ಗ್ರಾಮಸಭೆಗಳ ಮಹತ್ವ ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಹಾವಳಿಯ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ಹೆಚ್ಚು ನಿಯಂತ್ರಣಕ್ಕೆ ಒಳಪಡಿಸಲು ಕೇಂದ್ರ ಸರ್ಕಾರ ಬಲಿಷ್ಠವಾದ ಗಣಿ ಮತ್ತು ಖನಿಜ (ಅಭಿವೃದ್ಧಿ ಹಾಗೂ ನಿಯಂತ್ರಣ) ವಿಧೇಯಕವನ್ನು ರೂಪಿಸಿದೆ. ಗಣಿಗಾರಿಕೆಗೆ ಪರವಾನಗಿ ನೀಡುವ ಮೊದಲು ಸ್ಥಳೀಯ ಗ್ರಾಮಸಭೆಯ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಮಸಭೆಯ ಅನುಮತಿ ಕಡ್ಡಾಯಗೊಳಿಸಿರುವುದರಿಂದ ತಮ್ಮ ವ್ಯಾಪ್ತಿಯ ಖನಿಜ ಸಂಪತ್ತಿನ ಬಳಕೆ ಕುರಿತಾಗಿ ಸ್ಥಳೀಯ ಜನತೆಯ ಅಭಿಮತಕ್ಕೆ ಮಾನ್ಯತೆ ಸಿಗುವಂತಾಗುತ್ತದೆ. ಖನಿಜ ಸಂಪತ್ತು ಇರುವ ರಾಜ್ಯಗಳಲ್ಲಿ ಗಣಿಗಾರಿಕೆಯನ್ನು ನಿಯಂತ್ರಿಸುವ ಇಲಾಖೆಗಳಿಗೆ ಹೆಚ್ಚಿನ ಸಿಬ್ಬಂದಿ ಹಾಗೂ ಅಧಿಕಾರ ಇರುವಂತೆಯೂ ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಉದ್ದೇಶಿತ ಕರಡಿನಲ್ಲಿ ಗಣಿಗುತ್ತಿಗೆ ಪಡೆದವರಿಗೆ ಯಾವುದೇ ರಿಯಾಯಿತಿ ಇಲ್ಲವೇ ಸೌಲಭ್ಯ ನೀಡುವಂಥ ಪ್ರಮುಖ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳು ಕೈಗೊಳ್ಳುವುದಿದ್ದರೂ ಗ್ರಾಮಸಭೆಯ ಅಭಿಮತ ಪಡೆಯಬೇಕು ಎಂಬ ನಿಬಂಧನೆ ಇದೆ. ಅನಧಿಕೃತ ಗಣಿಗಾರಿಕೆ ಮತ್ತು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ ಗಣಿ ಉದ್ಯಮಿಗಳಿಗೆ ನಷ್ಟದ ಹತ್ತು ಪಟ್ಟು ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುವುದು ಕೂಡ ಕರಡು ವಿಧೇಯಕದ ಗಮನಾರ್ಹ ಅಂಶಗಳು. ಗಣಿಗಾರಿಕೆಯ ಪರವಾನಗಿಯನ್ನು ನೈಸರ್ಗಿಕ ಸಂಪತ್ತಿನ ವ್ಯವಸ್ಥಿತ ಲೂಟಿಗಾಗಿ ಅನಿರ್ಬಂಧಿತವಾಗಿ ಅನಿಯಂತ್ರಿತವಾಗಿ ಬಳಸಿಕೊಂಡ ಕರ್ನಾಟಕದ `ಗಣಿ ಧಣಿ~ಗಳ ಸ್ವೇಚ್ಛಾ ವರ್ತನೆ ಹೀಗೆ ರಾಷ್ಟ್ರಮಟ್ಟದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವುದಕ್ಕೆ ಹಿನ್ನೆಲೆಯಾಗಿರುವುದು ರಾಜ್ಯ ಸರ್ಕಾರದ ಕಾರ್ಯದಕ್ಷತೆಗೆ ಕೆಟ್ಟ ನಿದರ್ಶನ. ಗ್ರಾಮಸಭೆಯ ಅನುಮತಿ ಕಡ್ಡಾಯವೆಂಬ ನಿಯಮ ಕರ್ನಾಟಕದ ಮಟ್ಟಿಗೆ ಹೊಸದೇನೂ ಅಲ್ಲ. ಮರಳು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯದಲ್ಲಿ ನೀಡಲಾದ ಈ ಅಧಿಕಾರ ದುರುಪಯೋಗವಾದದ್ದೇ ಹೆಚ್ಚು. ಗ್ರಾಮಪಂಚಾಯತ್ ಮಟ್ಟಕ್ಕೂ ಇಳಿದ ಜನಪ್ರತಿನಿಧಿಗಳು ಮತ್ತು ನೌಕರವರ್ಗದ ನಡುವಣ ಭ್ರಷ್ಟ ಅಪವಿತ್ರ ಮೈತ್ರಿಯ ಪರಿಣಾಮವಾಗಿ ಮರಳಿನಂಥ ಸಂಪನ್ಮೂಲ ಅಗ್ಗದ ಬೆಲೆಗೆ ಗುತ್ತಿಗೆದಾರರಿಗೆ ಸಿಗುವಂತೆ ಮಾಡಿದ ಪ್ರಕರಣಗಳು ರಾಜ್ಯದಲ್ಲಿ ಕಡಿಮೆ ಇಲ್ಲ. ಇಂಥ ವ್ಯವಸ್ಥೆ ಇರುವಾಗ ಬೆಲೆಯುಳ್ಳ ಖನಿಜಗಳ ಗಣಿಗಾರಿಕೆಗೆ ಗ್ರಾಮಸಭೆಯ ಅನುಮತಿ ಕಡ್ಡಾಯವಾದರೆ ಭ್ರಷ್ಟಕೂಟಗಳ ಆದಾಯಕ್ಕೆ ಇನ್ನೊಂದು ಫಲವತ್ತಾದ ಮೂಲವನ್ನು ಒದಗಿಸಿಕೊಟ್ಟಂತಾಗುತ್ತದೆ. ಯಾವುದೇ ನಿಯಮ ರೂಪುಗೊಂಡರೂ ಅದನ್ನು ಹೇಗೆ ಸ್ವಂತಕ್ಕೆ ಬಳಸಿಕೊಳ್ಳಬಹುದೆಂಬ ಚಿಂತನೆಯೇ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವುದನ್ನು ಕೇಂದ್ರ ಗಣಿಖಾತೆ ನಿರ್ಲಕ್ಷಿಸಬಾರದು. ರಾಜ್ಯ ಸರ್ಕಾರಗಳಲ್ಲಿ ಈ ನಿಟ್ಟಿನಲ್ಲಿ ಆಗಿರುವ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ಪರಿಷ್ಕರಿಸಬೇಕು. ಕಠಿಣ ನಿಯಮಗಳು ರೂಪಿಸಿದರೂ ಅವು ಕ್ರಮಬದ್ಧವಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವ ಎಚ್ಚರವನ್ನೂ ವಹಿಸಬೇಕು. ಕಾಯ್ದೆ ಉಲ್ಲಂಘಿಸಿ ನಷ್ಟ ಉಂಟು ಮಾಡುವುದಕ್ಕೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವಂಥ ಅವಕಾಶಗಳಿದ್ದರೂ ಅವನ್ನು ಯಶಸ್ವಿಯಾಗಿ ಬಳಸಿಕೊಂಡಾಗಲೇ ನಿಯಮಗಳನ್ನು ರೂಪಿಸಿದ್ದಕ್ಕೆ ಸಾರ್ಥಕತೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.