ಅವ್ಯವಹಾರ ಮುಚ್ಚಿಹಾಕುವ ಹುನ್ನಾರ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿರುವ ಕೋಟ್ಯಂತರ ರೂಪಾಯಿಗಳ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಪತ್ರ ಬರೆದ ಕೆಲವೇ ದಿನಗಳಲ್ಲಿ ಆಯುಕ್ತರ ಬದಲಾವಣೆ ಕಾಕತಾಳೀಯವಷ್ಟೆ. ಹಿಂದಿನ ಆಯುಕ್ತರ ಕೋರಿಕೆಯಂತೆಯೇ ವರ್ಗಾವಣೆ ಮಾಡಿರುವುದಾಗಿ ಸರ್ಕಾರ ಹೇಳುತ್ತಿದೆ. ಇದನ್ನು ಸಿದ್ದಯ್ಯ ಕೂಡ ಸ್ಪಷ್ಟಪಡಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಮಗಾರಿಗಳ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸುವಂತೆ ಮಾಡಿರುವ ಶಿಫಾರಸ್ಸಿನ ಬಗೆಗೆ ಆಡಳಿತಾರೂಢ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅದನ್ನು ಸಿಒಡಿ ಮೂಲಕ ತನಿಖೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ತರಲಾಯಿತೆಂಬ ಬೆಳವಣಿಗೆ ದುರದೃಷ್ಟಕರ. ಈ ಮಧ್ಯೆ ಜನಪ್ರತಿನಿಧಿಗಳೇ ಗುತ್ತಿಗೆದಾರರನ್ನು ಸಮರ್ಥಿಸಿಕೊಳ್ಳುವುದು, ದಾಖಲೆಗಳಿದ್ದ ಕಾರ್ಯಾಲಯಕ್ಕೆ ಬೆಂಕಿ ಬಿದ್ದ ಘಟನೆ, ಎಂಜಿನಿಯರುಗಳು ಮತ್ತು ಗುತ್ತಿಗೆದಾರರು ಬೀದಿಗೆ ಇಳಿದು ಪ್ರತಿಭಟನೆ ಮಾಡಿರುವುದು ವಿಚಿತ್ರ. ಸರಣಿಯಂತೆ ನಡೆದಿರುವ ಈ ಬೆಳವಣಿಗೆಗಳನ್ನು ಗಮನಿಸಿದರೆ ಪಾಲಿಕೆಯಲ್ಲಿ ನಡೆದಿರುವ ಅಕ್ರಮ ವ್ಯವಹಾರಗಳನ್ನು ಸರ್ಕಾರದ ನೆರವು ಪಡೆದು ಮುಚ್ಚಿಹಾಕುವ ಹುನ್ನಾರ ನಡೆದಿದೆ ಎನ್ನುವುದಕ್ಕೆ ಅವಕಾಶ ಕೊಟ್ಟಂತಾಗಿದೆ. ಪಾಲಿಕೆಯಲ್ಲಿನ ದುರಾಡಳಿತಕ್ಕೆ ಸರ್ಕಾರ ತನ್ನ ತಲೆ ಕೊಡಬಾರದು. ಡಿನೋಟಿಫಿಕೇಷನ್ ಮತ್ತು ಇತರೆ ಹಲವು ಭ್ರಷ್ಟಾಚಾರ ಪ್ರಕರಣಗಳಿಂದ ಸರ್ಕಾರಕ್ಕೆ ಈಗಾಗಲೇ ಕೆಟ್ಟ ಹೆಸರು ಇರುವುದರಿಂದ ಪಾಲಿಕೆಯ ಅವ್ಯವಹಾರಗಳ ತನಿಖೆ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವುದು ಅವಶ್ಯ. ಈ ಎಲ್ಲ ಗೋಜಲು ಗೊಂದಲಗಳ ನಡುವೆ ಪಾಲಿಕೆಯ ನೂತನ ಆಯುಕ್ತರಾಗಿರುವ ಎಂ.ಕೆ. ಶಂಕರಲಿಂಗೇಗೌಡರು `ನನಗೆ ಹಳೆಯದನ್ನೆಲ್ಲ ಕೆದಕುವುದಕ್ಕೆ ಇಷ್ಟವಿಲ್ಲ~ ಎಂದು ಸ್ಪಷ್ಟಪಡಿಸಿರುವುದು ಅವ್ಯವಹಾರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುವವರಿಗೆ ಒತ್ತಾಸೆ ನೀಡಿದಂತಾಗುತ್ತದೆ. ಪಾಲಿಕೆ ಆಡಳಿತದ ವರಿಷ್ಠ ಅಧಿಕಾರಿಯಾಗಿ ಆಯುಕ್ತರು ಇಂಥ ನಿಲುವನ್ನು ಪ್ರಕಟಿಸುವ ಮೂಲಕ ತಾವು ಆಡಳಿತಾರೂಢ ಪಕ್ಷದ ಕೈಗೊಂಬೆ ಎಂಬ ಸಂದೇಶ ನೀಡಿದಂತಾಗುತ್ತದೆ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾಲಿಕೆ ಆಡಳಿತವನ್ನು ನಡೆಸುವುದಕ್ಕೆ ಯಾರ ಆಕ್ಷೇಪವೂ ಇರುವುದಿಲ್ಲ. ಅಂತೆಯೇ ಈಗಾಗಲೇ ಬಯಲಿಗೆ ಬಂದಿರುವ ಹಗರಣಗಳ ಕುರಿತಾಗಿ ನ್ಯಾಯಬದ್ಧವಾದ ಮತ್ತು ಪಾರದರ್ಶಕವಾದ ತನಿಖೆ ನಡೆಯುವಂತೆ ನೋಡಿಕೊಳ್ಳುವ ಕರ್ತವ್ಯವನ್ನೂ ಅವರು ನಿರ್ವಹಿಸಬೇಕು. ಭ್ರಷ್ಟಾಚಾರದ ಪ್ರಕರಣಗಳ ತನಿಖೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ಧೋರಣೆ ಈಗಾಗಲೇ ಸಾರ್ವಜನಿಕ ಟೀಕೆಗೆ ಒಳಗಾಗಿದೆ. ಲೋಕಾಯುಕ್ತದಿಂದ ತನಿಖೆಗೆ ಒಳಪಟ್ಟು ಶಿಸ್ತುಕ್ರಮದ ತೂಗುಕತ್ತಿಯನ್ನು ಎದುರಿಸುತ್ತಿದ್ದ ಅಧಿಕಾರಿಗಳನ್ನೇ ಲೋಕಾಯುಕ್ತದ ವರಿಷ್ಠ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಆ ತನಿಖಾ ಸಂಸ್ಥೆಯನ್ನೇ ದುರ್ಬಲಗೊಳಿಸಿದೆ. ಲೋಕಾಯುಕ್ತರ ನೇಮಕಕ್ಕೂ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೂರೂವರೆ ವರ್ಷಗಳಲ್ಲಿ ಕೈಗೊಂಡ ಪ್ರತಿ ನಿರ್ಧಾರದ ಹಿಂದೆಯೂ ರಾಜಕೀಯ ಲಾಭದ ದೃಷ್ಟಿಯೇ ಗೋಚರವಾಗಿದೆ. ಪಾಲಿಕೆ ಆಡಳಿತಕ್ಕೆ ಸಂಬಂಧಿಸಿ ಇದು ಮತ್ತಷ್ಟು ನಿಚ್ಚಳವಾಗಿದೆ. ಇದು ಆಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.