ಎಚ್‌ಐವಿ: ನಿಯಂತ್ರಣದ ಹಾದಿ ರಾಜ್ಯದಲ್ಲಿ ಎಚ್‌ಐವಿ / ಏಡ್ಸ್ ಹೊಂದಿದ ವ್ಯಕ್ತಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಸಂತಸದ ಸಂಗತಿ. ಇದರ ಕೀರ್ತಿ ರಾಜ್ಯದಲ್ಲಿ ಕೈಗೊಳ್ಳಲಾದ ಎಚ್‌ಐವಿ ಸೋಂಕು ಕುರಿತ ಜಾಗೃತಿ ಹಾಗೂ ನಿಯಂತ್ರಣ ಕಾರ್ಯಕ್ರಮಗಳಿಗೆ ಸಲ್ಲಬೇಕು. ಕಳೆದ ಐದು ವರ್ಷಗಳಲ್ಲಿ ಸೋಂಕು ಹರಡುವಿಕೆ ತಡೆಯಲು ನಿರಂತರವಾಗಿ ನಡೆಸಿದ ಪ್ರಯತ್ನಗಳು ಫಲ ನೀಡಿರುವುದರ ದ್ಯೋತಕ ಇದು. 2004 ಹಾಗೂ 2009ರ ಮಧ್ಯೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಹಿಳಾ ಲೈಂಗಿಕ ವೃತ್ತಿನಿರತರಲ್ಲಿ ಎಚ್‌ಐವಿ ಸೋಂಕಿನ ಪ್ರಮಾಣ ಶೇಕಡಾ 25ರಿಂದ ಶೇಕಡಾ 13ಕ್ಕೆ ಕುಸಿದಿದೆ ಎಂಬುದನ್ನು ಸಮೀಕ್ಷೆ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗೆಂದು ಸಮಾಧಾನದ ನಿಟ್ಟುಸಿರು ಬಿಟ್ಟು ಕೈಕಟ್ಟಿ ಕೂರುವಂತಿಲ್ಲ. ಏಕೆಂದರೆ ಈಗಲೂ ರಾಷ್ಟ್ರದಲ್ಲಿ ಎಚ್‌ಐವಿ/ಏಡ್ಸ್ ಹೆಚ್ಚು ಇರುವ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕದ ಹೆಸರು ಇದ್ದೇ ಇದೆ. ಈ ಪಟ್ಟಿಯಲ್ಲಿ ಕರ್ನಾಟಕದ್ದು ಐದನೇ ಸ್ಥಾನ. ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚಿನ ಎಚ್‌ಐವಿ/ಏಡ್ಸ್ ಹೊಂದಿದವರ ಜಿಲ್ಲೆ ಎಂಬ ಕುಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಎಚ್‌ಐವಿ ಸೋಂಕು ಹೊಂದಿದ ವ್ಯಕ್ತಿಗಳ ಪ್ರಮಾಣ ಈಗ 2.53 ಲಕ್ಷ ಎಂಬುದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ (ಕಸಾಪ್ಸ್) ನೀಡಿರುವ ಅಂಕಿ ಅಂಶ. ಆದರೆ ಈ ಅಂಕಿ ಅಂಶ, ಖಾಸಗಿ ಆಸ್ಪತ್ರೆ ಅಥವಾ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಒಳಗೊಂಡಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ತಮ್ಮ ಬಳಿ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮಾಹಿತಿಗಳನ್ನು ಖಾಸಗಿ ವೈದ್ಯರು ಕಸಾಪ್ಸ್‌ಗೆ ಒದಗಿಸಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ ಇದರ ಉಲ್ಲಂಘನೆ ಆಗುತ್ತಿರುವುದು ಆತಂಕದ ಸಂಗತಿ. ಈ ನಿರ್ದೇಶನದ ಬಗ್ಗೆ ಅನೇಕ ಖಾಸಗಿ ವೈದ್ಯರಿಗೆ ಅರಿವೂ ಇಲ್ಲ ಎಂಬುದಂತೂ ಮಾಹಿತಿ ಪ್ರಸರಣದಲ್ಲಿ ಇರುವ ಕೆಲವೊಂದು ಲೋಪಗಳನ್ನು ಎತ್ತಿ ತೋರುತ್ತದೆ. ಎಚ್‌ಐವಿ ಸೋಂಕು ಹೊಂದಿದವರ ಬಗೆಗಿನ ನಿಖರ ಅಂಕಿಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳನ್ನು ರೂಪಿಸುವುದು ಕಷ್ಟ. ಪುರುಷರು ಪುರುಷರೊಂದಿಗೆ ಹೊಂದುವ ಲೈಂಗಿಕ ಸಂಬಂಧಗಳು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಚ್‌ಐವಿ ಸೋಂಕು ಹರಡುವಲ್ಲಿನ ಅಪಾಯದ ಅಂಶವಾಗಿ ಪರಿಣಮಿಸಲಿದೆ ಎಂಬ ಎಚ್ಚರಿಕೆಯನ್ನು ಇತ್ತೀಚಿನ ವರದಿಗಳು ನೀಡಿವೆ. ಏಷ್ಯಾದ ಅರ್ಧದಷ್ಟು ಎಚ್‌ಐವಿ ಸೋಂಕು ಹೊಂದಿದ ರೋಗಿಗಳಿಗೆ ಭಾರತ ನೆಲೆಯಾಗಿದೆ ಎಂಬುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಚೀನಾಗಿಂತ ಭಾರತ ಹೊತ್ತಿರುವ ಹೊರೆ ಹೆಚ್ಚಿನದು. ಈ ಮಧ್ಯೆ ಎಚ್‌ಐವಿ ತಡೆ ಕಾರ್ಯಕ್ರಮಗಳಿಗಾಗಿ ಹರಿದು ಬರುತ್ತಿದ್ದ ವಿದೇಶಿ ಹಣದ ನೆರವು ಬತ್ತಿ ಹೋಗುವ ಸೂಚನೆಗಳು ಇವೆ. ಈಗಾಗಲೇ ಎಚ್‌ಐವಿ/ಏಡ್ಸ್ ನಿಯಂತ್ರಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ಈ ಬಿಸಿ ತಟ್ಟಿದೆ. ಹೀಗಾಗಿ ಎಚ್‌ಐವಿ ಸೋಂಕು ನಿಯಂತ್ರಣದ ಕಾರ್ಯಕ್ರಮಗಳಿಗೆ ಹಣ ಒದಗಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.