ಆಸರೆ ಮನೆಗಳ ಹಂಚಿಕೆ ಉತ್ತರ ಕರ್ನಾಟಕದಲ್ಲಿ ಎರಡೂವರೆ ವರ್ಷಗಳ ಹಿಂದೆ ಸಂಭವಿಸಿದ ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ವಿಷಯದಲ್ಲಿ ಸರ್ಕಾರ ಎಡವುತ್ತಲೇ ಇದೆ. `ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಹನ್ನೊಂದು ಜಿಲ್ಲೆಗಳಲ್ಲಿ ಸುಮಾರು 60 ಸಾವಿರ ಮನೆಗಳನ್ನು ಕಟ್ಟಿ ಫಲಾನುಭವಿಗಳಿಗೆ ಹಂಚಿಕೆ ಮಾಡಿ ಮುಗಿಸುತ್ತೇವೆ~ ಎಂದು ಸರ್ಕಾರ ಹಲವು ಸಲ ಹೇಳಿದ್ದರೂ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಮನೆಗಳ ನಿರ್ಮಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಅಡ್ಡಿ, ಆತಂಕಗಳು ಎದುರಾದವು. ಅವನ್ನೆಲ್ಲ ನಿವಾರಣೆ ಮಾಡಿಕೊಂಡು ಮನೆಗಳ ನಿರ್ಮಾಣ ಆರಂಭಿಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಸಂಘ ಸಂಸ್ಥೆಗಳು, ಮಠ, ಆಶ್ರಮಗಳು ನಿರ್ಮಿಸಿಕೊಟ್ಟಿರುವ ಮನೆಗಳನ್ನು ಹಂಚಿಕೆ ಮಾಡಿರುವುದನ್ನು ಬಿಟ್ಟರೆ ಸರ್ಕಾರ ನಿರ್ಮಿಸುತ್ತಿರುವ ಬಹುತೇಕ ಮನೆಗಳು ಇನ್ನೂ ಸಿದ್ಧವಾಗಿಲ್ಲ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮುಳ್ಳೊಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ 320 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವುದು ಅಲ್ಲಿನ ಜಿಲ್ಲಾಡಳಿತಕ್ಕೆ ಕಗ್ಗಂಟಾಗಿದೆ. ಬೆಣ್ಣೆಹಳ್ಳದ ದಂಡೆಯ ಮೇಲಿದ್ದ ಮುಳ್ಳೊಳ್ಳಿ ಗ್ರಾಮ ಪ್ರತಿ ವರ್ಷ ಪ್ರವಾಹದ ಭೀತಿ ಎದುರಿಸುತ್ತಿತ್ತು. ಈ ಹಳ್ಳಿಯನ್ನೇ ಸ್ಥಳಾಂತರಿಸಲು ನಿರ್ಧರಿಸಿ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕಿಲೋಮೀಟರ್ ದೂರದಲ್ಲಿ 320 ಮನೆಗಳನ್ನು ನಿರ್ಮಿಸಲಾಗಿದೆ. ಎರಡು ತಿಂಗಳ ಹಿಂದೆ ನೂತನ ಗ್ರಾಮ ಉದ್ಘಾಟನೆಯಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಎಪ್ಪತ್ತೈದು ಹೊಸ ಹೆಸರುಗಳ ಸೇರ್ಪಡೆಯಾಗಿ ಹಂಚಿಕೆಗೆ ಅಡ್ಡಿಯಾಗಿದೆ. ಖಾಲಿ ಬಿದ್ದಿರುವ ಈ ಮನೆಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು ಕಿಟಕಿ, ಬಾಗಿಲುಗಳನ್ನು ಕಿತ್ತೊಯ್ಯುವ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ. ಫಲಾನುಭವಿಗಳ ಪಟ್ಟಿಗೆ ಮುಳ್ಳೊಳ್ಳಿಯ ಪ್ರಭಾವಿ ವ್ಯಕ್ತಿಗಳ ಮಕ್ಕಳ ಹೆಸರನ್ನು ಹೊಸದಾಗಿ ಸೇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮನೆಗಳ ಹಂಚಿಕೆ ಸಮಸ್ಯೆ ಬಗೆಹರಿಸಲು ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮದ ಮುಖಂಡರನ್ನು ಒಳಗೊಂಡ ಮೂವತ್ತು ಸದಸ್ಯರ ಸಮಿತಿ ರಚಿಸಲಾಗಿದೆ. ಸಮಿತಿ ಹಲವು ಸಲ ಸಭೆ ನಡೆಸಿದ್ದರೂ ಹಂಚಿಕೆ ವಿವಾದ ಬಗೆಹರಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಗ್ರಾಮದ ಜನರೇ ಬಗೆಹರಿಸಿಕೊಳ್ಳಲಿ ಎಂದು ಅನಿರ್ದಿಷ್ಟ ಕಾಲ ಜಿಲ್ಲಾಡಳಿತ ಬಿಡಲಾಗದು. ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿವಹಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಮೂಲ ಫಲಾನುಭವಿಗಳಿಗೆ ಲಾಟರಿ ಎತ್ತುವ ಮೂಲಕ ಮನೆಗಳನ್ನು ಹಂಚಿಕೆ ಮಾಡಬಹುದು. ಹೊಸದಾಗಿ ಅರ್ಹ ಫಲಾನುಭವಿಗಳು ಸೇರ್ಪಡೆಯಾದರೆ ಅವರಿಗೆ ಮುಂದಿನ ದಿನಗಳಲ್ಲಿ ಮನೆ ಕಟ್ಟಿಕೊಡುವ ಬಗ್ಗೆ ಯೋಜನೆ ರೂಪಿಸಬೇಕು. ಮನೆ ಹಂಚಿಕೆ ಇನ್ನಷ್ಟು ವಿಳಂಬವಾದರೆ ಎಲ್ಲ ಮನೆಗಳ ಕಿಟಕಿ ಬಾಗಿಲುಗಳು ಕಳ್ಳರ ಪಾಲಾಗುತ್ತವೆ. ನೂತನ ಗ್ರಾಮ ಅಕ್ರಮ ಚಟುವಟಿಕೆಗಳ ಅಡ್ಡೆಯೂ ಆಗಬಹುದು. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.