ಬಿಕ್ಕಟ್ಟಿನಲ್ಲಿ ಪಾಕ್- ಅಮೆರಿಕ ಮೈತ್ರಿ ಪಾಕಿಸ್ತಾನದ ಮಿಲಿಟರಿ ನೆಲೆಯ ಮೇಲೆ ಆಫ್ಘಾನಿಸ್ತಾನದಲ್ಲಿರುವ `ನ್ಯಾಟೊ~ ಪಡೆಗಳು ನಡೆಸಿದ ದಾಳಿ ನಿರೀಕ್ಷೆಯಂತೆಯೇ ಪಾಕಿಸ್ತಾನ ಮತ್ತು ಅಮೆರಿಕದ ನಡುವೆ ವಿರಸ ಹೆಚ್ಚಲು ಕಾರಣವಾಗಿದೆ. ನ್ಯಾಟೊ ಪಡೆಗಳ ಮುಖ್ಯಸ್ಥರು ಆ ಘಟನೆಗೆ ವಿಷಾದ ವ್ಯಕ್ತ ಪಡಿಸಿದ ಮೇಲೂ ಪಾಕಿಸ್ತಾನ ಸಮಾಧಾನಗೊಂಡಿಲ್ಲ. ಈ ಘಟನೆಯ ನಂತರ ಆಫ್ಘಾನಿಸ್ತಾನದಲ್ಲಿನ ನ್ಯಾಟೊ ಪಡೆಗಳಿಗೆ ಅಗತ್ಯ ಸಾಮಗ್ರಿ ಸಾಗಿಸುತ್ತಿದ್ದ ಕರಾಚಿ ರಸ್ತೆ ಮಾರ್ಗವನ್ನು ಮುಚ್ಚಿರುವುದು ಮತ್ತು ಪೂರ್ವ ಕುನಾರ್ ಪ್ರದೇಶದಲ್ಲಿರುವ ವಾಯುನೆಲೆಯನ್ನು ಎರಡು ವಾರಗಳೊಳಗಾಗಿ ತೆರವು ಮಾಡಬೇಕೆಂದು ಪಾಕಿಸ್ತಾನ ಒತ್ತಾಯಿಸುತ್ತಿರುವುದು ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ. 28 ಮಂದಿ ಸೈನಿಕರ ಸಾವಿಗೆ ಕಾರಣವಾಗಿರುವ ಈ ಘಟನೆ ಸಹಜವಾಗಿಯೇ ಪಾಕಿಸ್ತಾನದಲ್ಲಿ ಉಗ್ರವಾದಿಗಳು ಮತ್ತೆ ಮೇಲುಗೈ ಸಾಧಿಸಲು ಕಾರಣವಾಗಿದೆ. ಜನರನ್ನು ಭಾವೋದ್ರೇಕಕ್ಕೆ ಒಳಗುಮಾಡುವಲ್ಲಿ ಉಗ್ರವಾದಿಗಳು ಯಶಸ್ವಿಯಾಗಿದ್ದಾರೆ. ಅಮೆರಿಕದ ರಹಸ್ಯ ಮಿಲಿಟರಿ ಪಡೆಗಳು ಪಾಕಿಸ್ತಾನದಲ್ಲಿ ಅಡಗಿದ್ದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಿದ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ಉಳಿದಿರುವಾಗಲೇ ಈ ಘಟನೆ ನಡೆದಿದೆ. ಈ ಘಟನೆಗಳಿಂದಾಗಿ ಉಗ್ರವಾದಿಗಳು ಸರ್ಕಾರದ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ. ಹೀಗಾಗಿಯೇ ಪಾಕಿಸ್ತಾನ ಸರ್ಕಾರ ಈ ವಿಚಾರದಲ್ಲಿ ಕಟುವಾದ ನಿಲುವನ್ನು ತಳೆದಿದೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವಣ ಸಂಬಂಧಗಳು ಮತ್ತೊಮ್ಮೆ ಬಿಕ್ಕಟ್ಟಿಗೆ ಒಳಗಾಗಿವೆ. ಆಫ್ಘಾನಿಸ್ತಾನದ ಗೋಜಲಿನಲ್ಲಿ ಎರಡೂ ದೇಶಗಳು ಸಿಕ್ಕಿಕೊಂಡಿದ್ದು ಈ ಸಂದರ್ಭದಲ್ಲಿ ಅವು ಮೈತ್ರಿಭಂಗ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಬಿಕ್ಕಟ್ಟು ಬಗೆಹರಿಸಿಕೊಳ್ಳುವುದು ಎರಡೂ ದೇಶಗಳಿಗೆ ಅನಿವಾರ್ಯ. ಈ ಹಿಂದಿನ ಬಿಕ್ಕಟ್ಟಿನ ಸಂದರ್ಭಗಳನ್ನು ಪಾಕಿಸ್ತಾನ ಬಳಸಿಕೊಂಡು ಆರ್ಥಿಕ ಮತ್ತು ಮಿಲಿಟರಿ ಬಲ ಹೆಚ್ಚಿಸಿಕೊಂಡಿದೆ. ಈಗಲೂ ಹಾಗೆಯೇ ಆಗಬಹುದು. ನ್ಯಾಟೊ ದಾಳಿ ಘಟನೆಯ ಹಿನ್ನೆಲೆಯಲ್ಲಿ ಚೀನಾ ಪಾಕಿಸ್ತಾನದ ಬೆಂಬಲಕ್ಕೆ ನಿಂತಿರುವುದು ಭಾರತ ವಲಯದಲ್ಲಿ ಬದಲಾಗುತ್ತಿರುವ ಅಂತರರಾಷ್ಟ್ರೀಯ ಸಂಬಂಧಗಳ ಸೂಚಕ. ಈ ಘಟನೆಯ ನಂತರ ಪಾಕಿಸ್ತಾನದ ಆಡಳಿತಾರೂಢರು ಚೀನಾದ ನೆರವು ಕೋರಿರುವುದು ಭಾರತದ ದೃಷ್ಟಿಯಿಂದ ಆತಂಕಕಾರಿಯಾದ ಬೆಳವಣಿಗೆ. ಭಾರತ ಮತ್ತು ಪಾಕಿಸ್ತಾನದ ನಡುವಣ ವಿವಾದಗಳ ವಿಚಾರದಲ್ಲಿ ಚೀನಾ ಮೊದಲಿನಿಂದಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಲೇ ಬಂದಿದೆ. ಭಾರತ ಮತ್ತು ಚೀನಾ ನಡುವಣ ಸಂಬಂಧಗಳ ಸುಧಾರಣೆ ದಿಸೆಯಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಆಫ್ಘಾನಿಸ್ತಾನ ಬಿಕ್ಕಟ್ಟು ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧಗಳನ್ನು ಮತ್ತಷ್ಟು ಸೂಕ್ಷ್ಮಗೊಳಿಸಿದೆ. ಆಫ್ಘಾನಿಸ್ತಾನದ ಮಿಲಿಟರಿ ಗೋಜಲಿನಲ್ಲಿ ಭಾರತ ಸಿಕ್ಕಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಪಾಕಿಸ್ತಾನ ಮತ್ತು ಚೀನಾದ ನಡುವೆ ಮೈತ್ರಿ ಹೆಚ್ಚಿದ್ದರಿಂದಾಗಿ ಭಾರತ ಹೆದರಬೇಕಿಲ್ಲ. ಈ ಎರಡೂ ದೇಶಗಳ ಜೊತೆ ಬಾಂಧವ್ಯ ಸುಧಾರಣೆಯ ಯತ್ನಗಳನ್ನು ಮುಂದುವರಿಸಿರುವ ಭಾರತ ಈ ಸನ್ನಿವೇಶವನ್ನು ರಾಜತಾಂತ್ರಿಕ ಚಾಣಾಕ್ಷ್ಯತೆಯಿಂದ ನಿಭಾಯಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.