ಅಸಹ್ಯಕರ ಆಚರಣೆ ನಿಷೇಧಿಸಲಿ ಮೇಲುಜಾತಿಯವರು ಊಟ ಮಾಡಿ ಬಿಟ್ಟ ಎಂಜಲು ಎಲೆಗಳ ಮೇಲೆ ಉರುಳಾಡಿ ಹರಕೆ ತೀರಿಸುವ ಅಸಹ್ಯಕರ ಪದ್ಧತಿಯನ್ನು ನಿಷೇಧಿಸಲು ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಲಿ ಕೈಗೊಂಡ ನಿರ್ಧಾರವನ್ನು ಸಾರ್ವಜನಿಕ ಅಭಿಪ್ರಾಯದ ಹೆಸರಿನಲ್ಲಿ ಜಿಲ್ಲಾಡಳಿತ ಸ್ಥಗಿತಗೊಳಿಸಿದ್ದು ಖಂಡನೀಯ. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣದಲ್ಲಿ ಇರುವ ಈ ದೇವಾಲಯದಲ್ಲಿ ಇಂಥ ವಿಚಿತ್ರ ಸೇವಾ ಪದ್ಧತಿ `ಮಡೆಸ್ನಾನ~ದ ಹೆಸರಿನಲ್ಲಿ ಇಷ್ಟು ವರ್ಷಗಳ ಕಾಲ ಅಬಾಧಿತವಾಗಿ ನಡೆದುಕೊಂಡು ಬಂದಿರುವುದೇ ಆಶ್ಚರ್ಯ. ಮೇಲುವರ್ಗದವರು ಉಂಡ ಎಂಜಲು ಎಲೆಗಳ ಮೇಲೆ ಉರುಳುಸೇವೆ ಸಲ್ಲಿಸುವುದರಿಂದ ಕೆಳ ಜಾತಿಯವರ ಸಂಕಷ್ಟಗಳು ನಿವಾರಣೆ ಆಗುತ್ತವೆ ಎಂಬ ಪ್ರತೀತಿಯನ್ನು ಬಹುಕಾಲದಿಂದ ಉಳಿಸಿಕೊಂಡ ಧಾರ್ಮಿಕ ವ್ಯವಸ್ಥೆಯ ಅನಾಗರಿಕ ಧೋರಣೆಯ ಪ್ರತೀಕ ಈ ಮಡೆಸ್ನಾನದ ಹರಕೆ. ಚರ್ಮರೋಗ ನಿವಾರಣೆ, ಮಕ್ಕಳಾಗದವರಿಗೆ ಸಂತಾನಪ್ರಾಪ್ತಿಯಂತಹ ಸಮಸ್ಯೆಗಳ ಪರಿಹಾರಕ್ಕೆ ಈ ಹರಕೆ ಪರಿಹಾರವೆಂಬಂತೆ ಬಿಂಬಿಸುವ ಮೂಲಕ ಅಸಹ್ಯಕರ ಸೇವಾಪದ್ಧತಿಯನ್ನು ಪೋಷಿಸಿಕೊಂಡು ಬರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂಥ ವಿದ್ಯಮಾನ. ಎಂಜಲು ಎಲೆಗಳ ಮೇಲೆ ಬರಿಮೈಯಲ್ಲಿ ಉರುಳಾಡುವ ಅನೈರ್ಮಲ್ಯಕರ ಸೇವಾ ಕೈಂಕರ್ಯವನ್ನು ಯಾವ ದೇವರೂ ಇಷ್ಟಪಡುವುದಿಲ್ಲ ಎಂಬ ವಾಸ್ತವ ಸಂಗತಿಯನ್ನು ಈ ಬಗೆಯ ಹರಕೆಗೆ ಪಟ್ಟು ಹಿಡಿಯುವ ಅಮಾಯಕ ಭಕ್ತರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಕೆಳವರ್ಗದವರನ್ನು ಅನಿಷ್ಟ ನಿವಾರಣೆಗೆ ಬಳಸಿಕೊಳ್ಳುವಂಥ `ಅಜಲು~ ಪದ್ಧತಿಯನ್ನು ನಿಷೇಧಿಸಿದಂತೆಯೇ ಈ ಹರಕೆಯನ್ನೂ ಕಾನೂನು ಪ್ರಕಾರ ನಿಷೇಧಿಸಲು ಸರ್ಕಾರ ಮುಂದಾಗಬೇಕು. `ಮಡೆಸ್ನಾನ~ದಂತಹ ಅಸಹ್ಯಕರವೂ ಅನಾರೋಗ್ಯಕರವೂ ಆದ ಹಲವು ಬಗೆಯ ಹರಕೆ ಪದ್ಧತಿಗಳು ನಾಡಿನ ಬೇರೆ ಬೇರೆ ಧಾರ್ಮಿಕ ಕೇಂದ್ರಗಳಲ್ಲಿ ಉಳಿದುಕೊಂಡಿವೆ. ದೇವದಾಸಿಯಂಥ ಅನಿಷ್ಟ ಪದ್ಧತಿಯೂ ಇಂಥದ್ದೇ ಹರಕೆಯ ವಿಧಾನ. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆಡಳಿತದಲ್ಲಿರುವ ಅನೇಕ ದೇವಾಲಯಗಳಲ್ಲಿ ಪರಂಪರಾಗತ ಆಚರಣೆಯ ನೆಪದಲ್ಲಿ ಮೇಲುಜಾತಿ ಮತ್ತು ಕೆಳಜಾತಿಯವರಿಗಾಗಿ ಊಟದಲ್ಲಿ ಪಂಕ್ತಿಭೇದದ ಆಚರಣೆಗಳೂ ಇವೆ. ಇಂಥ ಅಸಮಾನತೆಯ ಆಚರಣೆಗಳಿಗೆ ಸರ್ಕಾರ ಅವಕಾಶ ನೀಡಬಾರದು. ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣದಲ್ಲಿರುವ ಯಾವ ದೇವಾಲಯಗಳಲ್ಲಿಯೂ ಜಾತಿಯ ಕಾರಣಕ್ಕೆ ಸೇವೆ ಮತ್ತು ಸೌಕರ್ಯಗಳ ವಿಚಾರದಲ್ಲಿ ಭೇದ ಮಾಡುವುದು ಕಾನೂನಿಗೆ ವಿರುದ್ಧವಾದುದು ಎಂಬುದನ್ನು ದೇವಾಲಯಗಳ ಸ್ಥಳೀಯ ಆಡಳಿತ ಮಂಡಲಿಗಳು ಅರಿತುಕೊಳ್ಳಬೇಕು. ಪರಂಪರೆಯ ಹೆಸರಿನಲ್ಲಿ ಉಳಿದುಕೊಂಡು ಬಂದ ಅನಾಗರಿಕ, ಅಸಹ್ಯಕರ, ಹಿಂಸಾತ್ಮಕ ಹರಕೆ ಪದ್ಧತಿ ಮತ್ತು ಆಚರಣೆಗಳನ್ನು ನಿಷೇಧಿಸಬೇಕು ಇಲ್ಲವೇ ಅಂಥ ಹರಕೆಗಳು ಹೆಚ್ಚು ನಾಗರಿಕ ಸ್ವರೂಪದಲ್ಲಿರುವಂತೆ ಅವನ್ನು ಸುಧಾರಿಸಬೇಕು. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಮೇಲು ಕೀಳು ಎಂಬ ಸಾಮಾಜಿಕ ಭೇದಕ್ಕೆ ಆಸ್ಪದವಿಲ್ಲ. ಸಾರ್ವಜನಿಕರಿಗೆ ಮುಕ್ತವಾದ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ, ಅದು ಸರ್ಕಾರದ ನಿಯಂತ್ರಣಕ್ಕೆ ಒಳಪಡದಿದ್ದರೂ ಕೂಡ, ಅಸಮಾನತೆಗಾಗಲೀ ಅಸ್ಪೃಶ್ಯತೆಗಾಗಲೀ ಆಸ್ಪದವಿಲ್ಲ ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಡಬೇಕು. ಜನತೆ ಧಾರ್ಮಿಕ ಕೇಂದ್ರಗಳಿಗೆ ಶಾಂತಿಯನ್ನೂ ನೆಮ್ಮದಿಯನ್ನೂ ಹುಡುಕಿಕೊಂಡು ಬರುತ್ತಾರೆ. ಅವರು ಅಶಾಂತ ಮನಃಸ್ಥಿತಿಯಲ್ಲಿ ವಾಪಸಾಗುವಂತೆ ಆಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.