ್ಪಡುತ್ತಿದ್ದು ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳು ಸೃಷ್ಟಿಯಾಗುವುದನ್ನು ಅಲ್ಲಗಳೆಯಲಾಗದು. ಗ್ರಾಹಕರ ಹಿತವನ್ನು ಲಕ್ಷಿಸುವ ವ್ಯವಸ್ಥೆ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ. ಗುಣಮಟ್ಟ ಮತ್ತು ಧಾರಣೆಯಲ್ಲಿ ಬಳಕೆದಾರನನ್ನು ನಿರ್ಲಕ್ಷಿಸಿ ಲಾಭವೊಂದನ್ನೇ ಲಕ್ಷಿಸದಂತೆ ವಿದೇಶಿ ಹೂಡಿಕೆದಾರರನ್ನು ನಿಯಂತ್ರಿಸುವ ಹೊಣೆ ಸರ್ಕಾರದ್ದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.