ಸಹಕಾರ ಕ್ಷೇತ್ರಕ್ಕೆ ಅಡ್ಡಗಾಲು ಸಮುದಾಯವನ್ನು ಒಳಗೊಂಡು ಸ್ವಂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಸಹಕಾರ ಪರಿಕಲ್ಪನೆಯ ಉದ್ದೇಶ. ಆದ್ದರಿಂದ ಸಹಕಾರ ಸಂಸ್ಥೆಗಳು ಲಾಭ ಗಳಿಕೆಯ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದವುಗಳಲ್ಲ. ಸಹಕಾರ ಸಂಘಗಳಾಗಲೀ, ಸಹಕಾರ ತತ್ವದ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದ ಬ್ಯಾಂಕುಗಳಾಗಲೀ ವಾಣಿಜ್ಯ ದೃಷ್ಟಿಯಿಂದ ಚಟುವಟಿಕೆಗಳನ್ನು ನಡೆಸಿದರೂ ಅದರಲ್ಲಿ ಲಾಭಗಳಿಸುವ ವ್ಯಾಪಾರಿ ಮನೋಭಾವಕ್ಕೆ ಆದ್ಯತೆ ಇಲ್ಲ. ಸಮಾಜದ ಕಟ್ಟ ಕಡೆಯ ಮನುಷ್ಯ ಕೂಡ ಸಮಷ್ಟಿಯ ಅಂಗವಾಗಿ ಭದ್ರತೆಯ ಭಾವದಲ್ಲಿ ಸ್ವಂತದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಸಾಗುವುದಕ್ಕೆ ಆಸರೆಯಾಗುವಂಥ ಉದಾತ್ತ ಉದ್ದೇಶ ಸಹಕಾರ ಸಂಘಗಳ ಹಿಂದಿನ ಪರಿಕಲ್ಪನೆ. ಅವುಗಳ ಕಾರ್ಯ ನಿರ್ವಹಣೆಯನ್ನು ಸರ್ಕಾರ ಇತರ ವಾಣಿಜ್ಯ ಸಂಘಟನೆಗಳ ಚಟುವಟಿಕೆಗಳಂತೆ ಪರಿಗಣಿಸಲಾಗದು. ಮುಂದಿನ ಹಣಕಾಸು ವರ್ಷದಿಂದ ಜಾರಿಗೊಳಿಸಲು ಉದ್ದೇಶಿಸಿದ ನೇರ ತೆರಿಗೆ ಸಂಹಿತೆಯ ವ್ಯಾಪ್ತಿಗೆ ಸಹಕಾರ ಸಂಸ್ಥೆಗಳನ್ನು ಒಳಪಡಿಸಲು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಈ ಕಾರಣದಿಂದ ಸಮರ್ಥನೀಯವಲ್ಲ. ಅಷ್ಟೇ ಅಲ್ಲ, ಸಹಕಾರ ಸಂಘಗಳ ಕಾಯ್ದೆಯ ಅಡಿಯಲ್ಲಿ ಅಸ್ತಿತ್ವಕ್ಕೆ ಬರುವ ಯಾವುದೇ ಸಂಸ್ಥೆಗಳ ಮೇಲೆಯೂ ಆದಾಯ ತೆರಿಗೆ ವಿಧಿಸುವುದು ಆ ಕ್ಷೇತ್ರಗಳ ಬೆಳವಣಿಗೆಯನ್ನು ನಿರ್ಬಂಧಿಸಿದಂತೆ ಎಂಬುದನ್ನು ಸರ್ಕಾರ ಮರೆಯಬಾರದು. ದೇಶದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿವಿಧ ಬಗೆಯ ಸಹಕಾರ ಸಂಸ್ಥೆಗಳು ಗಳಿಸುವ ನಿವ್ವಳ ಲಾಭದಲ್ಲಿ ಕಾಲುಭಾಗದಷ್ಟು ಮೀಸಲು ನಿಧಿ ಕಡ್ಡಾಯವಾಗಿದೆ. ಶೇ 2ರಷ್ಟು ಶಿಕ್ಷಣ ನಿಧಿ ಸರ್ಕಾರಕ್ಕೆ ಸಂದಾಯವಾಗುತ್ತದೆ. ಉಳಿದ ಮೊತ್ತದಲ್ಲಿ ಸದಸ್ಯರ ಪಾಲು ಬಂಡವಾಳ ಅನುಸರಿಸಿ ಲಾಭಾಂಶ ವಿತರಣೆಯಾಗುತ್ತದೆ. ಲಾಭಾಂಶದಲ್ಲಿ ಎಲ್ಲ ಸದಸ್ಯರ ಬಳಕೆಗೆ ಬರುವಂಥ ಸಮುದಾಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೂ ಆಸ್ಪದವಿರುತ್ತದೆ. ನಿವ್ವಳ ಆದಾಯದಲ್ಲಿ ದೊಡ್ಡ ಭಾಗವನ್ನು ತೆರಿಗೆಯಾಗಿ ಸರ್ಕಾರಕ್ಕೆ ಸಲ್ಲಿಸಿದರೆ ಸದಸ್ಯರಿಗೆ ಲಾಭಾಂಶದಲ್ಲಿ ಕಡಿತ, ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲದ ಕೊರತೆ ಅನಿವಾರ್ಯವಾಗುತ್ತದೆ. ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳಿಗೂ ಹಣದ ಕೊರತೆ ಏರ್ಪಡುತ್ತದೆ. ಒಟ್ಟಾರೆ ಪರಿಣಾಮದಿಂದ ಸಹಕಾರಿ ಕ್ಷೇತ್ರ ದುರ್ಬಲಗೊಳ್ಳುತ್ತದೆ. ಸಹಕಾರ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವುದಕ್ಕೆ ನಾಗರಿಕರ ಮೂಲಭೂತ ಹಕ್ಕಿನ ಸ್ಥಾನ ನೀಡಿರುವ ಕೇಂದ್ರ ಸರ್ಕಾರ, ಈ ಕ್ಷೇತ್ರದ ಮಹತ್ವವನ್ನು ಮನಗಂಡಿರುವುದು ಸ್ವಾಗತಾರ್ಹ ಕ್ರಮ. ಅಭಿವೃದ್ಧಿ ಚಟುವಟಿಕೆಗಳಲ್ಲಿ ಫಲಾನುಭವಿ ವ್ಯಕ್ತಿಗಳೇ ನೇರವಾಗಿ ಭಾಗಿಯಾಗುವಂಥ ಪ್ರಜಾಸತ್ತಾತ್ಮಕ ಸ್ವರೂಪದ ಆಡಳಿತ ಸಹಕಾರ ಸಂಸ್ಥೆಗಳ ವಿಶೇಷ. ಇವುಗಳಿಗೆ ಸಾಮಾಜಿಕ ಸೇವಾ ಕಾರ್ಯದ ಆಯಾಮವೂ ಇದೆ. ಇವು ನಡೆಸುವ ಆರ್ಥಿಕ ಚಟುವಟಿಕೆಗಳಿಂದ ಲಾಭ ಬಂದರೆ ಅದನ್ನು ಅವುಗಳ ವಿಸ್ತರಣೆಗೆ ಬಳಕೆಯಾಗುವಂತೆ ನಿಯಮಗಳನ್ನು ನೇರ ತೆರಿಗೆ ಸಂಹಿತೆಯ 47ನೇ ಪರಿಚ್ಛೇದದಲ್ಲಿ ಅಳವಡಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕು. ಈಗ ಪುನಶ್ಚೇತನ ಕ್ರಮಗಳು ಅಗತ್ಯವಾಗಿರುವ ಸಹಕಾರಿ ಕ್ಷೇತ್ರವನ್ನು ತೆರಿಗೆ ವ್ಯಾಪ್ತಿಗೆ ತರುವುದರಿಂದ ಅದು ಇನ್ನಷ್ಟು ಸೊರಗುವುದು ಖಚಿತ. ಜನರ ಪಾಲುದಾರಿಕೆಯ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಅಭಿವೃದ್ಧಿಗೆ ಅಡ್ಡಗಾಲು ಹಾಕಿದಂತೆ. ಕೇಂದ್ರಕ್ಕೆ ಈ ದುರ್ಬುದ್ಧಿ ಏಕೆ ಬಂತೋ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.