ಎಚ್ಚರಿಕೆಯ ಗಂಟೆ ದಕ್ಷಿಣ ಕೋಲ್ಕತ್ತದ ಖಾಸಗಿ ಸೂಪರ್ ಸ್ಪೆಶಾಲಿಟಿ ಅಸ್ಪತ್ರೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ದುರಂತ ತೊಂಬತ್ತೊಂದು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅವರಲ್ಲಿ ಎಂಬತ್ತೆಂಟು ರೋಗಿಗಳು ಹಾಗೂ ಮೂವರು ಆಸ್ಪತ್ರೆ ಸಿಬ್ಬಂದಿ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿನ ಸೌಲಭ್ಯಗಳನ್ನು ನಂಬಿ ಚಿಕಿತ್ಸೆಗೆ ಸೇರಿಕೊಂಡ ರೋಗಿಗಳು ದುಬಾರಿ ಹಣ ನೀಡಿದರೂ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದ ಕಾರಣ ಪ್ರಾಣ ಕಳೆದುಕೊಳ್ಳುವಂತಾಗಿರುವುದು ಖಾಸಗಿ ಆಸ್ಪತ್ರೆಗಳ ಕಾರ್ಯದಕ್ಷತೆಯನ್ನೇ ಶಂಕಿಸುವಂತೆ ಮಾಡಿದೆ. ಸತ್ತವರಲ್ಲಿ ಬಹಳಷ್ಟು ಮಂದಿ ತುರ್ತು ಹಾಗೂ ಅತಿ ತುರ್ತು ಸೇವಾ ಘಟಕಗಳಲ್ಲಿ ಎದ್ದು ಓಡಾಡಲೂ ಅಗದ ಸ್ಥಿತಿಯಲ್ಲಿದ್ದರು. ಆಸ್ಪತೆಯ ನೆಲಮಾಳಿಗೆಯ ವಾಹನ ಪಾರ್ಕಿಂಗ್ ಜಾಗದಲ್ಲಿಟ್ಟಿದ್ದ ವಸ್ತುಗಳಿಗೆ ಬೆಳಗಿನ ಜಾವ ಬೆಂಕಿ ಬಿತ್ತು. ಅದು ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಯ ಗಮನಕ್ಕೆ ಬರಲಿಲ್ಲ. ನೆಲಮಾಳಿಗೆಯಲ್ಲೇ ಬೆಂಕಿ ನಂದಿಸಿದ್ದರೆ ಹೆಚ್ಚಿನ ಅನಾಹುತ ಆಗುತ್ತಿರಲಿಲ್ಲ. ಬೆಂಕಿಯಿಂದೆದ್ದ ದಟ್ಟ ಹೊಗೆ ಮತ್ತು ಬೆಂಕಿ ಐದಂತಸ್ತಿನ ಆಸ್ಪತ್ರೆಗೆ ಹರಡಿದ್ದರಿಂದ ಏಕಾಏಕಿ ಆಮ್ಲಜನಕದ ಕೊರತೆ ಉಂಟಾಗಿ ಸೂಕ್ಷ್ಮ ಸ್ಥಿತಿಯಲ್ಲಿದ್ದ ರೋಗಿಗಳು ಸತ್ತರು. ಅತ್ಯಾಧುನಿಕ ಸೌಲಭ್ಯಗಳನ್ನು ಘೋಷಿಸಿಕೊಳ್ಳುವ ಆಸ್ಪತ್ರೆಗಳಲ್ಲಿ ಬೆಂಕಿ ಆಕಸ್ಮಿಕಗಳನ್ನು ಎದುರಿಸುವ ತುರ್ತು ವ್ಯವಸ್ಥೆಯೂ ಇರಲಿಲ್ಲ ಎಂಬುದು ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದ ಪರಮಾವಧಿ. ಕೆಲವೇ ಮಂದಿ ಶ್ರೀಮಂತರು ತಮಗಿದ್ದ ರಾಜಕೀಯ ಪ್ರಭಾವ ಬಳಸಿ ತೆರೆದಿದ್ದ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪರವಾನಗಿಯನ್ನು ರದ್ದುಪಡಿಸಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬೆಂಕಿ ಆಕಸ್ಮಿಕದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಆಸ್ಪತ್ರೆ ಆಡಳಿತ ಮಂಡಲಿಯ ಹಲವರನ್ನು ಬಂಧಿಸಿ ತನಿಖೆ ಆರಂಭಿಸಿರುವುದು ಸರಿಯಾದ ಕ್ರಮ. ಕೋಲ್ಕತ್ತದಲ್ಲಿ ನಡೆದ ಈ ದುರಂತ ದೇಶದ ಎಲ್ಲಾ ಆಸ್ಪತ್ರೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಸುರಕ್ಷತಾ ವ್ಯವಸ್ಥೆಯ ಬಗ್ಗೆಕೆಲವು ರಾಜ್ಯಗಳು ಗಮನ ಹರಿಸಲು ಆರಂಭಿಸಿವೆ. ಕೇಂದ್ರ ಆರೋಗ್ಯ ಸಚಿವರೂ ಈ ಕುರಿತಾಗಿ ನಿಗಾ ವಹಿಸಲು ರಾಜ್ಯಗಳಿಗೆ ಆದೇಶಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಉದ್ದಗಲದಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಪದೇ ಪದೇ ಅಗ್ನಿ ದುರಂತಗಳು ಸಂಭವಿಸುತ್ತಿವೆ. ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಶಾಮಕ ವ್ಯವಸ್ಥೆಯನ್ನು ಕಡ್ಡಾಯವಾಗಿ ಇರಲೇ ಬೇಕೆಂಬ ನಿಯಮ ಈಗಾಗಲೇ ಇದೆ. ಆಸ್ಪತ್ರೆಗಳಲ್ಲಂತೂ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಬೆಂಗಳೂರು ನಗರವೂ ಇದಕ್ಕೆ ಹೊರತಲ್ಲ. ದುರ್ಘಟನೆ ನಡೆದಾಗ ಸುರಕ್ಷತೆಯ ಮಾತುಗಳು ಕೇಳಿ ಬರುತ್ತವೆ. ಆನಂತರ ಮತ್ತೆ ಯಥಾಸ್ಥಿತಿ. ಇದು ತಪ್ಪಬೇಕು. ಬೆಂಗಳೂರಿನ ಬಹುತೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿಲ್ಲ ಎನ್ನುವುದು ಈಗ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿನ ಲೋಪಗಳಿಗೆ ಅವುಗಳ ಪರವಾನಗಿ ರದ್ದುಪಡಿಸುವಂಥ ದಿಟ್ಟ ಕ್ರಮವೇ ಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.