ವ್ಯವಸ್ಥೆ ಸುಧಾರಣೆ ಆಗಲಿ ಆರಕ್ಷಕರ ಮನೆಯೇ ಸುರಕ್ಷಿತವಾಗಿಲ್ಲ. ಸಮಾಜದ ರಕ್ಷಣೆಯ ಜವಾಬ್ದಾರಿ ಹೊತ್ತವರು ಒಂದು ಕ್ಷಣ ಮಾನಸಿಕ ಸಮತೋಲನ ಕಳೆದುಕೊಂಡರೆ ಅದರ ಪರಿಣಾಮ ಘೋರವಾಗುತ್ತದೆ. ಮೂರು ದಿನಗಳಿಂದ ಸತತ ಕೆಲಸ ಮಾಡಿ ಒತ್ತಡದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ರಜೆ ಸಿಗದೆ ಹತಾಶನಾಗಿ ಠಾಣೆಯಲ್ಲೇ ಸಬ್ ಇನ್ಸ್‌ಪೆಕ್ಟರ್ ಅವರನ್ನು ರೈಫಲ್‌ನಿಂದ ಗುಂಡು ಹಾರಿಸಿ ಕೊಂದ ದಾರುಣ ಘಟನೆ ಪೊಲೀಸ್ ಇಲಾಖೆಯ ಒಳಗೆ ಅಸಮಾಧಾನದ ಹೊಗೆ ಇರುವುದನ್ನು ಹೊರಹಾಕಿದೆ. ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಬಿ.ಎಸ್.ವಿಜಯ್‌ಕುಮಾರ್ ಹತ್ಯೆಯಾದ ದುರ್ದೈವಿ. ರಜೆ ವಿಷಯವಾಗಿ ವಿಜಯಕುಮಾರ್ ಮತ್ತು ಕಾನ್‌ಸ್ಟೆಬಲ್ ಆನಂದಕುಮಾರ್ ನಡುವೆ ವಾಗ್ವಾದವಾಗಿದೆ. ಮನೆಯ ಗೃಹಪ್ರವೇಶ ನಿಮಿತ್ತ ಆನಂದಕುಮಾರ್ ರಜೆ ಬೇಡಿದ್ದಾರೆ. ಅದನ್ನು ನಿರಾಕರಿಸಿದ ವಿಜಯಕುಮಾರ್, ಆನಂದ್‌ಕುಮಾರ್ ಅವರನ್ನು ಸೆಂಟ್ರಿ ಡ್ಯೂಟಿಗೆ ನಿಯಮಿಸಿದ್ದಾರೆ. ಹಿರಿಯ ಕಾನ್‌ಸ್ಟೆಬಲ್ ಆದ ತನ್ನನ್ನು ಅಲ್ಲಿಗೆ ನಿಯೋಜಿಸಿರುವುದೂ ಅವಮಾನದ ವಿಷಯ ಎಂದು ಆನಂದಕುಮಾರ್ ನೊಂದಿದ್ದಾರೆ. ಸತತವಾಗಿ ಮೂರುದಿನಗಳಿಂದ ಕೆಲಸ ಮಾಡಿದ ದಣಿವು, ರಜೆ ಸಿಗದ ಹತಾಶೆ, ಮೇಲಧಿಕಾರಿಯ ಅಸಹಕಾರದಿಂದ ನೊಂದಿದ್ದ ಕಾನ್‌ಸ್ಟೆಬಲ್ ಮಾನಸಿಕ ಸಮತೋಲನ ಕಳೆದುಕೊಂಡು ಅತಿರೇಕದ ಕೆಲಸಕ್ಕೆ ಕೈಹಾಕಿದ್ದಾರೆ. ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಸಮಾಜದ ರಕ್ಷಣೆಗೆ ನೀಡಿದ ಅಸ್ತ್ರವನ್ನು ಈ ರೀತಿ ಸೇಡಿಗೆ ಬಳಸುವುದು ಅಕ್ಷಮ್ಯವಾದರೂ ಈ ಘಟನೆ, ಪೊಲೀಸ್ ಕಾನ್‌ಸ್ಟೆಬಲ್‌ಗಳ ಬದುಕನ್ನು ಪ್ರತಿಫಲಿಸುತ್ತದೆ. ಅಲ್ಲದೆ ಕಾನ್‌ಸ್ಟೆಬಲ್‌ಗಳನ್ನು ಮೇಲಧಿಕಾರಿಗಳು ಯಾವ ನೆಲೆಯಲ್ಲಿ ನಿರ್ವಹಿಸಬೇಕು ಎನ್ನುವುದಕ್ಕೂ ಉದಾಹರಣೆಯಂತಿದೆ. ಈ ರೀತಿ ಕಾನ್‌ಸ್ಟೆಬಲ್‌ಗಳು ಅಸಮಾಧಾನವನ್ನು ಹೊರಹಾಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಪೊಲೀಸ್ ಅಧಿಕಾರಿಗಳು ಕೆಳಮಟ್ಟದ ಸಿಬ್ಬಂದಿಯನ್ನು ವಿಶೇಷವಾಗಿ ಕಾನ್‌ಸ್ಟೆಬಲ್‌ಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಹೊಸದೇನಲ್ಲ. ಸಾರ್ವಜನಿಕ ಕೆಲಸಕ್ಕೆ ನೇಮಕವಾದ ಕಾನ್‌ಸ್ಟೆಬಲ್‌ಗಳನ್ನು ಯಾವುದೇ ಎಗ್ಗಿಲ್ಲದೆ ಖಾಸಗಿ ಕೆಲಸಗಳಿಗೆ ಬಳಸಿಕೊಳ್ಳುವುದು ತಪ್ಪಬೇಕು. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮತ್ತು ಕೆಳಮಟ್ಟದ ಸಿಬ್ಬಂದಿಯ ನಡುವೆ ಇರುವ ಕಾರ್ಯವೈಖರಿಯ ಲೋಪವನ್ನು ಸರಿಪಡಿಸಲು ಯತ್ನಿಸಬೇಕು. ನಮ್ಮಲ್ಲಿ ಅಗತ್ಯಕ್ಕೆ ತಕ್ಕಷ್ಟು ಪೊಲೀಸ್ ಸಿಬ್ಬಂದಿಯ ಕೊರತೆಯೂ ಇದೆ. ಹೀಗಾಗಿ ಇರುವ ಕಾನ್‌ಸ್ಟೆಬಲ್‌ಗಳ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಹೊತ್ತುಗೊತ್ತಿಲ್ಲದ ದುಡಿತ, ಮೇಲಧಿಕಾರಿಗಳ ದರ್ಪ, ಇವೆಲ್ಲವೂ ಕಾನ್‌ಸ್ಟೆಬಲ್‌ಗಳನ್ನು ಮಾನಸಿಕವಾಗಿ ಅಸ್ವಸ್ಥಗೊಳ್ಳುವಂತೆ ಮಾಡುತ್ತದೆ. ಮೇಲಧಿಕಾರಿಗಳ ಕಠಿಣ ಕ್ರಮಗಳಿಂದ ನಲುಗುವ ಕಾನ್‌ಸ್ಟೆಬಲ್‌ಗಳು ತಮಗಾದ ಅವಮಾನ ಮತ್ತು ಸಿಟ್ಟನ್ನು ಜನರ ಮೇಲೆ ಪ್ರದರ್ಶಿಸುತ್ತಾರೆ. ಈ ಸಂಬಂಧವನ್ನು ಸುಧಾರಿಸಲು ಸಾಧ್ಯವಿಲ್ಲವೇ? ಇತರೆ ಪೊಲೀಸರ ವೇತನ ಮತ್ತು ಸೌಲಭ್ಯದಲ್ಲಿ ತಾರತಮ್ಯ ಇದೆ. ಕಾನ್‌ಸ್ಟೆಬಲ್‌ಗಳಿಗೆ ಉತ್ತಮ ವೇತನ, ಭತ್ಯೆ, ಬಡ್ತಿ ಮತ್ತು ಅವಶ್ಯವಿದ್ದಾಗ ರಜೆ ಮುಂತಾದ ಸೌಲಭ್ಯ ಒದಗಿಸಬೇಕು. ಸಿಬ್ಬಂದಿ ಸುಧಾರಣೆಗಾಗಿ ಆಯೋಗಗಳು ನೀಡಿರುವ ಸಲಹೆಗಳನ್ನೂ ಜಾರಿಗೆ ತರುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.