ಸರ್ಕಾರದ ಉದ್ದೇಶ ಸರಿ ಇಲ್ಲ ಸಾಮಾಜಿಕ ಸಂವಹನ ತಾಣಗಳನ್ನು ಸರ್ಕಾರದ ನಿಯಂತ್ರಣಕ್ಕೊಳಪಡಿಸುವ ಇಂಗಿತವನ್ನು ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ನೀಡಿದ್ದಾರೆ. ಚೀನಾ ದೇಶದಲ್ಲಿರುವಂತೆ `ಇಂಟರ್‌ನೆಟ್ ಸೆನ್ಸಾರ್‌ಷಿಪ್~ ಜಾರಿಗೆ ತರುವ ಉದ್ದೇಶ ಇಲ್ಲ ಎಂದು ಹೇಳಿದರೂ ಅವರ ಮನಸ್ಸಿನಲ್ಲಿ ಅದೇ ಮಾದರಿಯ ನಿಯಂತ್ರಣದ ದುರುದ್ದೇಶ ಇದ್ದಹಾಗಿದೆ. ಸರ್ಕಾರದ ಈ ನಡೆ ಅನಿರೀಕ್ಷಿತವೇನಲ್ಲ. ಅರಬ್ ರಾಷ್ಟ್ರಗಳಲ್ಲಿ ನಡೆದ ರಾಜಕೀಯ ಪಲ್ಲಟಗಳು, ಅಮೆರಿಕದ ಬಣ್ಣ ಬಯಲುಗೊಳಿಸಿದ ರಹಸ್ಯ ದಾಖಲೆಗಳು ಹಾಗೂ ಭಾರತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಸಂವಹನ ತಾಣಗಳು ವಹಿಸಿದ ಪಾತ್ರದ ನಂತರ ವಿಶ್ವದಾದ್ಯಂತ ಆಳುವ ವರ್ಗದವರ ಕಣ್ಣು ಈ ಹೊಸ ಮಾಧ್ಯಮ ಪ್ರಕಾರದ ಮೇಲೆ ಬಿದ್ದಿದೆ. ವಿಕಿಲೀಕ್ಸ್ ಸ್ಥಾಪಕ ಜ್ಯುಲಿಯಾನ ಅಸ್ಸಾಂಜೆ ವಿರುದ್ಧ ನಡೆಯುತ್ತಿರುವ ಕಾನೂನು ಸಮರ ಇದಕ್ಕೆ ಸಾಕ್ಷಿ. ಸಚಿವ ಸಿಬಲ್ ಹೇಳಿರುವ ನಿಂದನಾತ್ಮಕ ಸಂದೇಶಗಳನ್ನು ತಡೆಯುವ ಉದ್ದೇಶ ಒಂದು ನೆಪ ಅಷ್ಟೆ. ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧದ ಅವಹೇಳನಕಾರಿ ಸಂದೇಶಗಳು ಕೂಡಾ ಉದ್ದೇಶಿತ ನಿಯಂತ್ರಣವನ್ನು ಸಮರ್ಥಿಸಿಕೊಳ್ಳಲು ಹೇಳುತ್ತಿರುವ ಒಂದು ಕಾರಣ. ಯಾವುದೇ ವ್ಯಕ್ತಿಯ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದರೆ, ಚಾರಿತ್ರ್ಯಹನನ ಮಾಡಿದರೆ ಕ್ರಮಕೈಗೊಳ್ಳಲು ಕಾನೂನುಗಳಿವೆ. ಈ ಕಾರಣಗಳಿಂದಾಗಿಯೇ ಕಪಿಲ್ ಸಿಬಲ್ ಅವರು ಹೊರಡಿಸುತ್ತಿರುವ ಹೊಸರಾಗ ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕಿಂತ ಮೊದಲು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರು ಟಿವಿ ಚಾನೆಲ್‌ಗಳು ಸೇರಿದಂತೆ ಮಾಧ್ಯಮಗಳ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರ ಬೇಕೆಂದು ಕೇಳಿ ವಿವಾದ ಹುಟ್ಟುಹಾಕಿದ್ದರು. ಇವೆಲ್ಲ ಬಿಡಿಬಿಡಿಯಾಗಿ ನಡೆದರೂ ಇದರ ಹಿಂದಿನ ಉದ್ದೇಶಗಳೆಲ್ಲವೂ ಒಂದೇ. ಅದು ಮಾಧ್ಯಮಗಳ ಮೇಲೆ ನಿಯಂತ್ರಣ. ಮಾಹಿತಿ ತಂತ್ರಜ್ಞಾನ ಸ್ಫೋಟವಾದ ನಂತರ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಎದುರಿಸುವುದೇ ಈಗಿನ ನಿಜವಾದ ಸವಾಲು. ಅಶ್ಲೀಲ ಚಿತ್ರಗಳ ಪ್ರದರ್ಶನ, ಪ್ರಚೋದನಕಾರಿ ಭಾಷಣಗಳ ಪ್ರಸಾರವಷ್ಟೇ ಅಲ್ಲ, ದೇಶದ್ರೋಹಿಗಳು ಮತ್ತು ಸಮಾಜಘಾತುಕ ಶಕ್ತಿಗಳು ಕೂಡಾ ಈ ತಂತ್ರಜ್ಞಾನವನ್ನು ದುರುಪಯೋಗ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕೂಡಾ ಇಂಟರ್‌ನೆಟ್ ದುರ್ಬಳಕೆಯ ಅಪರಾಧಗಳು ಹೆಚ್ಚುತ್ತಿವೆ. ಗಡಿಯೇ ಇಲ್ಲದ ಸೈಬರ್ ಅಪರಾಧಗಳ ನಿಯಂತ್ರಣ ಸರ್ಕಾರದ ಪಾಲಿಗೂ ದೊಡ್ಡ ತಲೆನೋವಾಗಿದೆ. ವಿದೇಶದಲ್ಲಿರುವ ಇಂಟರ್‌ನೆಟ್ ಸಂಸ್ಥೆಗಳು ತಮ್ಮ ದೇಶಕ್ಕೆ ತಕ್ಕುದಾದ ನೀತಿಸಂಹಿತೆಯನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಶೀಲವಾಗಿ ಕಾಣುವುದು ಭಾರತದ ಸಂದರ್ಭದಲ್ಲಿ ಅಶ್ಲೀಲವಾಗಿ ಕಾಣಬಹುದು. ಈ ಎಲ್ಲ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳನ್ನು ತಡೆಯುವ ಕಾನೂನನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಇದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕರೂಪವನ್ನು ಹೊಂದಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಲು ಸಾಧ್ಯ. ಇದರ ಜತೆಗೆ ಸೈಬರ್ ಅಪರಾಧಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಕೂಡಾ ಅಭಿವೃದ್ಧಿಗೊಳಿಸಬೇಕು. ಕೇಂದ್ರ ಸರ್ಕಾರ ಸಾಮಾಜಿಕ ಸಂವಹನ ತಾಣಗಳ ಮೇಲೆ ನಿಯಂತ್ರಣ ಹೇರುವ ಅಧಿಕಪ್ರಸಂಗತನವನ್ನು ಕೈಬಿಟ್ಟು ಈ ಕಡೆ ಗಮನಹರಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.