ರಷ್ಯಾದಲ್ಲಿ ರಾಜಕೀಯ ತಳಮಳ ರಷ್ಯಾದ ವಿವಿಧ ನಗರಗಳಲ್ಲಿ ಶನಿವಾರ ನಡೆದಿರುವ ಬೃಹತ್ ಪ್ರತಿಭಟನಾ ಪ್ರದರ್ಶನಗಳು ಪ್ರಧಾನಿ ವ್ಲಾಡಿಮಿರ್ ಪುಟಿನ್ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದರ ಸೂಚನೆಯಾಗಿದೆ. ಕಳೆದ ವಾರ ನಡೆದ ಸಂಸತ್ ಚುನಾವಣೆಗಳಲ್ಲಿ ಆಡಳಿತದ ಯುನೈಟೆಡ್ ರಷ್ಯನ್ ಪಾರ್ಟಿ ಹಿಂದಿನ ಸ್ಥಾನಬಲವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿಲ್ಲ. ಅಲ್ಪ ಬಹುಮತಕ್ಕೆ ತೃಪ್ತಿಪಡಬೇಕಾಗಿ ಬಂದಿದೆ. ಗಳಿಸಿರುವ ಬಹುಮತವೂ ಮೋಸದ ಮೂಲಕ ಎಂದು ಆರೋಪಿಸಿರುವ ಪುಟಿನ್ ವಿರೋಧಿಗಳು ದೇಶದಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸಿ ಮರು ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ತಿಂಗಳ 24 ರಂದು ಮತ್ತೆ ಪ್ರತಿಭಟನೆ ನಡೆಸುವುದಾಗಿ ವಿರೋಧಿ ನಾಯಕ ಮಿಖಾಯಿಲ್ ಕಸ್ಯನೊವ್ ಘೋಷಿಸಿರುವುದು ಪುಟಿನ್ ವಿರುದ್ಧ ಹೋರಾಟಕ್ಕೆ ಕಣ ಸಿದ್ಧಮಾಡಿದಂತಾಗಿದೆ. ಪುಟಿನ್ ಅವರು ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗಳು ಮಹತ್ವ ಪಡೆದುಕೊಂಡಿವೆ. ಇದೆಲ್ಲಾ ಅಮೆರಿಕದ ಕಿತಾಪತಿ ಎಂದು ಪುಟಿನ್ ಆರೋಪಿಸಿರುವುದನ್ನು ನೋಡಿದರೆ ದೇಶದ ಆಂತರಿಕ ಸಮಸ್ಯೆಗೆ ಅಂತರರಾಷ್ಟ್ರೀಯ ಸ್ವರೂಪ ಒದಗುವಂತೆ ಕಾಣುತ್ತಿದೆ. ಚುನಾವಣೆಗಳಲ್ಲಿ ಮೋಸ ನಡೆದಿದೆ ಎಂದು ಸ್ವತಂತ್ರ ಚುನಾವಣಾ ವೀಕ್ಷಕರೂ ಹೇಳಿದ್ದಾರೆ. ಆದರೆ, ಮೋಸ ನಡೆಯದಿದ್ದರೂ ವಿರೋಧ ಪಕ್ಷಗಳೇನೂ ಗೆಲ್ಲುತ್ತಿರಲಿಲ್ಲ ಎಂದು ಅವರು ಹೇಳಿರುವುದರಿಂದ ಮರು ಚುನಾವಣೆ ಸಾಧ್ಯತೆಗಳು ಇಲ್ಲವಾಗಿವೆ. ಸೋವಿಯತ್ ಒಕ್ಕೂಟ ಒಡೆದು ಹೋಗಿ ಎರಡು ದಶಕಗಳೇ ಆಗಿವೆ. ರಷ್ಯಾ ಸೇರಿದಂತೆ ಹಲವು ದೇಶಗಳು ಕಮ್ಯುನಿಸ್ಟ್ ಆರ್ಥಿಕ ವ್ಯವಸ್ಥೆಯಿಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಬದಲಾದವು. ಈ ಬದಲಾವಣೆ ಅಮೆರಿಕದ ಅತೀವ ಆನಂದಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲ ಹತ್ತು ವರ್ಷಗಳು ರಷ್ಯಾಕ್ಕೆ ಕಷ್ಟದ ದಿನಗಳೇ ಆಗಿದ್ದವು. 2000ರಲ್ಲಿ ಪುಟಿನ್ ಅಧಿಕಾರಕ್ಕೆ ಬಂದ ನಂತರ ಸರ್ಕಾರ ಅನುಸರಿಸಿದ ನೀತಿ ಮತ್ತು ಕ್ರಮಗಳು ಆಶ್ಚರ್ಯಕರವಾಗಿ ಉತ್ತಮ ಫಲಿತಾಂಶ ತಂದುಕೊಟ್ಟಿವೆ. ಯಾವುದೇ ಅಭಿವೃದ್ಧಿ ದೇಶಗಳಿಗೆ ಕಡಿಮೆಯಿಲ್ಲದಂಥ ಪ್ರಗತಿಯನ್ನು ರಷ್ಯಾ ಸಾಧಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಅಮೆರಿಕ ಆರ್ಥಿಕ ಕುಸಿತದಿಂದ ತತ್ತರಿಸಿದ್ದರೆ ರಷ್ಯಾ ಅದರ ಯಾವುದೇ ಕೆಟ್ಟ ಪರಿಣಾಮಕ್ಕೆ ಒಳಗಾಗದೆ ಆರ್ಥಿಕ ಭದ್ರತೆ ಸಾಧಿಸಿದೆ. ಐಎಂಎಫ್‌ನಿಂದ ಪಡೆದ ಸಾಲವನ್ನು ರಷ್ಯಾ ನಿಗದಿಯಂತೆ ಮರುಪಾವತಿ ಮಾಡುತ್ತಿದೆ. ರಷ್ಯಾದ ಆರ್ಥಿಕ ಸಾಧನೆಯ ಬಗ್ಗೆ ವಿಶ್ವಬ್ಯಾಂಕ್ ಮೆಚ್ಚುಗೆ ವ್ಯಕ್ತ ಮಾಡಿದೆ. ಆರ್ಥಿಕ ಪ್ರಗತಿ ಪುಟಿನ್ ಅವರಲ್ಲಿ ಸರ್ವಾಧಿಕಾರಿ ಮನೋಭಾವ ಬೆಳೆಯಲು ಕಾರಣವಾಗಿದೆ ಎಂದು ಅವರ ವಿರೋಧಿಗಳು ಆರೋಪಿಸುತ್ತಾರೆ. ಏಷ್ಯಾ ವಲಯದಲ್ಲಿ ಚೀನಾ ಮತ್ತು ಭಾರತ ಆರ್ಥಿಕವಾಗಿ ಬಲಗೊಳ್ಳುತ್ತಿವೆ. ನೆರೆಯ ರಷ್ಯಾ ಕೂಡಾ ಬಲಾಢ್ಯವಾಗುತ್ತಿರುವುದು ಅಮೆರಿಕದ ಆಡಳಿತಗಾರರ ನಿದ್ದೆಗೆಡಿಸಿರುವುದರಲ್ಲಿ ಅನುಮಾನವಿಲ್ಲ. ನೆರೆಯ ಪಾಕಿಸ್ತಾನ ಮತ್ತು ಚೀನಾದ ಜೊತೆ ಭಾರತದ ಬಾಂಧವ್ಯ ಮೊದಲಿನಿಂದಲೂ ಉತ್ತಮವಾಗಿಲ್ಲ. ಇತಿಹಾಸದುದ್ದಕ್ಕೂ ಎಲ್ಲ ಸಂಕಷ್ಟಗಳ ದಿನಗಳಲ್ಲಿ ಭಾರತದ ನೆರವಿಗೆ ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಇಂದಿನ ರಷ್ಯಾ ಬಂದಿವೆ. ಇಂಥ ಮೈತ್ರಿ ರಾಷ್ಟ್ರವಾಗಿರುವ ರಷ್ಯಾದಲ್ಲಿ ರಾಜಕೀಯ ತಳಮಳ ಮತ್ತು ಅಸ್ಥಿರತೆ ತಲೆದೋರುವಂಥ ವಾತಾವರಣ ಸೃಷ್ಟಿಯಾಗುತ್ತಿರುವುದು ಭಾರತಕ್ಕೆ ಸಹಜವಾಗಿಯೇ ಆತಂಕಕಾರಿಯಾದ ಬೆಳವಣಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.