ಅಕ್ಕಿ ಬೆಲೆಗೆ ಕಡಿವಾಣ ಅಗತ್ಯ ರಾಜ್ಯದಾದ್ಯಂತ ಅಕ್ಕಿ ಬೆಲೆ ಹಠಾತ್ತಾಗಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಬಳಕೆದಾರರು ಬೆಚ್ಚಿಬೀಳುವಂತಾಗಿದೆ. ಸಮಾಜದ ಎಲ್ಲ ವರ್ಗದ ಜನತೆಯ ತಿಂಗಳ ಬಜೆಟ್ ಏರುಪೇರಾಗಿದೆ. ಹೋಟೆಲ್ ತಿಂಡಿ, ಊಟವೂ ದುಬಾರಿಯಾಗಿ ಪರಿಣಮಿಸಿದೆ. 20 ದಿನಗಳಲ್ಲೇ ಪ್ರತಿ ಕೆಜಿಗೆ ರೂ 14 ರಂತೆ ತುಟ್ಟಿಯಾಗಿರುವುದು ಅಸಹಜ ವಿದ್ಯಮಾನವೇ ಸರಿ. ಕೈಕೊಟ್ಟ ಮುಂಗಾರಿನಿಂದ ಅಕ್ಕಪಕ್ಕದ ರಾಜ್ಯಗಳಲ್ಲಿ ಭತ್ತದ ಫಸಲು ಕಡಿಮೆಯಾಗಿದೆ. ನೀರಾವರಿ ಸೌಲಭ್ಯ ಕೊರತೆಯೂ ಹೆಚ್ಚು ಭತ್ತ ಬೆಳೆಯಲು ಅಡ್ಡಿಯಾಗಿದೆ. ನೆರೆ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಗಾಣಿಕೆ ಆಗುತ್ತಿರುವುದರಿಂದ ಸಹಜವಾಗಿಯೇ ಬೆಲೆ ಹೆಚ್ಚಾಗಿದೆ. ಬರಗಾಲ ಪರಿಸ್ಥಿತಿಯಲ್ಲಿ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆ ಅನಿವಾರ್ಯವೂ ಆಗಿರುತ್ತದೆ. ಈ ಪರಿಸ್ಥಿತಿ ದಿಢೀರ್ ಆಗಿ ಉದ್ಭವಿಸಿಲ್ಲ. ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೆಲೆ ಹೆಚ್ಚು ದೊರಕುವ ಕಡೆಗಳಲ್ಲಿ ಸರಕುಗಳ ಪೂರೈಕೆ ಆಗುವುದು ಸಹಜ. ದುಬಾರಿ ಬೆಲೆಯ ಲಾಭವು ರೈತರಿಗೂ ಸಮಾನವಾಗಿ ಹಂಚಿಕೆಯಾದರೆ ಮಾತ್ರ ಬೆಲೆ ಏರಿಕೆಗೂ ಒಂದು ಅರ್ಥ ಇರುತ್ತದೆ. ಅಂತಹ ಸಾಧ್ಯತೆ ಕಂಡುಬರದಿರುವುದು ರೈತರ ದುರದೃಷ್ಟವೇ ಸರಿ. ಬೇಡಿಕೆ - ಪೂರೈಕೆ ಪರಿಸ್ಥಿತಿ ಆಧರಿಸಿ ಬೆಲೆ ನಿರ್ಧಾರವಾಗುತ್ತದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿರುವ ವರ್ತಕರು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ. ಅಕ್ಕಿ ಗಿರಣಿ, ವರ್ತಕರ ಖಾಸಗಿ ಗೋದಾಮುಗಳಲ್ಲಿ ಲೆಕ್ಕಕ್ಕೆ ಇಲ್ಲದ ಅಕ್ರಮ ದಾಸ್ತಾನಿಗೆ ಮಿತಿ ವಿಧಿಸಿದರೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಪೂರೈಕೆ ಆಗಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದೀತು. ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿರುವುದೇ ಬೆಲೆ ಹೆಚ್ಚಳಕ್ಕೆ ಮೂಲ ಕಾರಣ ಎಂದು ಹೇಳಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ರಾಜ್ಯ ಸರ್ಕಾರದ ಧೋರಣೆ ಸಮರ್ಥನೀಯವಲ್ಲ. ಪರಿಸ್ಥಿತಿಯ ದುರುಪಯೋಗ ಪಡೆಯಲು ಮಧ್ಯವರ್ತಿಗಳು, ಕಾಳಸಂತೆಕೋರರು, ದುರಾಸೆಯ ವರ್ತಕರು, ಸ್ಥಳೀಯ ಬೇಡಿಕೆಗೆ ಗಮನ ನೀಡದೆ ನೆರೆ ರಾಜ್ಯಕ್ಕೆ ಸಾಗಿಸಲು ಅನುಮತಿ ನೀಡುವುದರ ಮೂಲಕ `ಲಾಭ' ಪಡೆಯುವ ಅಧಿಕಾರಸ್ಥರ ವರ್ತನೆ ಖಂಡನೀಯ. ಪೂರೈಕೆ ಪರಿಸ್ಥಿತಿ ಸುಧಾರಿಸಲು, ನೆರೆ ರಾಜ್ಯಗಳಿಗೆ ಅಕ್ಕಿ ಸಾಗಾಣಿಕೆಗೆ ನಿರ್ಬಂಧ ಹೇರಬೇಕು ಎನ್ನುವ ಆಲೋಚನೆಯೂ ಅತಾರ್ಕಿಕ. ರಫ್ತು ನಿಷೇಧಿಸಬೇಕು ಎಂದು ರಾಜ್ಯವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ಕೂಡ ಕಾರ್ಯಸಾಧುವಲ್ಲದ ಆಲೋಚನೆ. ರಾಜಕೀಯ ಆಟ - ಮೇಲಾಟದಲ್ಲಿ ಮುಳುಗಿರುವ ರಾಜಕಾರಣಿಗಳಿಗೆ ಸಚಿವರಿಗೆ ಜನರ ಬವಣೆ ಅರ್ಥವಾಗಿಲ್ಲ. ಹದಿನೈದು ದಿನಗಳಿಂದ ಪರಿಸ್ಥಿತಿ ಬಿಗಡಾಯಿಸಿದ್ದರೂ ಸರ್ಕಾರಿ ಪ್ರಭುಗಳಿಗೆ ಕಿಂಚಿತ್ತೂ ಜನಪರ ಕಾಳಜಿ ಇಲ್ಲದಿರುವುದೂ ವೇದ್ಯವಾಗುತ್ತದೆ. ಅಕ್ರಮ ದಾಸ್ತಾನೇ ಬೆಲೆ ಏರಿಕೆಗೆ ಮೂಲ ಕಾರಣ ಎನ್ನುವುದಾದರೆ ಸರ್ಕಾರದಿಂದಲೇ ಕರ್ತವ್ಯಲೋಪ ಉಂಟಾಗಿದೆ ಮತ್ತು ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಕುಸಿದು ಬಿದ್ದಿದೆ ಎಂದೂ ಅರ್ಥ. ಈಗಲಾದರೂ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಕಾಳಸಂತೆಕೋರರು ಅಕ್ರಮ ದಾಸ್ತಾನುದಾರರ ಮೇಲೆ ಕಠಿಣ ಕ್ರಮ ಕೈಗೊಂಡು ಪೂರೈಕೆ ಪರಿಸ್ಥಿತಿ ಸುಧಾರಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.