ಜನರ ಸಹನೆಗೆ ಸವಾಲು ಜನ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹತಾಶರಾಗುತ್ತಿದ್ದಾರೆ. ಅಸಹಾಯಕತೆಯಿಂದ ಒಳಗೊಳಗೆ ಸಂಕಟಪಡುತ್ತಿದ್ದಾರೆ. ಸಂದರ್ಭ ಒದಗಿಬಂದರೆ ಅದುಮಿಕೊಂಡಿದ್ದ ಸಂಕಟ, ಹತಾಶೆಗಳಿಗೆ ಅಭಿವ್ಯಕ್ತಿ ಕೊಡುವುದಕ್ಕೆ ಹಿಂಜರಿಯುವುದಿಲ್ಲ. ಆವೇಶದಿಂದ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೂ ಹೆದರುವುದಿಲ್ಲ. ತಾವು ಮಾಡುತ್ತಿರುವುದು ಸರಿಯಲ್ಲ ಎಂಬುದರ ಅರಿವಿದ್ದರೂ ಹಾಗೆ ಮಾಡದೆ ವಿಧಿಯಿಲ್ಲ ಎಂಬಂಥ ಅನಿವಾರ್ಯ ಸ್ಥಿತಿ. ಹರವಿಂದರ್ ಸಿಂಗ್ ಎಂಬ ಯುವಕ ದೆಹಲಿಯಲ್ಲಿ ಸಂಸತ್ ಭವನಕ್ಕೆ ಸ್ವಲ್ಪವೇ ದೂರದಲ್ಲಿ ನಡೆದ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಕೇಂದ್ರದ ಕೃಷಿ ಸಚಿವ ಶರದ್ ಪವಾರ್ ಅವರ ಕೆನ್ನೆಗೆ ಬಾರಿಸಿದ ಪ್ರಕರಣ ಇಂಥ ಹತಾಶೆಯ ಅಭಿವ್ಯಕ್ತಿ. ಹಿರಿಯ ಜನನಾಯಕ ಶರದ್ ಪವಾರ್ ಮೇಲೆ ನಡೆದ ಹಲ್ಲೆಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸಂಸತ್ತಿನ ಉಭಯ ಸದನಗಳಲ್ಲಿ ಖಂಡಿಸಿದ್ದಾರೆ. ಹಲ್ಲೆ ನಡೆಸುವ ಸಂದರ್ಭದಲ್ಲಿ ಆ ಯುವಕ `ಇವರೆಲ್ಲ ಭ್ರಷ್ಟರು, ನಾನು ಸರಿಯಾಗಿಯೇ ಯೋಚಿಸಿ ಈ ಕೆಲಸ ಮಾಡಿದ್ದೇನೆ~ ಎಂದು ತನ್ನ ಕೃತ್ಯಕ್ಕೆ ಸಮರ್ಥನೆ ನೀಡಿದ್ದನ್ನು ಈ ಸಂದರ್ಭದಲ್ಲಿ ಯಾರೂ ಗಣನೆಗೆ ತೆಗೆದುಕೊಂಡಿಲ್ಲ. ಕೇಂದ್ರದ ಪ್ರಭಾವಿ ಸಚಿವರ ಮೇಲೆ ನಡೆದ ದೈಹಿಕ ಹಲ್ಲೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಪ್ರಸಾರವಾಗಿದೆ. ಜನಪ್ರತಿನಿಧಿಯ ಮೇಲೆ ಸಾಮಾನ್ಯನೊಬ್ಬ ಕೈ ಮಾಡಿದ ಘಟನೆ ಕಾನೂನು ಪ್ರಕಾರ ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆ, ರಾಜಕಾರಣಿಗಳ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಇನ್ನೆಂಥ ಪ್ರತಿಕ್ರಿಯೆ ಸಾಧ್ಯವೆಂಬ ವಾದವೂ ಸಾರ್ವಜನಿಕ ಸಂಪರ್ಕ ತಾಣಗಳಲ್ಲಿ ಹರಿದಾಡುತ್ತಿದೆ. ಜನತೆಯ ಅಸಮಾಧಾನ, ಹತಾಶೆ, ಸಂಕಟಗಳೆಲ್ಲ ಮಡುಗಟ್ಟಿ ಆಸ್ಫೋಟಗೊಳ್ಳುವಂಥ ಪರಿಸ್ಥಿತಿಗೆ ರಾಜಕಾರಣಿಗಳ ಬೇಜವಾಬ್ದಾರಿ ನಡವಳಿಕೆಯೇ ಕಾರಣ ಎಂಬುದು ಸ್ಪಷ್ಟ. ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಜನಹಿತವನ್ನು ನಿರ್ಲಕ್ಷಿಸಿದರೆ ಅದನ್ನು ಸರಿದಾರಿಗೆ ತರುವ ಕೆಲಸವನ್ನು ಪ್ರತಿಪಕ್ಷಗಳು ಮಾಡುತ್ತವೆ ಎಂಬುದು ಶ್ರೀಸಾಮಾನ್ಯರ ನಿರೀಕ್ಷೆ. ಆದರೆ, ಈಗಿನ ಸನ್ನಿವೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲ. ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಲೇ ಭ್ರಷ್ಟಾಚಾರದಲ್ಲಿ ತೊಡಗಿ ಜನತೆಯ ಆಶೋತ್ತರಗಳನ್ನು ನಿರ್ಲಕ್ಷಿಸಿರುವ ಆರೋಪದಿಂದ ಯಾವ ರಾಜಕೀಯ ಪಕ್ಷವೂ ತಪ್ಪಿಸಿಕೊಳ್ಳಲು ಆಗದಂತೆ ಸ್ಥಿತಿ. ಇದನ್ನು ಸಂಘಟಿತವಾಗಿ ಎದುರಿಸುವ ಸಾಂಘಿಕ ಬಲವಾಗಲೀ, ಚೈತನ್ಯವಾಗಲೀ ಇಲ್ಲದ ಹರವಿಂದರ್‌ಸಿಂಗ್‌ನಂಥ ಹತಾಶರು ಕಾನೂನನ್ನು ಕೈಗೆತ್ತಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗುತ್ತಾರೆ (`ಬಿದ್ದುದು ಒಂದೇ ಏಟೇ~ ಎಂಬ ಪ್ರತಿಕ್ರಿಯೆ ಅಣ್ಣಾ ಹಜಾರೆಯವರಿಂದ ವ್ಯಕ್ತವಾಯಿತೆಂಬುದು ಅಹಿಂಸಾವಾದಿಗೆ ತಕ್ಕುದಲ್ಲ). ಇದು ಪ್ರಜಾಸತ್ತೆಯಲ್ಲಿ ಅಪಾಯಕಾರಿ ಬೆಳವಣಿಗೆ. `ಸಾರ್ವಜನಿಕ ಸೇವಕ~ರಾದ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಇಂಥ ಹಲ್ಲೆಗಳ ವಿರುದ್ಧ ಕಾನೂನುಕ್ರಮಕ್ಕೆ ಒಳಪಡಿಸಲು ರಾಜಕೀಯ ಪಕ್ಷಗಳ ಮುಖಂಡರು ತೋರಿಸುವ ಒಗ್ಗಟ್ಟು, ಶ್ರೀಸಾಮಾನ್ಯನ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಬೆಲೆ ಏರಿಕೆಯಂಥ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಬಳಕೆಯಾಗುತ್ತಿಲ್ಲ. ಶ್ರೀಸಾಮಾನ್ಯರೆಡೆಗಿನ ರಾಜಕಾರಣಿಗಳ ಇಂಥ ಅಸಡ್ಡೆಗೆ ಪರಿಹಾರವೇನು? ರಾಜಕೀಯ ಪಕ್ಷಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನತೆಯ ಸಹನೆಯ ಕಟ್ಟೆ ಒಡೆಯದಂತೆ ನೋಡಿಕೊಳ್ಳುವ ವಿವೇಕವನ್ನು ಅವು ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.