ಅಭಿವೃದ್ಧಿ ಉತ್ತರವಾಗಲಿ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ವಿಧಾನ ಸಭೆ ಚುನಾವಣೆ ನಡೆದಾಗ ಪರೋಕ್ಷವಾಗಿ ನಕ್ಸಲೀಯರ ಬೆಂಬಲ ಪಡೆದಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರಕ್ಕೆ ಬಂದ ಮೇಲೆ ಮಾವೋವಾದಿಗಳ ಬಗೆಗಿನ ನಿಲುವಿನಲ್ಲಿ ಬದಲಾವಣೆ ಆಗಿರುವುದು ಈಗ ಸ್ಪಷ್ಟವಾಗಿದೆ. ಸಿಪಿಎಂ ಸರ್ಕಾರದ ವಿರುದ್ಧದ ಹೋರಾಟದಲ್ಲಿ ನಕ್ಸಲೀಯರನ್ನು ಬೆಂಬಲಿಸಿದ್ದ ಟಿಎಂಸಿಗೆ ನಕ್ಸಲೀಯರ ಉಪಟಳ ಈಗ ಸಾಕುಬೇಕಾಗಿ ಹೋಗಿದೆ. ಸಿಆರ್‌ಪಿಎಫ್ ನಡೆಸಿದ ನಕ್ಸಲೀಯ ವಿರೋಧಿ ಕಾರ್ಯಾಚರಣೆ ನಕ್ಸಲೀಯ ಚಳವಳಿಯ ಮುಖ್ಯ ನಾಯಕರಲ್ಲಿ ಒಬ್ಬರಾದ ಕೋಟೇಶ್ವರರಾವ್ ಅಲಿಯಾಸ್ ಕಿಶನ್‌ಜಿಯನ್ನು ಬಲಿ ತೆಗೆದುಕೊಂಡಿದೆ. ಈ ಹತ್ಯೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮರ್ಥಿಸಿಕೊಂಡಿದ್ದಾರೆ. ಆದರೆ ಕಿಶನ್‌ಜಿಯನ್ನು ಬಂಧಿಸಿ 24 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ ಬಳಿಕ ನಕಲಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ನಕ್ಸಲ್ ನಾಯಕರು ಆರೋಪಿಸುತ್ತಿದ್ದಾರೆ. ಕಿಶನ್‌ಜಿ ಹತ್ಯೆ ಹೇಗಾಯಿತೆನ್ನುವುದು ನಿಷ್ಪಕ್ಷಪಾತ ತನಿಖೆ ನಡೆಸಿದರೆ ಮಾತ್ರ ತಿಳಿದೀತು. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದು ಆರು ದಶಕವೇ ಆಗಿವೆ. ಜನತಂತ್ರ ವ್ಯವಸ್ಥೆಯಲ್ಲಿ ಏನೇ ಲೋಪದೋಷಗಳಿದ್ದರೂ ಅದೀಗ ದೇಶದ ಉದ್ದಗಲಕ್ಕೂ ದೃಢವಾಗಿ ಬೇರುಬಿಟ್ಟಿದೆ. ಈ ಜನತಂತ್ರ ಮತ್ತು ಇನ್ನೂ ಅನೇಕ ಕಡೆಗಳಲ್ಲಿ ಕಾನೂನುಬಾಹಿರವಾಗಿ ಉಳಿದಿರುವ ಜಮೀನುದಾರಿ ವ್ಯವಸ್ಥೆಯನ್ನು ಬಂದೂಕಿನ ನಳಿಕೆಯಿಂದ ನಾಶ ಮಾಡುವುದು ಕಷ್ಟ ಎನ್ನುವುದು ನಕ್ಸಲರಿಗೆ ಇನ್ನೂ ಅರ್ಥವಾಗುತ್ತಿಲ್ಲ. ನೇಪಾಳದಂತಹ ಸಣ್ಣ ದೇಶದಲ್ಲಿ ಚುನಾವಣೆ ವ್ಯವಸ್ಥೆಯನ್ನು ಒಪ್ಪಿಕೊಂಡದ್ದರಿಂದ ನಕ್ಸಲೀಯರು ರಾಜಕೀಯ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಭಾರತದಲ್ಲಿನ ನಕ್ಸಲೀಯರು ಇಷ್ಟು ಹೊತ್ತಿಗಾಗಲೇ ಸಶಸ್ತ್ರ ಹೋರಾಟವನ್ನು ಬಿಟ್ಟು ಜನತಂತ್ರ ವ್ಯವಸ್ಥೆಯತ್ತ ಹೊರಳಬೇಕಿತ್ತು. ಸಶಸ್ತ್ರ ಹೋರಾಟದಲ್ಲಿಯೇ ನಂಬಿಕೆಯಿಟ್ಟು ಅನವಶ್ಯಕ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಇನ್ನಾದರೂ ಅವರು ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಭೂಹೀನರ, ಆದಿವಾಸಿಗಳ ಪರ ಹೋರಾಡುತ್ತಿರುವ ನಕ್ಸಲರ ಬದ್ಧತೆಯನ್ನು ಶಂಕಿಸಲಾಗದು. ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದಿರುವುದನ್ನು ಬಿಟ್ಟರೆ ಬೇರೆ ಕಡೆಗಳಲ್ಲಿ ಅದಿನ್ನೂ ಸಾಧ್ಯವಾಗಿಲ್ಲ. ಅರಣ್ಯ ಪ್ರದೇಶಗಳಲ್ಲಿ ಆದಿವಾಸಿಗಳು ವಾಸಿಸುವ ಕಡೆಗಳಲ್ಲಿ ರಸ್ತೆ, ಕುಡಿಯುವ ನೀರು, ಶಾಲೆ ಮತ್ತು ವಿದ್ಯುತ್ ಸೌಲಭ್ಯ ಸೇರಿದಂತೆ ಯಾವುದೇ ಅಭಿವೃದ್ಧಿಯ ಸೌಲಭ್ಯಗಳು ತಲುಪಿಲ್ಲ. ನಕ್ಸಲೀಯರು ಇಂತಹ ಸಮಸ್ಯೆಗಳನ್ನು ಮುಂದು ಮಾಡಿಕೊಂಡು ಆದಿವಾಸಿಗಳ ಬೆಂಬಲದಿಂದಲೇ ಸಶಸ್ತ್ರ ಹೋರಾಟವನ್ನು ಮುಂದುವರಿಸಿದ್ದಾರೆ. ಈ ವಾಸ್ತವವನ್ನು ಅರ್ಥ ಮಾಡಿಕೊಂಡು ಆಯಾ ರಾಜ್ಯಗಳು ಕಾರ್ಯಕ್ರಮ ರೂಪಿಸಿ ಅವುಗಳನ್ನು ಜಾರಿಗೆ ತರಬೇಕು. ಭೂಮಿಯ ಸಮಾನ ಹಂಚಿಕೆಗಾಗಿ ಕೇಂದ್ರವು ಭೂ ಸುಧಾರಣೆ ಕಾಯ್ದೆರೂಪಿಸಿ ಜಾರಿಗೆ ತರುವಂತೆ ಎಲ್ಲ ರಾಜ್ಯಗಳಿಗೆ ಆದೇಶಿಸಬೇಕು. ಅಭಿವೃದ್ಧಿಯ ಕಾರ್ಯಕ್ರಮಗಳ ಮೂಲಕ ಬಂದೂಕಿನ ಹೋರಾಟಕ್ಕೆ ಉತ್ತರ ಕೊಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.