ವಿಳಂಬವಾದ ಶಿಕ್ಷೆ ಲೈಸನ್ಸ್ ರಾಜ್ ಜಮಾನ ಮುಗಿದು ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದ ಮೇಲೆ ದೂರಸಂಪರ್ಕ ಇಲಾಖೆ ಒಂದಲ್ಲ ಒಂದು ಹಗರಣದಲ್ಲಿ ಮುಳುಗಿದೆ. ದೂರಸಂಪರ್ಕ ಇಲಾಖೆಗೆ ಕೇಬಲ್ ಪೂರೈಕೆ ಮಾಡುವಂತೆ ಹರಿಯಾಣದ ಎಚ್‌ಟಿಎಲ್‌ಗೆ ನೀಡಿದ್ದ 30 ಕೋಟಿ ರೂಪಾಯಿ ಗುತ್ತಿಗೆಯಲ್ಲಿ ನಡೆದಿದ್ದ ಅಕ್ರಮ ವ್ಯವಹಾರ 1996ರಲ್ಲಿ ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಈ ಗುತ್ತಿಗೆ ನೀಡುವಲ್ಲಿ ಮೂರು ಲಕ್ಷ ರೂಪಾಯಿ ಲಂಚ ಪಡೆದಿದ್ದ ಅಂದಿನ ಸಂಪರ್ಕ ಖಾತೆ ಸಚಿವ ಸುಖ್‌ರಾಮ್ ಅವರಿಗೆ ದೆಹಲಿಯ ಸಿಬಿಐ ಕೋರ್ಟ್ ಕೊನೆಗೂ ಐದು ವರ್ಷ ಜೈಲು ವಾಸ ಮತ್ತು ದಂಡ ವಿಧಿಸಿರುವುದು ಸ್ವಾಗತಾರ್ಹ. ತೀರ್ಪು ವಿಳಂಬವಾದರೂ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಿದೆ. ಈ ಹಿಂದೆ ಇನ್ನೆರಡು ಪ್ರಕರಣಗಳಲ್ಲಿ ಸುಖ್‌ರಾಮ್ ಅವರಿಗೆ 2002 ಮತ್ತು 2009ರಲ್ಲಿ ಶಿಕ್ಷೆಯಾಗಿದ್ದರೂ, ಹಲವು ಕಾರಣಗಳನ್ನು ಒಡ್ಡಿ ಜಾಮೀನು ಪಡೆದು ಹೊರಗೆ ರಾಜಾರೋಷವಾಗಿ ತಿರುಗಾಡಿಕೊಂಡಿದ್ದರು. ಆದರೂ 30 ಕೋಟಿ ರೂಪಾಯಿ ಹಗರಣದಲ್ಲಿ ಜೈಲು ಶಿಕ್ಷೆಯಿಂದ ಪಾರಾಗಲು ಅವರಿಂದ ಸಾಧ್ಯವಾಗಿಲ್ಲ. ಕೊನೆಗೂ ಕಾನೂನಿನ ಕೊಕ್ಕೆಗೆ ಸಿಕ್ಕಿಕೊಂಡು ತಿಹಾರ್ ಜೈಲು ಪಾಲಾಗಿರುವುದು ಹಲವು ಭ್ರಷ್ಟಾಚಾರದಲ್ಲಿ ತೊಡಗಿರುವ ಭ್ರಷ್ಟ ರಾಜಕಾರಣಿಗಳಿಗೆ ಇದೊಂದು ಎಚ್ಚರಿಕೆಯ ಪಾಠ. ಸುಖ್‌ರಾಮ್, ಈ ಪ್ರಕರಣದಲ್ಲಿ ಪಡೆದದ್ದು 3 ಲಕ್ಷ ರೂಪಾಯಿ ಲಂಚ ಈಗಿನ ಪ್ರಮಾಣದಲ್ಲಿ ದೊಡ್ಡ ಮೊತ್ತವಲ್ಲ ಎನ್ನುವುದು ನಿಜ. ಆದರೆ ಹದಿನೈದು ವರ್ಷಗಳ ಹಿಂದೆ ಅದಕ್ಕಿದ್ದ ಮೌಲ್ಯವನ್ನು ಈಗ ತಾಳೆ ಹಾಕಲಾಗದು. ಹಗರಣ ದೊಡ್ಡದಿರಲಿ, ಸಣ್ಣಪ್ರಮಾಣದಲ್ಲಿರಲಿ ಭ್ರಷ್ಟಾಚಾರ ಭ್ರಷ್ಟಾಚಾರವೇ. ಈ ದೃಷ್ಟಿಯಲ್ಲಿ ಸಿಬಿಐ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸುಖ್‌ರಾಮ್‌ಗೆ 86ರ ಈ ವಯಸ್ಸಿನಲ್ಲಿ ರಿಯಾಯಿತಿ ನೀಡದಿರುವುದು ನ್ಯಾಯದ ದೃಷ್ಟಿಯಲ್ಲಿ ಸರಿಯಾದ ಕ್ರಮ. ಹಗರಣಗಳಲ್ಲಿ ಸುಖ್‌ರಾಮ್ ಎತ್ತಿದ ಕೈ ಎನ್ನುವ ಅಂಶವೂ ಅವರನ್ನು ಸುತ್ತುವರಿದಿದ್ದ ಭ್ರಷ್ಟಾಚಾರ ಪ್ರಕರಣಗಳೇ ಸಾಕ್ಷಿ. 1996ರಲ್ಲಿ ಅವರ ಶಿಮ್ಲಾದಲ್ಲಿನ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದಾಗ ಚೀಲಗಳಲ್ಲಿ ಕಂತೆ ಕಂತೆಯಾಗಿಟ್ಟಿದ್ದ 3.6 ಕೋಟಿ ನಗದು ಹಣ ಪತ್ತೆಯಾಗಿತ್ತು. ಸುಖ್‌ರಾಮ್ ಅಧಿಕಾರಾವಧಿಯಲ್ಲಿ ದೂರಸಂಪರ್ಕ ಇಲಾಖೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಗಿದ್ದ ರುಣು ಘೋಷ್ ತನ್ನ ಆದಾಯಕ್ಕಿಂತ ಹೆಚ್ಚಿನ ಹಣ ಮತ್ತು ಸಂಪತ್ತನ್ನು ಗಳಿಸಿದ್ದು, ಅವರೂ ಜೈಲು ಸೇರಿದ ಹಿನ್ನೆಲೆ ಮತ್ತು ಇತ್ತೀಚಿನ 2ಜಿ ಹಗರಣಗಳನ್ನು ಗಮನಿಸಿದರೆ ದೂರಸಂಪರ್ಕ ಇಲಾಖೆಯಲ್ಲಿ ಅಂದಿನಿಂದ ನಿರಂತರವಾಗಿ ಭಾರೀ ಭ್ರಷ್ಟಾಚಾರ ನಡೆದುಕೊಂಡು ಬಂದಿರುವುದು ಸಾಬೀತಾಗಿದೆ. ಭ್ರಷ್ಟಾಚಾರ ನಡೆಸಿದ್ದರೂ ತಾಂತ್ರಿಕ ಕಾರಣಗಳ ನೆಪದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ನಡೆಸುವ ರಾಜಕಾರಣಿಗಳ ತಂತ್ರ ಎಲ್ಲ ಸಂದರ್ಭದಲ್ಲೂ ಫಲಿಸುವುದಿಲ್ಲ ಎಂಬುದಕ್ಕೆ ಈ ಪ್ರಕರಣ ನಿದರ್ಶನ. ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆ ಆಗುವುದಿಲ್ಲ ಎನ್ನುವ ಜನರ ನಂಬಿಕೆಯನ್ನು ಈ ಪ್ರಕರಣ ಹುಸಿ ಮಾಡಿರುವುದು ಸಮಾಧಾನಕರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.