ದಿಕ್ಕು ತಪ್ಪಿಸಿಕೊಂಡ ಯಾತ್ರೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರ ಜನಚೇತನಾ ಯಾತ್ರೆಗೆ ಎರಡು ಉದ್ದೇಶಗಳಿದ್ದವು. ಘೋಷಿತ ಉದ್ದೇಶ -ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ, ಅಘೋಷಿತ ಉದ್ದೇಶ -ನಿರ್ಲಕ್ಷ್ಯಕ್ಕೊಳಗಾಗುತ್ತಾ ಬಂದ ತಮ್ಮನ್ನು ಪಕ್ಷದ ಉನ್ನತ ಸ್ಥಾನದಲ್ಲಿ ಮರುಸ್ಥಾಪಿಸಿಕೊಳ್ಳುವುದು. ಮೊದಲ ಉದ್ದೇಶದ ಈಡೇರಿಕೆಯಲ್ಲಿ ಅವರಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿದಂತಿಲ್ಲ. ವೈಯಕ್ತಿಕ ಪ್ರಾಮಾಣಿಕತೆಯನ್ನು ಅಡ್ವಾಣಿ ಹೊಂದಿದ್ದರೂ ತನ್ನ ಸಹೋದ್ಯೋಗಿಗಳ ಬಗ್ಗೆ ಇದೇ ಮಾತನ್ನು ಧೈರ್ಯದಿಂದ ಹೇಳುವ ಸ್ಥಿತಿಯಲ್ಲಿ ಅವರೂ ಇಲ್ಲದಿರುವುದು ಇದಕ್ಕೆ ಕಾರಣ. ಅವರ ಯಾತ್ರೆಯ ದಿನಗಳಲ್ಲಿಯೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇನ್ನೊಬ್ಬ ಮಾಜಿ ಸಚಿವರ ಜತೆ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದರು. ಅದಕ್ಕಿಂತ ಮೊದಲೇ ಇನ್ನೊಬ್ಬ ಮಾಜಿ ಸಚಿವರು ತಮ್ಮ ಮಗನ ಜತೆ ಜೈಲು ಸೇರಿದ್ದರು. ಬಿಜೆಪಿ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಭ್ರಷ್ಟಾಚಾರದ ಆರೋಪದ ಕಾರಣಕ್ಕಾಗಿಯೇ ಮುಖ್ಯಮಂತ್ರಿಯನ್ನು ಬದಲಾಯಿಸಲಾಯಿತು. ಗುಜರಾತ್‌ನಲ್ಲಿ ಕಳೆದ ಏಳು ವರ್ಷಗಳಿಂದ ಖಾಲಿ ಬಿದ್ದಿರುವ ಲೋಕಾಯುಕ್ತ ಸ್ಥಾನ ತುಂಬಲು ಮುಖ್ಯಮಂತ್ರಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿದ್ದಾರೆ. ದೇಶಕ್ಕೆ ಮಾದರಿ ಎನಿಸುವ ರೀತಿಯಲ್ಲಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಬಿಜೆಪಿ ನಾಯಕರೇ ಪ್ರಯತ್ನಿಸುತ್ತಿದ್ದಾರೆ. ಜನಚೇತನಾ ಯಾತ್ರೆಯ ಮೇಲೆ ಈ ಎಲ್ಲ ಪ್ರತಿಕೂಲ ಬೆಳವಣಿಗೆಗಳ ಕರಿನೆರಳು ಚಾಚಿದ್ದ ಕಾರಣ ಅಡ್ವಾಣಿಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮಂಕಾಗಿ ಹೋಯಿತು. ಇದರಿಂದಾಗಿ ಬಹಳಷ್ಟು ಕಡೆಗಳಲ್ಲಿ ಅವರು ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಕಳೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ಅಡ್ವಾಣಿಯವರನ್ನು ನಿವೃತ್ತಿಯ ಅಂಚಿಗೆ ತಳ್ಳುವಂತಹ ಪ್ರಯತ್ನ ಪಕ್ಷದೊಳಗೆ ನಡೆಯುತ್ತಾ ಬಂದಿದೆ. ಯಾತ್ರೆ ಹೊರಟಾಗ ಆರ್‌ಎಸ್‌ಎಸ್ ನಾಯಕರು ಅಡ್ವಾಣಿಯವರನ್ನು ಖುದ್ದಾಗಿ ಕರೆಸಿಕೊಂಡು ಪ್ರಧಾನಿ ಅಭ್ಯರ್ಥಿಯಾಗಿ ತಮ್ಮನ್ನು ಬಿಂಬಿಸಿಕೊಳ್ಳಬಾರದೆಂಬ ಕಟ್ಟಪ್ಪಣೆ ಮಾಡಿದ್ದರು. ಹೋರಾಟದ ಕೆಚ್ಚನ್ನು ಇಳಿವಯಸ್ಸಿನಲ್ಲಿಯೂ ಉಳಿಸಿಕೊಂಡಿರುವ ಅಡ್ವಾಣಿಯವರು ಈ ವಿರೋಧಗಳನ್ನು ಲೆಕ್ಕಿಸದೆ ಮುಂದುವರಿದಿದ್ದರು. ಈ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡಿದ್ದಾರೆ. ಪ್ರಧಾನಿ ಅಭ್ಯರ್ಥಿಯಾಗಿ ತನ್ನನ್ನು ಬಿಂಬಿಸಿಕೊಳ್ಳಲು ಹೊರಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರೊಬ್ಬರನ್ನು ಹೊರತುಪಡಿಸಿ ಉಳಿದ ನಾಯಕರೆಲ್ಲರೂ ಪರಸ್ಪರ ಭಿನ್ನಾಭಿಪ್ರಾಯವನ್ನು ಪಕ್ಕಕ್ಕಿಟ್ಟು ಯಾತ್ರೆಯ ಸಂದರ್ಭದಲ್ಲಿ ಅಡ್ವಾಣಿ ಜತೆಗಿದ್ದರು ಎನ್ನುವುದು ಗಮನಾರ್ಹ. ಮೋದಿ ಅವರೂ ತಮ್ಮ ರಾಜ್ಯಕ್ಕೆ ಆಗಮಿಸಿದ್ದ ಅಡ್ವಾಣಿಯವರನ್ನು ಹಾಡಿ ಹೊಗಳಿದ್ದರು. ಮುಂದಿನ ದಿನಗಳಲ್ಲಿ ಎನ್‌ಡಿಎ ಅನ್ನು ಬಲಗೊಳಿಸಬೇಕೆಂಬ ಉದ್ದೇಶ ಹೊಂದಿರುವ ಅಡ್ವಾಣಿಯವರಲ್ಲಿ ಈ ಬೆಳವಣಿಗೆ ಭರವಸೆಯನ್ನು ಹುಟ್ಟಿಸಿರಬಹುದು. ಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಜತೆಗಿದ್ದರೆ, ಸಮಾರೋಪ ಸಮಾರಂಭದಲ್ಲಿ ಎಐಎಡಿಎಂಕೆ ಪ್ರತಿನಿಧಿಗಳು ಹಾಜರಿದ್ದರು. ಯಾತ್ರೆಯ ಮೂಲಕ ಅಡ್ವಾಣಿಯವರು ಪಕ್ಷದೊಳಗೆ ಮತ್ತು ಹೊರಗೆ ಬೆಂಬಲವನ್ನು ಗಳಿಸಿಕೊಂಡಿದ್ದಾರೆ ಎನ್ನುವುದು ನಿಜ. ಆದರೆ ಚುನಾವಣೆಯ ದಿನ ಇನ್ನೂ ದೂರ ಇದೆ, ಅಡ್ವಾಣಿಯವರಿಗೆ ವಯಸ್ಸೂ ಆಗುತ್ತಿದೆ. ಎಷ್ಟು ದಿನ ಈ ಬೆಂಬಲವನ್ನು ಉಳಿಸಿಕೊಂಡು ಹೋಗಲು ಅವರಿಗೆ ಸಾಧ್ಯ ಎನ್ನುವುದಷ್ಟೇ ಈಗಿನ ಪ್ರಶ್ನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.