ಬಗೆಹರಿಯದ ವಿವಾದ ಮಾನವ ಇತಿಹಾಸದಲ್ಲಿ ಅತಿ ಘೋರ ಎನಿಸಿದ ಭೋಪಾಲ್ ಅನಿಲ ದುರಂತ ಸಂಭವಿಸಿ 27 ವರ್ಷಗಳಾಗಿವೆ. ಆದರೂ ಈ ದುರಂತದಲ್ಲಿ ನೊಂದವರು ಹಾಗೂ ಅವರ ಕುಟುಂಬದವರ ಕಣ್ಣೀರು ಇನ್ನೂ ಬತ್ತಿಲ್ಲ. ಹಲವು ಆರೋಗ್ಯ ಸಮಸ್ಯೆಗಳು ಅವರ ಬದುಕನ್ನು ಛಿದ್ರವಾಗಿಸಿವೆ; ಬದುಕುಳಿದವರ ಮಕ್ಕಳು ಅಂಗವೈಕಲ್ಯ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ನರಳುವುದು ಮುಂದುವರಿದಿವೆ. ಜೊತೆಗೆ ಇಡೀ ಪ್ರದೇಶದ ಅಂತರ್ಜಲ, ವಾತಾವರಣ ಈಗಲೂ ಮಾಲಿನ್ಯಯುಕ್ತವಾಗಿಯೇ ಇದೆ. ಹೀಗಿದ್ದೂ ಈ ದುರಂತದಲ್ಲಿ ನೊಂದವರಿಗೆ ಸೂಕ್ತ ಪರಿಹಾರಗಳನ್ನು ನೀಡುವಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಹಾಗೂ ನಂತರ ಯೂನಿಯನ್ ಕಾರ್ಬೈಡ್ ಸಂಸ್ಥೆಯನ್ನು ಖರೀದಿಸಿದ ಡೋ ಕೆಮಿಕಲ್ ಕಂಪೆನಿ ವಿಫಲವಾಗಿವೆ. 1984ರಲ್ಲಿ ಸಂಭವಿಸಿದ ಈ ದುರಂತದಲ್ಲಿ ಸತ್ತವರ ಸಂಖ್ಯೆ ಹತ್ತು ಸಾವಿರಕ್ಕೂ ಅಧಿಕ. ಆದರೆ ಅಧಿಕೃತ ಸಂಖ್ಯೆಯನ್ನು 5,290 ಎಂದು ನಮೂದಿಸಿರುವುದರ ವಿರುದ್ಧವೂ ಸಂತ್ರಸ್ತರು ಹೋರಾಟ ನಡೆಸಿದ್ದಾರೆ. 27 ವರ್ಷಗಳಷ್ಟು ಸುದೀರ್ಘ ಕಾಲದಿಂದ ಪರಿಹಾರಕ್ಕಾಗಿ ನೊಂದವರು ಪರಿತಪಿಸುತ್ತಲೇ ಇದ್ದಾರೆ. ಹಲವು ಬಗೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದರೂ ಪ್ರಯೋಜನವಾಗಿಲ್ಲ. ಈ ಸಲ ರೈಲುಗಳನ್ನು ತಡೆಹಿಡಿಯುವ `ರೈಲ್ ರೋಖೊ~ ಆಂದೋಲನದಲ್ಲಿ ಪೊಲೀಸರಿಂದ ಲಾಠಿ ಪ್ರಹಾರಕ್ಕೊಳಗಾಗಿದ್ದಾರೆ. ವಿಪರ್ಯಾಸದ ಸಂಗತಿ ಎಂದರೆ, 2012ರ ಒಲಿಂಪಿಕ್ ಕ್ರೀಡಾಕೂಟದ ಪ್ರಾಯೋಜಕ ಕಂಪೆನಿಗಳಲ್ಲಿ ಒಂದಾಗಿ ಡೊ ಕೆಮಿಕಲ್ ಆಯ್ಕೆಯಾಗಿದೆ. ಇದಕ್ಕೆ ಅನೇಕ ಮಾಜಿ ಒಲಿಂಪಿಕ್ ಕ್ರೀಡಾಪಟುಗಳು ಅಸಮಾಧಾನ ತೋರಿರುವುದು ಸಹಜ ಬೆಳವಣಿಗೆಯೇ. ಒಲಿಂಪಿಕ್ಸ್‌ಗೆ ಇರುವ ಕೀರ್ತಿ ಎಂತಹದ್ದೆಂದರೆ ಅದರಲ್ಲಿ ಪಾಲ್ಗೊಳ್ಳುವ ಆಟಗಾರರಿಗೂ ಚಾರಿತ್ರ್ಯದ ಪ್ರಮಾಣಪತ್ರ ಬೇಕು. ಹೀಗಿದ್ದಾಗ ಕಪ್ಪುಪಟ್ಟಿಗೆ ಸೇರಿದ ಕಂಪೆನಿಯೊಂದು ಪ್ರಾಯೋಜನೆಯಲ್ಲಿ ಪಾಲ್ಗೊಳ್ಳುವುದು ಹೇಗೆ ಸಮರ್ಥನೀಯ ಎಂಬ ಪ್ರಶ್ನೆಯನ್ನು ತಳ್ಳಿಹಾಕಲಾಗದು. ಇದರ ಪ್ರತಿಧ್ವನಿ ಲಂಡನ್‌ನಲ್ಲಿಯೂ ಕೇಳಿಬರುತ್ತಿದೆ ಎಂಬುದೇ ಸಮಾಧಾನದ ಸಂಗತಿ. ಭೋಪಾಲ್ ಅನಿಲ ದುರಂತದಲ್ಲಿ ನೊಂದವರ ಕೂಗಿಗೆ ಈಗ ಮಾಜಿ ಒಲಿಂಪಿಕ್ ಕ್ರೀಡಾಪಟುಗಳು ಹಾಗೂ ಬ್ರಿಟನ್ನಿನ ರಾಜಕಾರಣಿಗಳ ಬೆಂಬಲದ ದನಿ ದಕ್ಕಿರುವುದು ಪರಿಹಾರ ಇತ್ಯರ್ಥಕ್ಕೆ ಹೊಸ ಭರವಸೆ ಮೂಡಿಸಿದೆ. ಭೋಪಾಲ್ ಸಂತ್ರಸ್ತರಿಗೆ ಇನ್ನು ಹೆಚ್ಚಿನ ಪರಿಹಾರ ನೀಡುವುದಿಲ್ಲ ಎಂದು ಡೋ ಕೆಮಿಕಲ್ಸ್ ಸುಪ್ರೀಂ ಕೋರ್ಟ್‌ಗೆ ಹೇಳಿದೆ. 1989ರಲ್ಲಿ ಇತ್ಯರ್ಥ ಪಡಿಸಲಾದ 470 ದಶಲಕ್ಷ ಡಾಲರ್ ಪರಿಹಾರ ನ್ಯಾಯವಾಗಿ ಸಲ್ಲಬೇಕಾದ್ದಕ್ಕಿಂತ ಹೆಚ್ಚಿನದೇ ಮೊತ್ತವಾಗಿದೆ ಎಂಬುದು ಡೋ ಕೆಮಿಕಲ್ಸ್ ವಾದ. ವಿಷಕಾರಕ ಮೀಥೈಲ್ ಐಸೊಸೈನೈಡ್ ಅನಿಲ ಸೋರಿಕೆಯಿಂದ ಸುಮಾರು 15,000 ಜನರ ಸಾವು ಹಾಗೂ ಲಕ್ಷಾಂತರ ಜನರು ಗಾಯಗೊಳ್ಳಲು ಕಾರಣವಾದ ಭೋಪಾಲ ದುರಂತ ವಿಶ್ವದಲ್ಲೇ ಅತ್ಯಂತ ಕೆಟ್ಟದಾದ ಕೈಗಾರಿಕಾ ದುರಂತ ಎಂಬುದನ್ನು ಮರೆಯಲಾಗದು. ಈಗ ಮತ್ತೆ ದುರಂತದಲ್ಲಿ ನೊಂದವರಿಗೆ 5,786 ಕೋಟಿ ರೂಪಾಯಿಗಳ ಹೆಚ್ಚಿನ ಪರಿಹಾರ ಕೋರಿ ಕಳೆದ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ಭಾರತ ಸರ್ಕಾರವೂ ಅರ್ಜಿ ಸಲ್ಲಿಸಿದೆ. ಅನೇಕ ವಿದೇಶಿ ಸಂಸ್ಥೆಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಮುನ್ನುಗ್ಗುತ್ತಿರುವ ಪ್ರಸಕ್ತ ಕಾಲದಲ್ಲಿ ಅವಘಡಗಳ ನಿರ್ವಹಣೆಗೆ ಕಂಪೆನಿಗಳನ್ನು ಬಾಧ್ಯಸ್ಥರನ್ನಾಗಿಸುವ ಬಗ್ಗೆ ಸಾಕಷ್ಟು ಎಚ್ಚರ ಅಗತ್ಯ ಎಂಬ ಪಾಠವನ್ನೂ ಭೋಪಾಲ್ ದುರಂತ ಕಲಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.