ಆಫ್ಘನ್: ಜನಾಂಗ ಕಲಹದ ಭೀತಿ ಮೊಹರಂ ದಿನದಂದು ನಡೆದ ಬಾಂಬ್ ದಾಳಿ ಮತ್ತಿತರ ಹಿಂಸಾಚಾರದ ಘಟನೆಗಳಿಂದಾದ ಸಾವು ನೋವಿನಿಂದ ಆಫ್ಘಾನಿಸ್ತಾನ ತತ್ತರಿಸಿದೆ. ಈ ಘಟನೆಗಳನ್ನು ನೋಡಿದರೆ ದೇಶದಲ್ಲಿ ಜನಾಂಗ ಕಲಹವನ್ನು ಸಿಡಿಸುವ ಪ್ರಯತ್ನಗಳು ನಡೆಯುತ್ತಿರುವಂತೆ ಕಾಣುತ್ತಿದೆ. ರಾಜಕೀಯ ಅಧಿಕಾರಕ್ಕಾಗಿ ದೇಶದಲ್ಲಿ ವಿವಿಧ ಪಂಗಡಗಳು ಹೋರಾಟ ನಡೆಸುತ್ತಿವೆಯಾದರೂ ಹಮಿದ್ ಕರ್ಜೈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಧರ್ಮದ ಸುನ್ನಿ ಮತ್ತು ಶಿಯಾ ಪಂಗಡಗಳ ನಡುವೆ ಹೊಂದಾಣಿಕೆ ಸಾಧಿಸಲಾಗಿತ್ತು. ಹೀಗಾಗಿ ಎರಡೂ ಪಂಗಡಗಳ ನಡುವೆ ಇರಾಕ್ ಮತ್ತು ಪಾಕಿಸ್ತಾನದಲ್ಲಿ ಕಂಡುಬರುವಂಥ ಕಲಹ ಆಫ್ಘಾನಿಸ್ತಾನದಲ್ಲಿ ಇರಲಿಲ್ಲ. ಆದರೆ ಮೊಹರಂ ದಿನದ ಘಟನೆಗಳಿಂದಾಗಿ ಇದೀಗ ಆಫ್ಘಾನಿಸ್ತಾನವೂ ಮತ್ತೊಂದು ಇರಾಕ್ ಆಗಿ ಪರಿವರ್ತಿತವಾಗುವ ಸಾಧ್ಯತೆಗಳು ಸೃಷ್ಟಿಯಾಗಿವೆ. ಆಫ್ಘಾನಿಸ್ತಾನದಲ್ಲಿ ನಡೆದ ಹಿಂಸಾಚಾರಕ್ಕೆ ತಾನೆ ಕಾರಣ ಎಂದು ಪಾಕಿಸ್ತಾನದಲ್ಲಿ ನೂರಾರು ಶಿಯಾ ಮುಸ್ಲಿಮರ ಸಾವಿಗೆ ಕಾರಣವಾಗಿರುವ ಉಗ್ರವಾದಿ ಸಂಘಟನೆ `ಲಷ್ಕರ್-ಇ-ಜಾಂಗ್ವಿ~ ಹೇಳಿಕೊಂಡಿದೆ. ಈ ಘಟನೆಗಳಿಗೆ ಪ್ರತೀಕಾರವಾಗಿ ಶಿಯಾ ಪಂಗಡವೂ ತನ್ನದೇ ಆದ ಉಗ್ರವಾದಿ ಸಂಘಟನೆಗಳ ಮೂಲಕ ಸುನ್ನಿಗಳ ಮೇಲೆ ದಾಳಿ ನಡೆಸಬಹುದಾದಂಥ ಮತ್ತು ಅಂಥ ಸಂಘಟನೆಗಳಿಗೆ ಶಿಯಾ ಪ್ರಾಬಲ್ಯದ ಇರಾನ್ ಬೆಂಬಲವಾಗಿಯೂ ನಿಲ್ಲಬಹುದಾದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಪಾಕಿಸ್ತಾನ, ಆಫ್ಘಾನಿಸ್ತಾನದ ಸಮಸ್ಯೆಯ ಭಾಗವೇ ಆಗಿದೆ. ಆಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು ಪಾಕಿಸ್ತಾನದ ಆಡಳಿತಗಾರರು ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್‌ಐ ಆಫ್ಘಾನಿಸ್ತಾನವನ್ನು ಅಸ್ಥಿರಗೊಳಿಸಲು ಉಗ್ರವಾದಿಗಳಿಗೆ ನೆರವಾಗುತ್ತಿದೆ. ತಾಲಿಬಾನ್ ಸೇರಿದಂತೆ ಹತ್ತಾರು ಉಗ್ರವಾದಿ ಸಂಘಟನೆಗಳು ಪಾಕಿಸ್ತಾನದ ಗಡಿಯಲ್ಲಿ ನೆಲೆ ಸ್ಥಾಪಿಸಿಕೊಂಡು ಅಂಥ ಕೃತ್ಯದಲ್ಲಿ ತೊಡಗಿವೆ. ಇದು ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮತ್ತು ನ್ಯಾಟೋ ಪಡೆಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಆಫ್ಘಾನಿಸ್ತಾನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಶ್ವಸಂಸ್ಥೆ ನೇತೃತ್ವದಲ್ಲಿ ಇತ್ತೀಚೆಗೆ ಜರ್ಮನಿಯ ಬಾನ್‌ನಲ್ಲಿ ನಡೆದ ಶೃಂಗ ಸಭೆಯನ್ನು ತಾಲಿಬಾನ್ ಅಲ್ಲದೆ ಪಾಕಿಸ್ತಾನವೂ ಬಹಿಷ್ಕರಿಸಿತ್ತು. ಬಾನ್ ಶೃಂಗಸಭೆ ಮುಕ್ತಾಯ ಆಗುವ ಮೊದಲೆ ಆಫ್ಘಾನಿಸ್ತಾನದಲ್ಲಿ ಶಿಯಾಗಳ ಹತ್ಯೆ ನಡೆದು ಜನಾಂಗ ಹಿಂಸಾಚಾರ ಸಿಡಿಯಬಹುದಾದ ಸ್ಥಿತಿ ಉಂಟಾಗಿದೆ. ತನ್ನನ್ನು ಹೊರಗುಳಿಸಿ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ ಎನ್ನುವ ರೀತಿಯಲ್ಲಿ ಈ ಹಿಂಸಾಚಾರ ನಡೆದಿದೆ. ನೆರೆಯ ರಾಷ್ಟ್ರವಾಗಿ ಆಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನ ವಹಿಸಬೇಕಾದ ಪಾತ್ರ ಮಹತ್ವದ್ದಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆಂದು ಅದನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಅಪಾಯಕಾರಿ. ಈ ವಿಚಾರದಲ್ಲಿ ಎರಡೂ ದೇಶಗಳ ನಾಯಕರು ಪರಸ್ಪರ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಅದು ಸಾಧ್ಯವಾಗದಿದ್ದರೆ ಪಾಕಿಸ್ತಾನದ ಅಂಥ ಪ್ರಯತ್ನಗಳನ್ನು ಹತ್ತಿಕ್ಕಲು ಅಂತರರಾಷ್ಟ್ರೀಯ ಸಮುದಾಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.