ಶಕ್ತಿ ತುಂಬುವ ಯತ್ನ ನಾಗರಿಕ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ಮೇಲೆ ಲಿಂಗ ಆಧಾರಿತ ತಾರತಮ್ಯ ನಿವಾರಣೆಗೆ ವಿಶ್ವದಾದ್ಯಂತ ಪ್ರಯತ್ನಗಳು ನಡೆದಿವೆಯಾದರೂ ಭಾರತವೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಹೆಚ್ಚಿನ ದೇಶಗಳಲ್ಲಿ ಸುಧಾರಣೆಗಳು ಆಗಿಲ್ಲ. ಜೈವಿಕ ನೆಲೆಯಲ್ಲಿ ಪುರುಷರಿಗಿಂತಲೂ ಹೆಚ್ಚಿನ ಕರ್ತವ್ಯ ನಿರ್ವಹಿಸಬೇಕಿರುವ ಹೆಣ್ಣು ಎಲ್ಲ ದೃಷ್ಟಿಯಿಂದಲೂ ಅವಜ್ಞೆಗೆ ಒಳಗಾಗಿರುವುದು ಐತಿಹಾಸಿಕ ಸತ್ಯ. ಬಡತನದ ಕಾರಣ ಶಿಕ್ಷಣ ಸೌಲಭ್ಯದಿಂದ ದೂರ ಉಳಿದ ಗ್ರಾಮಾಂತರ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಸ್ಥಿತಿ ನಾಜೂಕಾಗಿರುವುದು ಆಗಾಗ ನಡೆಯುತ್ತಿರುವ ಸಮೀಕ್ಷೆಗಳಲ್ಲಿ ಬಯಲಿಗೆ ಬರುತ್ತಿದೆ. ಈಚೆಗೆ ನಡೆದ ಒಂದು ಸಮೀಕ್ಷೆಯೊಂದರಿಂದ ದೇಶದಲ್ಲಿ 15-19 ವಯೋಮಾನದ 6 ಕೋಟಿ ಹೆಣ್ಣು ಮಕ್ಕಳಲ್ಲಿ ಶೇ 50ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಬಾಲ್ಯದ ಈ ಅವಸ್ಥೆಯಲ್ಲಿ ಪೌಷ್ಟಿಕಾಂಶದ ಕೊರತೆಯಿದ್ದರೆ ಹೆಣ್ಣುಮಕ್ಕಳ ಕಲಿಕೆ, ವ್ಯಕ್ತಿತ್ವ ವಿಕಸನ, ಸಂತಾನ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮವಾಗುವುದು ಖಚಿತ. ಇದರ ನಿವಾರಣೆಗೆ ಈ ವಯಸ್ಸಿನ ಎಲ್ಲ ಹೆಣ್ಣುಮಕ್ಕಳಿಗೆ ಕಬ್ಬಿಣದ ಅಂಶವಿರುವ ಹಾಗೂ ಬಿ ಜೀವಸತ್ವದ ಮಾತ್ರೆಗಳನ್ನು ಉಚಿತವಾಗಿ ಪೂರೈಸಲು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮುಂದಾಗಿದೆ. ಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಹೆಣ್ಣುಮಕ್ಕಳ ಆರೋಗ್ಯ ಸ್ಥಿತಿಯನ್ನು ದೃಢಪಡಿಸುವುದಕ್ಕೆ ಇಂಥ ಪೂರಕ ಕ್ರಮ ಕೈಗೊಳ್ಳಬೇಕಿರುವುದು ಅವಶ್ಯಕ. ರಕ್ತಹೀನತೆಯಿಂದ ಬಳಲುವ ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ವಾರಕ್ಕೆ ಒಂದು ದಿನ ಪೋಷಕಾಂಶಗಳಿರುವ ಮಾತ್ರೆಗಳನ್ನು ಪೂರೈಸಿ, ಅವನ್ನು ಅವರು ತೆಗೆದುಕೊಳ್ಳುವಂತೆ ಮಾಡುವುದಕ್ಕೆ ಅವಶ್ಯಕ ಕ್ರಮಗಳನ್ನು ಸರ್ಕಾರ ಯೋಚಿಸಿದೆ. ಮುಂದಿನ ಒಂದು ವರ್ಷಕ್ಕೂ ಈ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಲಾಗಿದ್ದು ಇದರಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ರಾಜ್ಯಗಳನ್ನು ಕೋರಿದೆ. ರಾಜ್ಯಗಳು ತಮ್ಮಲ್ಲಿನ ಬೇಡಿಕೆಗಳನ್ನು ಸಲ್ಲಿಸಿ ಪೌಷ್ಟಿಕಾಂಶದ ಮಾತ್ರೆಗಳಿಗೆ ಆಗುವ ಪೂರ್ಣ ವೆಚ್ಚವನ್ನು ಕೇಂದ್ರದಿಂದ ಪಡೆಯಬಹುದಾಗಿದೆ. ಗ್ರಾಮೀಣ ಬಾಲಕಿಯರಿಗಾಗಿ ರಿಯಾಯಿತಿ ದರದ ನ್ಯಾಪ್‌ಕಿನ್‌ಗಳನ್ನು ಒದಗಿಸಲು ಕೇಂದ್ರ ಸರ್ಕಾರ ಈ ಮೊದಲು ಯೋಜನೆಯನ್ನು ರೂಪಿಸಿತ್ತು. ಸಮುದಾಯ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೀಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಅದೆಲ್ಲ ಅರ್ಹರಿಗೆ ತಲುಪಿಸುವಂಥ ಹೊಣೆಯನ್ನು ರಾಜ್ಯಗಳು ನಿರ್ವಹಿಸಬೇಕು. ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಹೊಂದಾಣಿಕೆ ಅವಶ್ಯಕ. ಗ್ರಾಮೀಣ ನಿರುದ್ಯೋಗ ನಿವಾರಣೆಗೆ ಕೇಂದ್ರವು ರೂಪಿಸಿದ ಉದ್ಯೋಗ ಖಾತರಿಯ ಯೋಜನೆಗೆ ಕೇಂದ್ರವು ಒದಗಿಸುತ್ತಿರುವ ಹಣದ ಹೆಚ್ಚು ಪಾಲು ಭ್ರಷ್ಟ ಅಧಿಕಾರಿಗಳು ಮತ್ತು ದುಷ್ಟ ಜನಪ್ರತಿನಿಧಿಗಳ ಅಪವಿತ್ರ ಕೂಟದ ಪಾಲಾಗಿ ಹೋಗುತ್ತಿರುವುದು ರಹಸ್ಯವೇನೂ ಅಲ್ಲ. ಅಶಕ್ತ ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿಸಲು ರೂಪಿಸಿದ ಪೌಷ್ಟಿಕಾಂಶಯುಕ್ತ ಮಾತ್ರೆಗಳ ವಿತರಣೆ ಯೋಜನೆಯೂ ಅದೇ ಹಾದಿ ಹಿಡಿಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.