ಮನಃಸ್ಥಿತಿ ಬದಲಾಗಬೇಕು ಪಾಶ್ಚಾತ್ಯ ದೇಶಗಳಲ್ಲಿ ಮಹಿಳೆಗೆ ಸ್ವಾತಂತ್ರ್ಯ ಮತ್ತು ಸಮಾನತೆ ಸಿಗಲು ನೂರಾರು ವರ್ಷಗಳ ಹೋರಾಟವೇ ನಡೆದಿದೆ. ಈ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಸಿಗುವಲ್ಲಿ ತೀವ್ರತರವಾದ ಹೋರಾಟವೇನೂ ಆಗಿಲ್ಲ. ಸಂವಿಧಾನ ತಜ್ಞರ ದೂರದೃಷ್ಟಿಯಿಂದಾಗಿ ಕಾಯ್ದೆಬದ್ಧವಾಗಿಯೇ ಪುರುಷರಿಗೆ ಸರಿಸಮನಾಗಿ ಮತದಾನ ಮುಂತಾದ ಹಕ್ಕುಗಳು ಲಭ್ಯವಾಗಿರುವುದು ಶ್ಲಾಘನೀಯ. ಮಹಿಳೆಯೂ ಪುರುಷರಂತೆ ಸಮಾನಳು ಎನ್ನುವ ಅರಿವು ಹೆಚ್ಚಾದಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಈಗ ಕಾಯ್ದೆ ಬದ್ಧವಾಗಿಯೇ ಆಗಿದೆ. ಕುಟುಂಬಗಳಲ್ಲಿ ಪತಿ ಮತ್ತು ಅತ್ತೆ ಮಾವಂದಿರ ಕಿರುಕುಳದಿಂದ ವಿವಾಹಿತ ಮಹಿಳೆಯರನೇಕರು ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಅಸಹಾಯಕ ಮಹಿಳೆಯರು ಬದುಕಿನ ಸವಾಲುಗಳನ್ನು ಎದುರಿಸಲಾಗದೆ ನೇಣಿಗೆ ಶರಣಾಗುತ್ತಿದ್ದಾರೆ. ವಿದ್ಯಾವಂತ ಮಹಿಳೆಯರು ಕೆಲಸ ಮಾಡುವ ಕಚೇರಿಗಳಲ್ಲಿಯೂ ಕಿರುಕುಳ ತಪ್ಪಿಲ್ಲ. ಇದನ್ನೆಲ್ಲ ತಪ್ಪಿಸಲು ಕಾಯ್ದೆಗಳು ಬಂದಿವೆ. ಆದರೂ ಪುರುಷ ಪ್ರಧಾನವಾದ ಭಾರತದಲ್ಲಿ ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಿಗಬೇಕಾದಷ್ಟು ಸ್ಥಾನಮಾನ ಸಿಕ್ಕಿಲ್ಲ. ಮಹಿಳೆಯರು ಸ್ವಂತಶಕ್ತಿಯಿಂದ ರಾಜಕೀಯದಲ್ಲಿ ಮುಂದೆ ಬರುವುದು ಇನ್ನೂ ಮರೀಚಿಕೆಯೇ ಆಗಿದೆ. ಅದಕ್ಕಾಗಿ ಸಂಸತ್, ವಿಧಾನ ಮಂಡಲಗಳಲ್ಲಿ ಶೇ 33ರಷ್ಟು ಮೀಸಲಾತಿ ಜಾರಿಗೆ ತರುವ ವಿಚಾರವೂ ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಮಹಿಳೆಯರ ಅಭಿವೃದ್ಧಿಗಾಗಿ ಕಾನೂನಿನ ಬಲದ ಜೊತೆಗೆ ಸಮಾಜದಲ್ಲಿನ ಮನಃಸ್ಥಿತಿ ಬದಲಾಗುವ ಮೂಲಕ ಒತ್ತಾಸೆ ಸಿಗಬೇಕಿದೆ. ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ಅಪರಾಧಗಳನ್ನು ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ `ಎಷ್ಟೇ ತೀವ್ರತರವಾದ ಕಾನೂನುಗಳನ್ನು ಜಾರಿಗೊಳಿಸಿದರೂ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಸಾಧ್ಯವಾಗಿಲ್ಲ~ ಎನ್ನುವ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರ ಮಾತುಗಳಲ್ಲಿ ಸತ್ಯವಿದೆ. ಮಹಿಳೆ ಪುರುಷನಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ. ತಾಯಿ, ಪತ್ನಿ ಮತ್ತು ಸಹೋದರಿಯ ಸ್ಥಾನದಲ್ಲಿದ್ದರೂ, ಮಹಿಳೆ ತನ್ನ ಅಧೀನದಲ್ಲಿರಬೇಕೆನ್ನುವ ಪುರುಷರ ಊಳಿಗಮಾನ್ಯ ಮನಃಸ್ಥಿತಿ ಇನ್ನೂ ಬದಲಾಗಿಲ್ಲ. ಇದರಿಂದಾಗಿಯೇ ಮಹಿಳೆಯ ಮೇಲೆ ದೌರ್ಜನ್ಯ, ಅತ್ಯಾಚಾರ ಮತ್ತು ವರದಕ್ಷಿಣೆ ಕಿರುಕುಳ ನಿರಂತರವಾಗಿ ನಡೆಯುತ್ತಿದೆ. ಇದನ್ನು ಕಾನೂನಿನ ಮೂಲಕವೇ ಬದಲಾವಣೆ ತರಬೇಕೆನ್ನುವುದು ಭಾಗಶಃ ನಿಜವಾದರೂ, ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಮಾನತೆ ಮತ್ತು ಮಾನವ ಹಕ್ಕುಗಳ ಬಗೆಗೆ ಜಾಗೃತಿ ಬರಬೇಕಿದೆ. ಈ ಕೆಲಸ ಆಗುತ್ತಿಲ್ಲ ಎಂದೇನೂ ಅಲ್ಲ. ಆದರೆ ಈ ದನಿ ಸಮಾಜದಲ್ಲಿ ತುಂಬಾ ಕ್ಷೀಣವಾಗಿದೆ. ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಬಂಧಿಸಿಟ್ಟಿರುವ ಮಹಿಳೆಗೆ ವಿಮೋಚನೆ ಸಿಗುವಂತಾಗಲು ಸಮಾಜದ ಆಂತರ್ಯದಲ್ಲಿಯೇ ಸುಧಾರಣೆ ಆಗಬೇಕು. ಭಾರತೀಯ ಸಮಾಜದಲ್ಲಿ ಮಹಿಳೆಯನ್ನು ಗೌರವಿಸುವಷ್ಟೇ, ಆಚರಣೆ ಮತ್ತಿತರ ಹೆಸರಿನಲ್ಲಿ ದುರುಪಯೋಗ ಮತ್ತು ಕೀಳಾಗಿ ಕಾಣುವ ಪ್ರವೃತ್ತಿಯೂ ಬದಲಾಗಬೇಕಿದೆ. ಕೇವಲ ಕಾಯ್ದೆ ಕಾನೂನಿನ ಮೂಲಕವೇ ಮಹಿಳೆಯರನ್ನು ರಕ್ಷಿಸುವ ವ್ಯವಸ್ಥೆ ನಾಗರಿಕ ಸಮಾಜದ ಲಕ್ಷಣವಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.