ವಿಚಿತ್ರ ಜ್ವರದ ಹಾವಳಿ ವಿಜಾಪುರ ಜಿಲ್ಲೆಯಲ್ಲಿ ಮಕ್ಕಳನ್ನು ಬಾಧಿಸುವ ಉಣ್ಣೆಜ್ವರ ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕವಾಗುತ್ತಿರುವುದು ಆತಂಕಕಾರಿ. ಚಿಕಿತ್ಸೆ ಸಕಾಲದಲ್ಲಿ ಸಿಗದಿದ್ದರೆ, ಇಲ್ಲವೇ ತಪ್ಪು ಚಿಕಿತ್ಸೆ ನೀಡಿದ ಉಣ್ಣೆಜ್ವರವೂ ಅಪಾಯಕಾರಿ ಎಂಬುದು ಈ ಪ್ರಕರಣಗಳಿಂದ ದೃಢಪಟ್ಟಿದೆ. ಜಾನುವಾರುಗಳ ಮೈಮೇಲೆ ಆಶ್ರಯಪಡೆಯುವ ಉಣ್ಣೆ ಎಂಬ ಕೀಟಗಳು ಕಚ್ಚಿದಾಗ ಬರುವ ಈ ಕಾಯಿಲೆ ಸಕಾಲದಲ್ಲಿ ಪತ್ತೆಯಾಗಿ ಚಿಕಿತ್ಸೆ ನಡೆಸಿದರೆ ಬೇಗ ಗುಣವಾಗುವಂಥದ್ದು. ಆದರೆ ರೋಗನಿರೋಧಕ ಶಕ್ತಿ ಬೆಳೆಯದಿರುವ ಎಳೆ ವಯಸ್ಸಿನಲ್ಲಿ ಸೂಕ್ತ ಚಿಕಿತ್ಸೆಯೂ ಸಿಗದಿದ್ದರೆ ಅದು ಮಾರಕ ಪರಿಣಾಮ ಬೀರಬಲ್ಲದು. ಆರು ವರ್ಷಗಳ ಹಿಂದೆ ವಿಜಾಪುರದಲ್ಲಿಯೇ ಗಂಭೀರವಾಗಿ ಕಾಣಿಸಿಕೊಂಡಿದ್ದ ಈ ರೋಗ ಮಕ್ಕಳನ್ನು ವಿಶೇಷವಾಗಿ ಬಾಧಿಸುವುದು ಪತ್ತೆಯಾಗಿತ್ತು. ಆಗ ನಡೆಸಿದ ಅಧ್ಯಯನದಿಂದ ಮಕ್ಕಳ ತಜ್ಞರಲ್ಲಿ ಚಿಕಿತ್ಸಾ ವಿಧಾನದಲ್ಲಿ ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಿತ್ತು. ಅದೇ ಪಿಡುಗು ಈಗ ವಿಜಾಪುರದಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕದ ಇತರ ಕಡೆಯೂ ತಲೆದೋರಿದ ವರದಿಗಳು ಬಂದಿವೆ. ಜಾನುವಾರುಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ ಕೃಷಿಕ ಕುಟುಂಬಗಳಿಗೆ ಇಂಥ ಸೋಂಕು ತಗಲುತ್ತಿರುವುದು ಪತ್ತೆಯಾಗಿದೆ. ಆದರೆ ರೋಗಪತ್ತೆ ವಿಧಾನದ ಸಂಕೀರ್ಣತೆ ಮತ್ತು ಅತ್ಯಾಧುನಿಕ ಪ್ರಯೋಗಾಲಯದ ಕೊರತೆ ಚಿಕಿತ್ಸೆಗೆ ಅಡ್ಡಿಯಾಗಿದೆ ಎಂಬ ವರದಿಗಳೂ ಇವೆ. ಜ್ವರ ಮತ್ತು ಮೈಮೇಲೆ ಏಳುವ ಕೆಂಪು ಬೊಕ್ಕೆಗಳಿಂದ ಆರಂಭವಾಗುವ ರೋಗಕ್ಕೆ ತಕ್ಷಣವೇ ಚಿಕಿತ್ಸೆ ನಡೆಸಿದರೆ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂಬುದು ಇದುವರೆಗಿನ ಅನುಭವ. ಉಣ್ಣೆಜ್ವರ ಆರೋಗ್ಯಕ್ಕೆ ಮಾತ್ರ ಸಂಬಂಧಿಸದೆ ಜೀವನ ಶೈಲಿಯ ಸಾಮಾಜಿಕ ಸಮಸ್ಯೆಯೂ ಆಗಿರುವುದರಿಂದ ರೋಗ ಚಿಕಿತ್ಸೆಗಿಂತಲೂ ರೋಗಬರದಂತೆ ಎಚ್ಚರ ವಹಿಸುವ ಜಾಗೃತಿಯನ್ನು ಗ್ರಾಮೀಣ ಜನತೆಯಲ್ಲಿ ಮೂಡಿಸುವುದು ಅಗತ್ಯ. ಮೈತುಂಬ ಉಡುಪು ಧರಿಸುವುದರಿಂದ ಕೀಟಗಳ ಹಾವಳಿಯನ್ನು ತಡೆಯಬಹುದು. ನಿತ್ಯವೂ ಸಂಪರ್ಕಕ್ಕೆ ಬರುವ ಸಾಕುಪ್ರಾಣಿಗಳು ಮತ್ತು ಜಾನುವಾರುಗಳನ್ನು ಸ್ವಚ್ಛವಾಗಿಡುವುದೂ ಕೀಟಗಳ ನಿವಾರಣೆಯಲ್ಲಿ ಪ್ರಮುಖವಾದದ್ದು. ಮಕ್ಕಳಿಗೆ ಜ್ವರ ಬಂದಾಗ ಅದು ಉಣ್ಣೆಜ್ವರವೇ ಎಂಬುದನ್ನು ಪತ್ತೆ ಮಾಡುವ ಪ್ರಯೋಗಾಲಯ ವ್ಯವಸ್ಥೆಯನ್ನು ಸರ್ಕಾರ ತುರ್ತಾಗಿ ಕಲ್ಪಿಸಬೇಕು. ವಿಜಾಪುರ ಜಿಲ್ಲೆಯಲ್ಲಿ ಹಿಂದೆಯೇ ತಲೆದೋರಿದ್ದ ಈ ಜ್ವರದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಇದ್ದರೂ ಸುಸಜ್ಜಿತ ಪ್ರಯೋಗಾಲಯಕ್ಕೆ ಪ್ರಯತ್ನ ನಡೆಸದೆ ಇರುವುದು ಖಂಡನೀಯ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವಾಗ, ರೋಗಪತ್ತೆಯ ಪ್ರಯೋಗಾಲಯ ವ್ಯವಸ್ಥೆ ಮಾಡುವುದು ಕಷ್ಟವಾಗಲಾರದು. ಈಗಾಗಲೇ ಒಂಬತ್ತು ಮಕ್ಕಳು ಈ ಜ್ವರಕ್ಕೆ ಬಲಿಯಾಗಿರುವ ವರದಿಗಳಿಗೆ ಜಿಲ್ಲಾಡಳಿತ ಸ್ಪಂದಿಸದಿರುವುದು ವಿಷಾದಕರ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವ್ಯಾಪಿಸುತ್ತಿರುವ ಈ ರೋಗ ನಿಯಂತ್ರಣ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಹಾರ ಸಿಗದಿದ್ದರೆ ಬಡ ಜನತೆ ಖಾಸಗಿ ವೈದ್ಯರಲ್ಲಿಗೆ ಹೋಗಿ ಹಣವನ್ನೂ, ಚಿಕಿತ್ಸೆ ಸರಿಯಾಗಿ ಆಗದಿದ್ದರೆ ಪ್ರಾಣವನ್ನೂ ಕಳೆದುಕೊಳ್ಳುವುದು ನಿಲ್ಲಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.