ಆರಂಭ ಶೂರತ್ವ ಅಗದಿರಲಿ ಆರಂಭ ಶೂರತ್ವಕ್ಕೆ ಹೆಸರಾದವರು ಭಾರತೀಯರು. ಆ ಗುಣ ನಮ್ಮ ಆಳುವವರಲ್ಲಿಯೂ ಇದೆ. ಆಶಯದಲ್ಲಿ ಉದಾತ್ತವಾಗಿರುವ ಸರ್ಕಾರದ ಬಹುತೇಕ ಯೋಜನೆಗಳು ಅನುಷ್ಠಾನದ ಹಂತಗಳಲ್ಲಿ ವಿಫಲವಾಗಲು ಇದು ಕಾರಣ. ಮಹತ್ವಾಕಾಂಕ್ಷೆಯ ಮತ್ತು ಬಹುಚರ್ಚಿತ `ಆಧಾರ್~ ಗುರುತಿನ ಚೀಟಿ ಯೋಜನೆಯೂ ಇದೇ ದಾರಿಯಲ್ಲಿ ಸಾಗುತ್ತಿದೆ. ಬ್ರಿಟನ್‌ನಂತಹ ಅಭಿವೃದ್ಧಿಹೊಂದಿದ ದೇಶ ಕೈಬಿಟ್ಟಿರುವ, ಅಮೆರಿಕ ಕನಿಷ್ಠ ಪ್ರಮಾಣದಲ್ಲಷ್ಟೆ ಬಳಸಬೇಕೆಂದು ನಿರ್ಧರಿಸಿರುವ `ವಿಶಿಷ್ಟ ಗುರುತು~ ನೀಡುವ ಯೋಜನೆಯನ್ನು ಭಾರತದಲ್ಲಿ ಪ್ರಾರಂಭಿಸಿದ್ದಾಗಲೇ ಅಪಸ್ವರಗಳು ಕೇಳಿಬಂದಿದ್ದವು. ಅವುಗಳು ಮುಖ್ಯವಾಗಿ ಭದ್ರತೆ ಮತ್ತು ತಾಂತ್ರಿಕತೆಗೆ ಸಂಬಂಧಿಸಿದ್ದು. ಅಡಿಯಿಂದ ಮುಡಿವರೆಗೆ ಭ್ರಷ್ಟಾಚಾರ ತುಂಬಿರುವ ದೇಶದಲ್ಲಿ `ಆಧಾರ್~ ವಿವರಗಳ ಸೋರಿಕೆಯಾಗುವುದಿಲ್ಲ ಎಂಬುದನ್ನು ನಂಬುವುದು ಕಷ್ಟ. ಆದರೆ ಈ ಕಾರಣಗಳನ್ನು ಮುಂದಿಟ್ಟುಕೊಂಡು ಪುನರ್‌ಪರಿಶೀಲನೆಗೊಳಪಡಿಸಲು ಸಾಧ್ಯವಿಲ್ಲದಷ್ಟು ದೂರಕ್ಕೆ ಯೋಜನೆಯ ಅನುಷ್ಠಾನ ಕಾರ್ಯ ಹೋಗಿದೆ. ಮೂಲ ಆಶಯಕ್ಕೆ ಭಂಗ ಉಂಟಾಗದ ಹಾಗೆ ಯೋಜನೆಯನ್ನು ಜಾರಿಗೊಳಿಸುವುದಷ್ಟೇ ಈಗ ಉಳಿದಿರುವ ದಾರಿ. ಈ ಕಾರ್ಯ ಸುಗಮವಾಗಿ ನಡೆಯುತ್ತಿಲ್ಲ ಎನ್ನುವುದು ಈಗಿನ ದೂರು. ಮಾಹಿತಿ ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕದಲ್ಲಿಯೇ `ಆಧಾರ್~ ಯೋಜನೆ ಕುಂಟುತ್ತಾ ಸಾಗಿದೆ. ನೋಂದಣಿಯಾದ 90 ದಿನಗಳೊಳಗೆ ಆಧಾರ್ ಸಂಖ್ಯೆ ಮತ್ತು ಸಂಬಂಧಿತ ಕಾರ್ಡನ್ನು ಅಂಚೆ ಮೂಲಕ ಮನೆಗೆ ಕಳುಹಿಸುವುದಾಗಿ ಹೇಳಿಕೊಂಡಿದ್ದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರಕ್ಕೆ (ಯುಐಡಿಎ) ತನ್ನ ಮಾತನ್ನು ಉಳಿಸಿಕೊಳ್ಳಲಾಗಿಲ್ಲ. ಮೈಸೂರು ಮತ್ತು ತುಮಕೂರು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಾದ್ಯಂತ ಇದೇ ಸ್ಥಿತಿ ಇದೆ. ಇಂತಹದ್ದೊಂದು ಬೃಹತ್ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ಮೂಲಸೌಕರ್ಯ ಮತ್ತು ತರಬೇತಿ ಹೊಂದಿರುವ ಸಿಬ್ಬಂದಿಯನ್ನು ಹೊಂದಿಲ್ಲದಿರುವುದು ಈಗಿನ ವೈಫಲ್ಯಕ್ಕೆ ಮುಖ್ಯ ಕಾರಣ. ಇಷ್ಟೊಂದು ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಜನ ಆಸಕ್ತಿ ತೋರಬಹುದೆಂಬ ನಿರೀಕ್ಷೆ ಇರಲಿಲ್ಲ ಎನ್ನುವ ಯುಐಡಿಎನ ಸಮಜಾಯಿಷಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಅಷ್ಟೇ. ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಬಹುತೇಕ ಸಿಬ್ಬಂದಿಯೇ ಇನ್ನೂ ಆಧಾರ್ ಗುರುತಿನ ಸಂಖ್ಯೆ ಹೊಂದಿಲ್ಲ ಎನ್ನುವುದು ಅದರ ಬೇಜವಾಬ್ದಾರಿಗೆ ಸಾಕ್ಷಿ. ಆಧಾರ್ ಗುರುತಿನ ಸಂಖ್ಯೆ ಹೊಂದಿಲ್ಲದ ಸಿಬ್ಬಂದಿ ರವಾನಿಸುವ ಮಾಹಿತಿಯನ್ನು ಡಾಟಾ ಸೆಂಟರ್ ಸ್ವೀಕರಿಸದೆ ಇರುವುದರಿಂದ ನೋಂದಣಿಗೊಳಿಸಿ ಐದಾರು ತಿಂಗಳುಗಳಾದರೂ ಕಾರ್ಡುಗಳನ್ನು ವಿತರಿಸಲಾಗಿಲ್ಲ. ಅರ್ಹ ಸಿಬ್ಬಂದಿಯ ಕೊರತೆಯಿಂದಾಗಿ ಅಗತ್ಯ ಇರುವಷ್ಟು ಆಧಾರ್ ಕೇಂದ್ರಗಳನ್ನು ತೆರೆಯಲೂ ಸಾಧ್ಯವಾಗಿಲ್ಲ. ರಾಜ್ಯಕ್ಕೆ 5000 ಕೇಂದ್ರಗಳು ಬೇಕಿದ್ದರೂ ಅದರ ಅರ್ಧದಷ್ಟನ್ನೂ ಇನ್ನು ತೆರೆಯಲಾಗಿಲ್ಲ. ಅಷ್ಟೇನೂ ಜಟಿಲವಲ್ಲದ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯುಐಡಿಎಗೆ ಸಾಧ್ಯವಾಗದಿರುವುದು ಅದರ ಕಾರ್ಯಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿಸುತ್ತದೆ. ಈಗ ಎದುರಾಗಿರುವ ಸಮಸ್ಯೆಗಳು ಪರಿಹರಿಸಲಾಗದಷ್ಟು ಜಟಿಲವಾದುದೇನಲ್ಲ. ಈ ಬಿಕ್ಕಟ್ಟನ್ನು ಯುಐಡಿಎ ಸವಾಲಾಗಿ ಸ್ವೀಕರಿಸಿ ತಕ್ಷಣ ಅಗತ್ಯ ಇರುವ ಮೂಲಸೌಕರ್ಯ ಮತ್ತು ಅರ್ಹ ಸಿಬ್ಬಂದಿಯನ್ನು ಒದಗಿಸಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು. ಇಲ್ಲದೆ ಹೋದರೆ ಈಗಾಗಲೇ ಅನುಮಾನಕ್ಕೆ ಈಡಾಗಿರುವ ಯೋಜನೆ ಜನರ ವಿಶ್ವಾಸವನ್ನು ಪೂರ್ಣವಾಗಿ ಕಳೆದುಕೊಳ್ಳಬೇಕಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.