ಕಬ್ಬು ಬೆಳೆಗಾರರನ್ನು ರಕ್ಷಿಸಿ ಕಬ್ಬಿಗೆ ಉತ್ತಮ ಬೆಲೆ ನೀಡುವ ವಿಷಯದಲ್ಲಿ ರಾಜ್ಯ ಸರ್ಕಾರ ತನಗಿರುವ ಶಾಸನಬದ್ಧ ಅಧಿಕಾರ ಚಲಾಯಿಸಬೇಕು ಎಂಬ ರೈತರ ಒತ್ತಾಯಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು ನಿಗದಿಪಡಿಸಿರುವ ಬೆಲೆ ಏನೇನೂ ಸಾಲದು ಎಂದು ರೈತರು ದೂರುತ್ತಲೇ ಇದ್ದಾರೆ. ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಕಬ್ಬು ಬೆಳೆಗಾರರು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತ ಸಂಘಗಳ ನೇತೃತ್ವದಲ್ಲಿ ಬೀದಿಗೆ ಇಳಿದು ಪ್ರತಿಭಟನೆ, ಧರಣಿ ಮತ್ತಿತರ ಮಾರ್ಗ ಹಿಡಿದಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಬ್ಬು ಬೆಳೆಗಾರರು ಧರಣಿ ನಡೆಸಿದರು. ಕಬ್ಬು ಬೆಳೆಗಾರರು ಬೀದಿಗಿಳಿದ ಸಂದರ್ಭಗಳಲ್ಲಿ ಸರ್ಕಾರ ಅವರ ಬೇಡಿಕೆಗಳನ್ನು ಪರಿಗಣಿಸುವ ಭರವಸೆ ನೀಡುತ್ತದೆ. ಈಗಿನ ಸರ್ಕಾರವೂ ಹಿಂದೆ ಇದೇ ಭರವಸೆ ನೀಡಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎರಡು ವರ್ಷಗಳ ಹಿಂದೆಯೇ ಶಾಸನಬದ್ಧ ಕಾಯಿದೆ (ಸ್ಟೇಟ್ ಅಡ್ವೈಸ್ಡ್ ಪ್ರೈಸ್) ಅನ್ವಯ ಕಬ್ಬಿನ ಬೆಲೆ ನಿಗದಿಗೊಳಿಸುವುದಾಗಿ ಭರವಸೆ ನೀಡಿದ್ದರು. ಕೃಷಿ ಮಿಷನ್ ಅಧ್ಯಕ್ಷ ಎಸ್.ಎ. ಪಾಟೀಲ್ ಅವರ ನೇತೃತ್ವದಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಎಸ್‌ಎಪಿ ಜಾರಿಗೊಳಿಸುವುದರಿಂದ ಕಬ್ಬಿಗೆ ಉತ್ತಮ ಬೆಲೆ ಸಿಗಲಿದೆ. ದರ ನಿಗದಿಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ವರ್ಷದ ಆರಂಭದಲ್ಲೇ ಕಬ್ಬಿನ ಬೆಲೆ ನಿಗದಿ ಮಾಡಬೇಕು ಎಂದು ಪಾಟೀಲ್ ಸಮಿತಿ ಹೇಳಿತ್ತು. ಆದರೆ ಸರ್ಕಾರ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಮಾತೇ ಆಡುತ್ತಿಲ್ಲ. ಕಬ್ಬು ಬೆಳೆಗಾರರನ್ನು ಸಮಾಧಾನಪಡಿಸಲು ಸಮಿತಿ ರಚನೆ ಮಾಡಿ ಆನಂತರ ಅದರ ಶಿಫಾರಸುಗಳನ್ನು ಜಾರಿಗೆ ತರುವ ಬದ್ಧತೆ ತೋರದಿರುವುದು ರೈತರಿಗೆ ಮಾಡಿದ ಮೋಸವೇ ಸರಿ. ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು ಎಸ್‌ಎಪಿ ಜಾರಿಗೊಳಿಸಿವೆ. ಉತ್ತರ ಪ್ರದೇಶದಲ್ಲಿ ಟನ್‌ಗೆ ರೂ. 2,500, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಕ್ವಿಂಟಲ್‌ಗೆ ರೂ. 2400 ಬೆಲೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ನಷ್ಟದ ನೆಪ ಹೇಳುತ್ತ ರೈತರ ಬೇಡಿಕೆಯನ್ನು ನಿರಾಕರಿಸುತ್ತಿವೆ. ಸರ್ಕಾರ ಕಾರ್ಖಾನೆಗಳ ಮಾಲೀಕರ ಹಿತರಕ್ಷಣೆ ಮಾಡುತ್ತಿದೆ ಎಂಬುದು ರೈತರ ಆರೋಪ. ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ಹೇಳುತ್ತ ರೈತರನ್ನು ಸಂಕಷ್ಟಕ್ಕೆ ದೂಡಬಾರದು. ಕಾರ್ಖಾನೆಗಳಿಗೆ ಸಕ್ಕರೆ ಹಾಗೂ ಕಾಕಂಬಿ ಮತ್ತಿತರ ಉಪ ಉತ್ಪನ್ನಗಳಿಂದಲೂ ಸಾಕಷ್ಟು ಆದಾಯವಿದೆ. ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಬೇಕು. ರಾಜ್ಯದಲ್ಲಿ ಈ ವರ್ಷ ಬರದ ಪರಿಸ್ಥಿತಿ ಇದೆ. ಕೃಷಿ ಕಾರ್ಮಿಕರು ಉದ್ಯೋಗ ಹುಡುಕಿಕೊಂಡು ನೆರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಕಬ್ಬು ಮಾತ್ರವೇ ಅಲ್ಲ, ಇನ್ನಿತರ ಕೃಷಿ ಉತ್ಪನ್ನಗಳಿಗೂ ಉತ್ತಮ ಬೆಲೆ ನಿಗದಿ ಮಾಡಬೇಕು. ಇಲ್ಲವಾದರೆ ಭವಿಷ್ಯದಲ್ಲಿ ರೈತರೂ ಪರ್ಯಾಯ ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.