ಅಪ್ರಾಮಾಣಿಕ ನಡವಳಿಕೆ ಲೋಕಪಾಲರ ನೇಮಕದ ಬಗ್ಗೆ ಯಾವ ಸಂಸದರೂ ಪ್ರಾಮಾಣಿಕರಾಗಿಲ್ಲ ಎನ್ನುವುದಕ್ಕೆ ಮಂಗಳವಾರ ಲೋಕಸಭೆಯಲ್ಲಿನ ಅವರ ನಡವಳಿಕೆಯೇ ಸಾಕ್ಷಿ. ಸಂಪೂರ್ಣವಾಗಿ ಒಡೆದ ಮನೆಯಾಗಿ ಹೋದ ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಮಾತ್ರವಲ್ಲ, ಯುಪಿಎ ಮಿತ್ರ ಪಕ್ಷಗಳು ಕೂಡಾ ಭಿನ್ನ ದಾರಿ ಹಿಡಿದು ತಮ್ಮ ನಿಜಬಣ್ಣಗಳನ್ನು ಬಯಲುಗೊಳಿಸಿವೆ. ಇದರಿಂದಾಗಿ ಹನ್ನೆರಡು ಗಂಟೆಗಳ ಸುದೀರ್ಘ ಚರ್ಚೆಯ ನಂತರ ನಡೆದ ಮತದಾನದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗೆ ಮಾತ್ರ ಲೋಕಸಭೆಯ ಅನುಮೋದನೆ ಪಡೆಯಲು ಯುಪಿಎ ಸರ್ಕಾರಕ್ಕೆ ಸಾಧ್ಯವಾಗಿದೆ. ಸಂವಿಧಾನ (116ನೇ ತಿದ್ದುಪಡಿ) ಮಸೂದೆ ಮೂರನೆ ಎರಡರಷ್ಟು ಬಹುಮತ ಸಿಗದೆ ಬಿದ್ದುಹೋಗಿದೆ. ಲೋಕಪಾಲ ಸಂಸ್ಥೆಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವ ಈ ಮಸೂದೆಯನ್ನು ಸಾರ್ವಜನಿಕವಾಗಿ ಎಲ್ಲಿಯೂ ವಿರೋಧಿಸದೆ ಇದ್ದ ಬಿಜೆಪಿ ಸದಸ್ಯರು, ಅದರ ವಿರುದ್ಧ ಮತ ಚಲಾಯಿಸಿದ್ದು ಕ್ಷುಲ್ಲಕ ರಾಜಕಾರಣ. ಲೋಕಪಾಲ ಸಂಸ್ಥೆಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಸಂಸದ ರಾಹುಲ್‌ಗಾಂಧಿ ಮೊದಲು ಪ್ರತಿಪಾದಿಸಿದ್ದರು ಎನ್ನುವುದನ್ನು ಬಿಟ್ಟರೆ ಬಿಜೆಪಿ ಸದಸ್ಯರಿಗೆ ಇದನ್ನು ವಿರೋಧಿಸಲು ಬೇರೆ ಕಾರಣಗಳೇ ಇದ್ದಂತಿಲ್ಲ. ಆದರೆ, ಆಳುವ ಪಕ್ಷ ಕೂಡಾ ಈ ವಿಷಯದಲ್ಲಿ ಗಂಭೀರವಾಗಿರಲಿಲ್ಲ. 15 ಕಾಂಗ್ರೆಸ್ ಸದಸ್ಯರೂ ಸೇರಿದಂತೆ ಒಟ್ಟು 25 ಯುಪಿಎ ಸದಸ್ಯರು ಮತದಾನದ ಸಂದರ್ಭದಲ್ಲಿ ಗೈರು ಹಾಜರಾಗಿರುವುದು ಆ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ರಾಹುಲ್ ಗಾಂಧಿಗೆ ಆದ ಮುಖಭಂಗ. ಲೋಕಪಾಲ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದ ಸಂಪೂರ್ಣ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್‌ನ ನಡವಳಿಕೆ ಕೂಡಾ ಸಂಶಯಕ್ಕೆಡೆ ಮಾಡಿದೆ. ವಿರೋಧ ಪಕ್ಷ ಮತ್ತು ಮಿತ್ರಪಕ್ಷಗಳ ಬೇಡಿಕೆಗಳನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಬಳಸಿಕೊಂಡಿರುವುದು ಸ್ಪಷ್ಟ. ಕೇಂದ್ರ ತನಿಖಾ ದಳವನ್ನು (ಸಿಬಿಐ) ಲೋಕಪಾಲರ ನಿಯಂತ್ರಣಕ್ಕೊಳಪಡಿಸಬೇಕೆಂಬ ಬಿಜೆಪಿ ಮತ್ತಿತರ ಪಕ್ಷಗಳ ಒತ್ತಾಯವನ್ನು ಸರ್ಕಾರ ತಿರಸ್ಕರಿಸಿದೆ. ಆದರೆ ರಾಜ್ಯ ಸರ್ಕಾರಗಳು ಲೋಕಾಯುಕ್ತವನ್ನು ಕಡ್ಡಾಯವಾಗಿ ನೇಮಿಸಬೇಕೆಂಬ ಕಾನೂನು, ಒಕ್ಕೂಟ ವ್ಯವಸ್ಥೆಗೆ ಹಾನಿ ಉಂಟುಮಾಡುವುದರಿಂದ ಆ ಅಂಶವನ್ನು ಕೈಬಿಡಬೇಕು ಎಂದು ಬಿಜೆಪಿ ಮತ್ತು ಮಿತ್ರಪಕ್ಷಗಳಾದ ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಇದಕ್ಕಿಂತ ಮೊದಲು ಇಂತಹ ಕಾನೂನು ರೂಪಿಸುವ ಅಧಿಕಾರ ಸಂವಿಧಾನದ 253ನೇ ಪರಿಚ್ಛೇದದ ಪ್ರಕಾರ ತನಗೆ ಇದೆ ಎಂದು ಸರ್ಕಾರ ಪ್ರತಿಪಾದಿಸಿತ್ತು. ಇಷ್ಟು ಮಾತ್ರವಲ್ಲ, ಸಂಸದರ ಬಗ್ಗೆ ತನಿಖೆ ನಡೆಸಿದ ವರದಿಯನ್ನು ಲೋಕಸಭಾಧ್ಯಕ್ಷ ಇಲ್ಲವೇ ರಾಜ್ಯಸಭೆಯ ಸಭಾಪತಿಗಳಿಗೆ ನೀಡುವುದನ್ನು ಕೂಡಾ ಕೈಬಿಡಲಾಗಿದೆ. ಪರಿಷ್ಕೃತ ಮಸೂದೆಯ ಪ್ರಕಾರ ಲೋಕಪಾಲ ಸಂಸ್ಥೆಯಲ್ಲಿನ ಒಂಬತ್ತು ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರು ಒಪ್ಪಿಕೊಂಡಲ್ಲಿ ಮಾತ್ರ ಪ್ರಧಾನಿ ವಿರುದ್ಧ ತನಿಖೆ ಮಾಡಬಹುದಾಗಿದೆ. ಮೊದಲು ನಾಲ್ಕನೇ ಮೂರರಷ್ಟು ಸದಸ್ಯರ ಒಪ್ಪಿಗೆ ಅಗತ್ಯ ಇತ್ತು. ಮೂಲ ಆಶಯಕ್ಕೆ ವಿರುದ್ಧವಾದ ಈ ಬದಲಾವಣೆಗಳು ಲೋಕಪಾಲ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.