ನಕ್ಸಲ್ ನಿಗ್ರಹ ಪಡೆ ವೈಫಲ್ಯ ನಕ್ಸಲೀಯರ ಅಟ್ಟಹಾಸಕ್ಕೆ ಕಾರ್ಕಳ ತಾಲ್ಲೂಕಿನ ಈದುಗುಂಡಿ ಗ್ರಾಮದ ಕಬ್ಬಿನಾಲೆ ಸದಾಶಿವಗೌಡ ಎಂಬುವರನ್ನು ಪೊಲೀಸ್ ಮಾಹಿತಿದಾರನೆಂದು ಹತ್ಯೆ ಮಾಡಲಾಗಿದೆ. ಅವರನ್ನು ಅಪಹರಿಸಿದ ಮಾಹಿತಿ ವರದಿ ಇದ್ದರೂ ನಕ್ಸಲ್ ನಿಗ್ರಹ ಪಡೆಗೆ ಅವರನ್ನು ಪತ್ತೆ ಮಾಡಿ ರಕ್ಷಿಸಲು ಆಗಿಲ್ಲ. ಇದು ನಕ್ಸಲ್ ನಿಗ್ರಹಪಡೆಯ ವೈಫಲ್ಯ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕೆಲವು ತಾಲ್ಲೂಕುಗಳ ಜನ ಸಾಮಾನ್ಯರು ಮತ್ತು ಬುಡಕಟ್ಟು ಜನರು ನಕ್ಸಲೀಯರ ಭೀತಿ ಮತ್ತು ಪೊಲೀಸರ ಕಿರುಕುಳಗಳಿಂದ ಬೇಸತ್ತಿದ್ದಾರೆ. ಈ ಜನರದ್ದು ಉಭಯ ಸಂಕಟ. ನಕ್ಸಲೀಯರೊಂದಿಗೆ ಮಾತನಾಡಿದರೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಪೊಲೀಸರೊಂದಿಗೆ ಸಂಪರ್ಕ ಇಟ್ಟುಕೊಂಡರೆ ನಕ್ಸಲೀಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ನಕ್ಸಲೀಯರ ನಿಗ್ರಹಕ್ಕೆ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದರೂ ಅದರಿಂದ ಹೇಳಿಕೊಳ್ಳುವಂತಹ ಪ್ರಯೋಜನವೇನೂ ಆಗಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಷ್ಟೇ. ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆ ಬದಲು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಸರ್ಕಾರ ಗಮನ ಹರಿಸಿದ್ದರೆ ಪರಿಸ್ಥಿತಿಯಲ್ಲಿ ಸುಧಾರಣೆ ಆಗುತ್ತಿತ್ತು. ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲೀಯರ ನಡುವೆ ಆಗಾಗ ಗುಂಡಿನ ಚಕಮಕಿ ನಡೆದಿದೆ. ಆಗುಂಬೆ ಮತ್ತು ಬೆಳ್ತಂಗಡಿ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ಮೇಲೆ ಹಾರಿಸಿದ ಗುಂಡಿಗೆ ನಿಗ್ರಹ ಪಡೆಯ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ನಿಗ್ರಹ ಪಡೆಯ ಸಿಬ್ಬಂದಿಗೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಪರಿಣತಿ ಇದ್ದಂತಿಲ್ಲ. ಅವರಿಗೆ ನೀಡಿರುವ ಶಸ್ತ್ರಾಸ್ತ್ರಗಳ ಗುಣಮಟ್ಟವೂ ಸರಿಯಾಗಿಲ್ಲ; ನಿಗ್ರಹ ದಳದ ಸಿಬ್ಬಂದಿ ನಡುವೆ ಹೊಂದಾಣಿಕೆಯೂ ಇಲ್ಲ ಎಂಬ ಆರೋಪಗಳಿವೆ. ಪೊಲೀಸರು ಮತ್ತು ನಕ್ಸಲೀಯರ ನಡುವಿನ ಸಂಘರ್ಷದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ನಕ್ಸಲೀಯರ ಹಾವಳಿ ಇರುವ ಪ್ರದೇಶಗಳ ರೈತರು, ಕೂಲಿಕಾರರು ಮತ್ತು ಬುಡಕಟ್ಟು ಜನರು ನಿರುದ್ಯೋಗ, ಬಡತನ, ಸ್ಥಳೀಯ ಬಲಾಢ್ಯರ ದಬ್ಬಾಳಿಕೆ. ಭೂ ಸುಧಾರಣೆಯ ವೈಫಲ್ಯಗಳು ಹಾಗೂ ಅರಣ್ಯ ಪ್ರದೇಶದಿಂದ ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರದ ಪ್ರಯತ್ನಗಳಿಂದ ಕಂಗೆಟ್ಟಿದ್ದಾರೆ. ಈ ಜನರಿಗೆ ನಕ್ಸಲೀಯರ ವಿಚಾರಗಳು ಆಕರ್ಷಕವಾಗಿ ಕಾಣುತ್ತಿವೆ. ಅದರಿಂದಾಗಿಯೇ ಅವರ ಪ್ರಭಾವಕ್ಕೆ ಒಳಗಾದ ಅನೇಕ ಯುವಕ-ಯುವತಿಯರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ನಕ್ಸಲೀಯರ ಹಾವಳಿ ಇರುವ ಪ್ರದೇಶಗಳ ಜನರದ್ದು ಸಾಮಾಜಿಕ ಸಮಸ್ಯೆ. ಸರ್ಕಾರ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು. ನಕ್ಸಲ್‌ಪೀಡಿತ ಪ್ರದೇಶಗಳ ಜನರಿಗಾಗಿ ಸರ್ಕಾರ ವಿಶೇಷ ಅಭಿವೃದ್ಧಿ ಪ್ಯಾಕೇಜನ್ನು ಘೋಷಿಸಿದೆ. ಆದರೆ ಅದು ಸಮರ್ಪಕವಾಗಿ ಜಾರಿಯಾಗಿಲ್ಲ. ನಾಗರಿಕ ಸೌಲಭ್ಯಗಳೂ ಸೇರಿದಂತೆ ಬಡತನ ನಿವಾರಣೆಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕವೇ ನಕ್ಸಲೀಯರನ್ನು ದುರ್ಬಲಗೊಳಿಸಬೇಕು. ಇದು ಸರ್ಕಾರದ ಕೆಲಸವೇ ಆದರೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಪ್ರಗತಿಪರ ಸಂಘಟನೆಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳ ಕಾರ್ಯರೂಪಕ್ಕೆ ಕೈಜೋಡಿಸಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.