ಮಹತ್ವದ ಚುನಾವಣೆ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಗೆ ಮಹತ್ವದ್ದಾಗಿದೆ. ವಿಧಾನಸಭೆ ಚುನಾವಣೆಗೆ ಸ್ಥಳೀಯ ಸಂಗತಿಗಳು ಪ್ರಮುಖವಾಗುತ್ತವೆಯಾದರೂ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶದ ಮಟ್ಟಿಗೆ ಅದು ದೇಶದ ಭವಿಷ್ಯದ ರಾಜಕಾರಣದ ದಿಕ್ಸೂಚಿ ಎಂಬ ಭಾವನೆ ಇದೆ. ಭ್ರಷ್ಟಾಚಾರದ ಹಗರಣಗಳಿಂದ ವರ್ಚಸ್ಸು ಕಳೆದುಕೊಂಡಿರುವ ಯುಪಿಎ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಅತ್ಯಂತ ಮಹತ್ವದ್ದು. ಕೇಂದ್ರದ ಹಗರಣಗಳು ಹಾಗೂ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ಮತ್ತೆ ದೇಶಕ್ಕೆ ತರುವ ವಿಷಯವನ್ನೇ ತನ್ನ ಪ್ರಣಾಳಿಕೆಯನ್ನಾಗಿ ಮಾಡಿಕೊಂಡು ಜನರ ಗಮನ ಸೆಳೆದಿರುವ ವಿರೋಧ ಪಕ್ಷ ಬಿಜೆಪಿಗೂ ಈ ಚುನಾವಣೆಗಳು ನಿರ್ಣಾಯಕ. ಕಾಂಗ್ರೆಸ್‌ನ ಯುವನಾಯಕ ರಾಹುಲ್ ಗಾಂಧಿ ಕಳೆದ ಒಂದೂವರೆ ವರ್ಷದಿಂದ ಉತ್ತರ ಪ್ರದೇಶದಲ್ಲಿ ಪ್ರವಾಸ ಮಾಡಿ ಮಾಯಾವತಿ ಸರ್ಕಾರದ ಲೋಪಗಳನ್ನು ಜನರ ಗಮನಕ್ಕೆ ತರುತ್ತಿದ್ದಾರೆ. ಹೀಗಾಗಿ ಈ ಚುನಾವಣೆ ರಾಹುಲ್ ಗಾಂಧಿ ನಾಯಕತ್ವದ ಅಗ್ನಿಪರೀಕ್ಷೆಯೂ ಹೌದು. ಕಾಂಗ್ರೆಸ್ ಪಕ್ಷ ಅಜಿತ್‌ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳದ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿಯಲಿದೆ. ಬಾಬರಿ ಮಸೀದಿ ಧ್ವಂಸವಾದ ನಂತರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಮಾಯಾವತಿ ದಲಿತರು ಹಾಗೂ ಮುಂದುವರಿದ ಜಾತಿಗಳ ಬೆಂಬಲ ಪಡೆಯುವ ರಾಜಕೀಯ ತಂತ್ರ ರೂಪಿಸಿ ಕಾಂಗ್ರೆಸ್ಸಿನ ವೋಟ್ ಬ್ಯಾಂಕನ್ನು ಛಿದ್ರಗೊಳಿಸಿ ಉತ್ತರ ಪ್ರದೇಶದ ರಾಜಕಾರಣದ ದಿಕ್ಕನ್ನೇ ಬದಲಾಯಿಸಿದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಹುಜನ ಸಮಾಜ ಹಾಗೂ ಸಮಾಜವಾದಿ ಪಕ್ಷಗಳ ಭವಿಷ್ಯವೂ ಈ ಚುನಾವಣೆಯನ್ನು ಅವಲಂಬಿಸಿದೆ. ಪಂಜಾಬ್ ಮತ್ತು ಉತ್ತರಖಂಡ ವಿಧಾನಸಭೆಗಳನ್ನು ತೆಕ್ಕೆಗೆ ತೆಗೆದುಕೊಳ್ಳುವುದರ ಜತೆಗೆ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಸವಾಲು. ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದೆ. ಪ್ರಬಲ ಲೋಕಪಾಲ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ದೇಶದ ಉದ್ದಗಲದಲ್ಲಿ ಚಳವಳಿ ನಡೆಸಿ ಕಾಂಗ್ರೆಸ್ ವಿರೋಧಿ ಅಲೆ ಎಬ್ಬಿಸಿದೆ. ಕಾಂಗ್ರೆಸ್ ಪಕ್ಷ ಲೋಕಪಾಲ ಮಸೂದೆಯನ್ನು ರೂಪಿಸಿ ಸಂಸತ್ತಿನ ಮುಂದೆ ಮಂಡಿಸಿ ಒಪ್ಪಿಗೆ ಪಡೆದಿದ್ದರೂ ಅದನ್ನು ನಾಗರಿಕ ಸಮಿತಿ ಒಪ್ಪಿಲ್ಲ. ಹೀಗಾಗಿ ಐದೂ ರಾಜ್ಯಗಳ ಚುನಾವಣೆಯಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರದ ಹಗರಣ ಪ್ರಚಾರದ ಮುಂಚೂಣಿಗೆ ಬರುತ್ತದೆ. ಕಾಂಗ್ರೆಸ್‌ಗೆ ಮತ ಹಾಕದಂತೆ ಐದು ರಾಜ್ಯಗಳ ಮತದಾರರಿಗೆ ಮನವಿ ಮಾಡಿಕೊಳ್ಳುವುದಾಗಿ ಅಣ್ಣಾ ಹಜಾರೆ ಘೋಷಿಸಿದ್ದಾರೆ. ಐದು ವರ್ಷ ಆಡಳಿತ ನಡೆಸಿದ ಸರ್ಕಾರಗಳ ವಿರುದ್ಧ ಮತದಾರರಲ್ಲಿ ಒಂದು ಬಗೆಯ ನಕಾರಾತ್ಮಕ ಧೋರಣೆ ಬೆಳೆದಿರುತ್ತದೆ. ಈ ಹಿನ್ನೆಲೆಯಲ್ಲಿ ಪಂಜಾಬ್, ಉತ್ತರಖಂಡ, ಗೋವಾ, ಮಣಿಪುರ ರಾಜ್ಯಗಳ ಚುನಾವಣೆ ಹೊಸ ಬೆಳವಣಿಗೆ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.