ತೆಲಂಗಾಣ ತಳಮಳ ತೆಲಂಗಾಣ ವಿವಾದದ ಬಿಸಿ ಮತ್ತೆ ಇಡೀ ಆಂಧ್ರವನ್ನು ಆವರಿಸಿದೆ, ಹಿಂಸಾತ್ಮಕ ರೂಪ ತಳೆಯುತ್ತಿದೆ. ಈಗ ಇದು ರಾಜಕಾರಣಿಗಳಷ್ಟೇ ಕುಳಿತು ತೀರ್ಮಾನಿಸುವ ವಿಷಯವಾಗಿ ಉಳಿದಿಲ್ಲ. ವಿದ್ಯಾರ್ಥಿಗಳೂ ಸಕ್ರಿಯವಾಗಿ ಪರ-ವಿರೋಧ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರೂ ಚಳವಳಿಯಲ್ಲಿ ಧುಮುಕುತ್ತಿದ್ದಾರೆ. ವಿದ್ಯಾರ್ಥಿ ಶಕ್ತಿಯನ್ನಂತೂ ಯಾವ ವ್ಯವಸ್ಥೆಯೂ ಕಡೆಗಣಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ಆಂದೋಲನವನ್ನು ಸರ್ಕಾರ ಅತ್ಯಂತ ಸೂಕ್ಷ್ಮವಾಗಿಯೇ ನಿಭಾಯಿಸಬೇಕಿದೆ. ಆಂಧ್ರಪ್ರದೇಶವನ್ನು ವಿಭಜಿಸಿ ಪಶ್ಚಿಮ ಮತ್ತು ಉತ್ತರದ 10 ಜಿಲ್ಲೆಗಳು, ಹೈದರಾಬಾದ್ ಮತ್ತು ಸಿಕಂದರಾಬಾದ್ ನಗರಗಳನ್ನು ಒಳಗೊಂಡ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆ ಭಾಗದ ಜನ ಪಟ್ಟುಹಿಡಿದಿದ್ದಾರೆ. ಆದರೆ ರಾಜ್ಯ ವಿಭಜನೆಯನ್ನು ರಾಯಲ್‌ಸೀಮಾ ಮತ್ತು ಕರಾವಳಿಯ 13 ಜಿಲ್ಲೆಗಳ ಜನ ವಿರೋಧಿಸುತ್ತ್ದ್ದಿದು ಇದು ಕಗ್ಗಂಟಾಗಿದೆ. ಈ ಕುರಿತ ತೀರ್ಮಾನ ಅಷ್ಟು ಸುಲಭವೂ ಅಲ್ಲ, ಸರಳವೂ ಅಲ್ಲ. ದಶಕದಷ್ಟು ಹಿಂದೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಿನ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರಿಗೆ ಪತ್ರ ಬರೆದು ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿದ್ದರು. ಆಗ ಕ್ರಮ ಕೈಗೊಳ್ಳದೇ ಸುಮ್ಮನಿದ್ದ ಬಿಜೆಪಿ ಈಗ ಪ್ರತ್ಯೇಕ ರಾಜ್ಯಕ್ಕೆ ಬೆಂಬಲಿಸುತ್ತಿದೆ. ಈಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬರದೆ ಮೀನಮೇಷ ಎಣಿಸುತ್ತಿದೆ. ತಾನೇ ರಚಿಸಿದ ಶ್ರೀಕೃಷ್ಣ ಆಯೋಗದ ವರದಿಯನ್ನು ಮೂಲೆಗೆ ತಳ್ಳಿದೆ. 2009ರಲ್ಲಿಯೂ ತೆಲಂಗಾಣ ಚಳವಳಿ ಭುಗಿಲೆದ್ದಿತ್ತು. ಬಂದ್, ಆಸ್ತಿಪಾಸ್ತಿಗೆ ಬೆಂಕಿ, ಜನಪ್ರತಿನಿಧಿಗಳ ರಾಜೀನಾಮೆಗಳೆಲ್ಲ ನಡೆದಿದ್ದವು. ಆಗ ಕೇಂದ್ರ ಸರ್ಕಾರ `ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮರ್ಪಕ ತೀರ್ಮಾನ ಕೈಗೊಳ್ಳುವ ಆಶ್ವಾಸನೆ ನೀಡಿ' ಚಳವಳಿಯ ಕಾವನ್ನು ತಗ್ಗಿಸಿತ್ತು. ಅದರ ನಂತರ ಅನೇಕ ಸಲ ಈ ವಿಷಯ ಚರ್ಚೆಗೆ ಬಂದಿತ್ತು. ಕೊನೆಗೆ `ಇದೇ ಜ. 28ರ ಒಳಗೆ ಪ್ರತ್ಯೇಕ ರಾಜ್ಯ ಘೋಷಣೆ ಮಾಡುವುದಾಗಿ' ಕೇಂದ್ರ ಗೃಹ ಸಚಿವರು ಆಶ್ವಾಸನೆ ನೀಡಿದ್ದರು. ಆದರೆ ಅಂತಿಮ ಗಳಿಗೆಯಲ್ಲಿ ನಿಲುವು ಬದಲಾಯಿಸಿ `ಇನ್ನಷ್ಟು ಕಾಲಾವಕಾಶ ಅಗತ್ಯ' ಎಂದು ಹೇಳಿದ್ದು ಪ್ರತ್ಯೇಕ ತೆಲಂಗಾಣ ಹೋರಾಟಗಾರರ ಸಹನೆಯನ್ನು ಕೆಣಕಿದೆ. ಇದು ವಿನಾಕಾರಣ ವಿಳಂಬ ತಂತ್ರ ಎಂಬ ಭಾವನೆ ಅನೇಕರಲ್ಲಿ ಮೂಡಿದೆ. ಸುಳ್ಳು ಹೇಳಿಕೆ ನೀಡಿ ಜನರನ್ನು `ವಂಚಿಸಿದ್ದಕ್ಕಾಗಿ' ಈಗಿನ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಮತ್ತು ಹಿಂದಿನ ಗೃಹ ಸಚಿವ ಪಿ. ಚಿದಂಬರಂ ಮೇಲೆ ಮೊಕದ್ದಮೆ ದಾಖಲಿಸಲು ಆಂಧ್ರದ ಜಿಲ್ಲಾ ನ್ಯಾಯಾಲಯವೊಂದು ಪೊಲೀಸರಿಗೆ ಸೂಚಿಸಿದೆ. ಜನರ ಭಾವನೆಗಳ ಜತೆ ಚೆಲ್ಲಾಟ ಆಡುವ ರಾಜಕಾರಣಿಗಳಿಗೆ ಇದೊಂದು ಪಾಠವಾಗಬೇಕು. ತೆಲಂಗಾಣ ರಚನೆ ಬೇಡಿಕೆ ಕುರಿತಂತೆ ಪಕ್ಷ ರಾಜಕಾರಣವನ್ನು ಮೀರಿ ರಾಷ್ಟ್ರೀಯ ಹಿತಕ್ಕೆ ಪೂರಕವಾದ ನಿಲುವನ್ನು ತಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸುವುದು ಅಗತ್ಯ. ಚಳವಳಿಗಾರರು ಸಹ ಕೊಡು-ಕೊಳ್ಳುವ ಮನೋಭಾವ ಪ್ರದರ್ಶಿಸಿ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.