ಬಹಿಷ್ಕಾರ ಸರಿಯಲ್ಲ ಅರವತ್ತು ವರ್ಷಗಳ ಅನುಭವ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ನೆರವಾಗಬೇಕಿತ್ತು. ಆದರೆ ಈಗ ನಡೆಯುತ್ತಿರುವುದು ಇದಕ್ಕೆ ವಿರುದ್ಧವಾದ ಬೆಳವಣಿಗೆ. ಅನುಭವದಿಂದ ಮಾಗಬೇಕಾಗಿದ್ದ ಜನಪ್ರತಿನಿಧಿಗಳು ಬಾಲಿಶವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರ ಚಾರಿತ್ರ್ಯದ ಮಟ್ಟ ಕುಸಿಯುತ್ತಿರುವುದರಿಂದ ಸಂಸತ್ ಮತ್ತು ವಿಧಾನಮಂಡಲಗಳ ಗುಣಮಟ್ಟ ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದೆ. ಕಾನೂನು ರಚನೆಯ ಮೂಲ ಉದ್ದೇಶವನ್ನು ಮರೆತಿರುವ ಜನಪ್ರತಿನಿಧಿಗಳು ಅನಗತ್ಯ ವಿವಾದಗಳನ್ನು ಮುಂದೊಡ್ಡಿ ಕಲಾಪಕ್ಕೆ ಭಂಗ ಉಂಟುಮಾಡುತ್ತಿದ್ದಾರೆ. ಒದಗಿಬಂದ ಕಾಲಾವಕಾಶದಲ್ಲಿಯೂ ನಡೆಯುತ್ತಿರುವ ಚರ್ಚೆಯ ಗುಣಮಟ್ಟ ಕೂಡಾ ಅಷ್ಟಕ್ಕಷ್ಟೇ. ಕೇಂದ್ರ ಗೃಹಸಚಿವ ಪಿ.ಚಿದಂಬರಂ ಕಳಂಕಿತರು ಎಂಬ ಕಾರಣ ನೀಡಿ ಅವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ವಿರೋಧಪಕ್ಷವಾದ ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದಕ್ಕೆ ಪ್ರೇರಣೆ ಎನ್‌ಡಿಎ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಹಾಕಿದ್ದ ಬಹಿಷ್ಕಾರ. ಈಗ ರಾಜ್ಯದ ಪಾಳಿ. ಇಲ್ಲಿನ ಮೂವರು ಸಚಿವರಾದ ಆರ್.ಅಶೋಕ, ವಿ.ಸೋಮಣ್ಣ ಮತ್ತು ಸಿ.ಪಿ.ಯೋಗೀಶ್ವರ್ ಅವರು ಭ್ರಷ್ಟಾಚಾರದ ಆರೋಪದಡಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಇವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸುತ್ತಾ ಬಂದ ವಿರೋಧ ಪಕ್ಷಗಳು ವಿಧಾನಮಂಡಲದಲ್ಲಿ ಅವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ಘೋಷಿಸಿವೆ. ಇಂತಹ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವಷ್ಟು ಸೂಕ್ಷ್ಮಮತಿ ಈ ಸಚಿವರಿಗಿಲ್ಲ ಎನ್ನುವುದು ಗೊತ್ತಿದ್ದೂ ವಿರೋಧಪಕ್ಷಗಳು ಬಹಿಷ್ಕಾರ ಹೇರಿರುವುದು ವ್ಯರ್ಥ ಕಸರತ್ತು. ರಾಜಕೀಯ ಹೋರಾಟಕ್ಕೆ ಎಲ್ಲ ಕಾಲಗಳಲ್ಲಿಯೂ ವಿಧಾನಮಂಡಲವೊಂದೇ ಮೈದಾನ ಅಲ್ಲ. ಅದಕ್ಕಾಗಿ ಸಾರ್ವಜನಿಕ ಕ್ಷೇತ್ರ ಇದೆ. ಆರಿಸಿ ಕಳುಹಿಸಿರುವ ಮತದಾರರಿದ್ದಾರೆ. ಹೋರಾಟವನ್ನು ಅವರ ಬಳಿಗೆ ಕೊಂಡೊಯ್ಯಬೇಕು. ವಿಧಾನಮಂಡಲದಲ್ಲಿ ಕಾನೂನು ರಚನೆಯ ಜತೆಯಲ್ಲಿ ಅಗತ್ಯವಾಗಿ ನಡೆಯಬೇಕಾಗಿರುವುದು ಸರ್ಕಾರದ ಕಾರ‌್ಯಕ್ರಮಗಳ ಪರಾಮರ್ಶೆ. ಮೂವರು ಸಚಿವರನ್ನು ಪ್ರಶ್ನೆ ಕೇಳುವುದಿಲ್ಲ ಮತ್ತು ಅವರಿಂದ ಉತ್ತರವನ್ನು ಪಡೆಯುವುದಿಲ್ಲ ಎಂದು ವಿರೋಧಪಕ್ಷಗಳು ನಿರ್ಧರಿಸಿದರೆ ಸಚಿವರಿಗಿಂತ ಹೆಚ್ಚಿನ ನಷ್ಟ ಸಾರ್ವಜನಿಕರಿಗೆ. ಬಹಿಷ್ಕಾರಕ್ಕೀಡಾದ ಸಚಿವರ ಇಲಾಖೆಗಳನ್ನು ಕೇಳುವವರೇ ಇಲ್ಲದಂತಾಗುತ್ತದೆ. ತಮ್ಮನ್ನು ಪ್ರಶ್ನಿಸುವವರೇ ಇಲ್ಲ ಎಂದು ಸಚಿವರು ಕೂಡಾ ನಿಶ್ಚಿಂತರಾಗಿ ಇರಬಹುದು. ಬಹಿಷ್ಕರಿಸುವುದರಿಂದ ಅವರಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಇದರ ಬದಲಿಗೆ ಕಳಂಕಿತ ಸಚಿವರು ಸದನವನ್ನು ಎದುರಿಸುವಂತೆ ಮಾಡಬೇಕು. ಅಲ್ಲಿ ಅವರ ಹೂರಣವನ್ನು ಬಯಲು ಮಾಡಬೇಕು. ಸಂಸದೀಯ ವ್ಯವಸ್ಥೆಯ ಮೇಲೆಯೇ ಜನತೆ ವಿಶ್ವಾಸ ಕಳೆದುಕೊಳ್ಳುವಂತಹ ವಾತಾವರಣ ನಿರ್ಮಿಸುವುದು ಸರಿಯಲ್ಲ. ತಮ್ಮ ಬಗ್ಗೆ ಜನತೆ ಹೊಂದಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ರಾಜ್ಯದ ಆಡಳಿತ ಪಕ್ಷವನ್ನು ರಾಜಕೀಯವಾಗಿ ಎದುರಿಸಲು ವಿರೋಧಪಕ್ಷಗಳು ಆಯ್ಕೆ ಮಾಡಿದ ಈಗಿನ ಕ್ರಮ ಪ್ರಜಾಪ್ರಭುತ್ವದ ಆಶಯಗಳಿಗೂ ಅನುಗುಣವಾಗಿಲ್ಲ. ಇದರಲ್ಲಿ ಜನರ ಹಿತದೃಷ್ಟಿಯೂ ಇಲ್ಲ. ಆದ್ದರಿಂದ ಕಳಂಕಿತ ಸಚಿವರ ಮೇಲೆ ಸದನದೊಳಗೆ ಹಾಕಿರುವ ಬಹಿಷ್ಕಾರವನ್ನು ವಿರೋಧಪಕ್ಷಗಳು ಕೈಬಿಟ್ಟು ಕಲಾಪ ಸುಗಮವಾಗಿ ನಡೆದುಕೊಂಡಲು ಹೋಗಲು ಸಹಕಾರ ನೀಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.