ನಾಡವರ ಬದುಕಿನ ಚಿಂತನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸರ್ವಜ್ಞನೂ ಅಲ್ಲ; ಧನ್ವಂತರಿಯೂ ಅಲ್ಲ ಎಂದು ನಮ್ರವಾಗಿ ಒಪ್ಪಿಕೊಂಡಿರುವ ವಿದ್ವಾಂಸ ಸಿಪಿಕೆ ಅವರು ಹೈದರಾಬಾದ್ ಕರ್ನಾಟಕದ ಬತ್ತದ ಕಣಜ ಗಂಗಾವತಿಯಲ್ಲಿ ಆರಂಭವಾಗಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಕನ್ನಡ ನುಡಿ- ಗಡಿಗೆ ಸಂಬಂಧಿಸಿ ಹೊಸ ಅಂಶಗಳನ್ನು ಹೇಳಿಲ್ಲ. ಹಿಂದಿನ ಅಧ್ಯಕ್ಷರು ಈ ಸಂಬಂಧದಲ್ಲಿ ಹೇಳಿದ್ದನ್ನು ತಮ್ಮದೇ ಧಾಟಿಯಲ್ಲಿ ಅಚ್ಚುಕಟ್ಟಾಗಿ ನಿವೇದಿಸಿದ್ದಾರೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳ ಪರಿಣಾಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಗುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು ಅವರು ಕಡೆಗಣಿಸಿಲ್ಲ. `ಕಾಶ್ಮೀರದಿಂದ ಕನ್ಯಾಕುಮಾರಿಯತನಕ ಭ್ರಷ್ಟಾಚಾರ ಭೂಯಿಷ್ಠವಾಗಿದೆ; ಕರ್ನಾಟಕ ಹೇಗೆ ಅಪವಾದವಾದೀತು? ಅದಕ್ಕೆ ಪ್ರಥಮ ಸ್ಥಾನ ಎಂಬ ಪ್ರಶಂಸೆ ಬೇರೆ~ ಎಂಬಂಥ ಕಿಡಿನುಡಿಗಳನ್ನೂ ಸೇರಿಸಿದ್ದಾರೆ. `ಹಣವನೊಂದನೆ ಗಳಿಸು, ಫಲವಿಲ್ಲ ಕಲೆಗೆ~ ಎಂಬ ಪ್ರಾಚೀನ ವ್ಯಂಗ್ಯೋಕ್ತಿಯನ್ನು ಉಲ್ಲೇಖಿಸಿ `ಇಂದು ಧನಪರತೆ ಮೆರೆಯುತ್ತಿದೆಯೇ ಹೊರತು ಜನಪರತೆಯಲ್ಲ~ ಎಂದು ವರ್ತಮಾನದ ರಾಜಕೀಯ ಸ್ಥಿತಿಗೆ ಕನ್ನಡಿ ಹಿಡಿದಿದ್ದಾರೆ. ಕನ್ನಡ ಶಾಲೆಗಳ ದುಃಸ್ಥಿತಿಗೆ ಕಾರಣವಾದ ಸರ್ಕಾರದ ಅವಜ್ಞೆ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಇಂಗ್ಲಿಷ್ ಮಾಧ್ಯಮ ಕುರಿತಾದ ಜನರ ಕಲ್ಪನೆಗಳ ಪೊಳ್ಳುತನವನ್ನು ಶಿಕ್ಷಣತಜ್ಞರು, ಭಾಷಾ ತಜ್ಞರು ಮತ್ತು ಮನೋವಿಜ್ಞಾನಿಗಳ ಅಭಿಮತದೊಂದಿಗೆ ಬಯಲಿಗೆಳೆದು ಕನ್ನಡದ ಬದ್ಧತೆ ಎಲ್ಲ ಹಂತಗಳಲ್ಲಿಯೂ ಇರಬೇಕೆಂದು ಗಟ್ಟಿಯಾಗಿಯೇ ಪ್ರತಿಪಾದಿಸಿದ್ದಾರೆ. ಈಚಿನ ಸಾಹಿತ್ಯ ಸಮ್ಮೇಳನಗಳಿಗೆ ಜನಸಾಮಾನ್ಯರು ಅಪಾರ ಸಂಖ್ಯೆಯಲ್ಲಿ ಪಾಲುಗೊಳ್ಳುತ್ತಿರುವ ಆರೋಗ್ಯಕರ ಬೆಳವಣಿಗೆಯನ್ನೂ ಸಿಪಿಕೆ ನಿರ್ಲಕ್ಷಿಸಿಲ್ಲ. ಅದರ ಪರಿಣಾಮವೇ ಅವರು `ಕನ್ನಡ ಸಾಹಿತ್ಯ ಎಂಬುದನ್ನು ಏಕಶಬ್ದವಾಗಿ ಗ್ರಹಿಸದೆ ಕನ್ನಡ, ಸಾಹಿತ್ಯ ಎಂದು ಬಿಡಿಸಿ ಪರಿಭಾವಿಸುವುದು ಯುಕ್ತ~ವೆಂದು ಸೂಚಿಸಿದ್ದಾರೆ. ಇದುವರೆಗೆ ಸಾಹಿತ್ಯದ ಮೇಲೆ ಹಾಕುತ್ತಿದ್ದ ಒತ್ತನ್ನು ಈಗ ಕನ್ನಡದ ಮೇಲೆ ಹಾಕಬೇಕಾಗಿದೆ; ಏಕೆಂದರೆ ಕನ್ನಡವನ್ನು ಗಟ್ಟಿಗೊಳಿಸಿ ಕಟ್ಟುವ, ಆ ಮೂಲಕ ಸಮಷ್ಟಿ ಜೀವನವನ್ನು ಕಟ್ಟುವ ಕೆಲಸಕ್ಕೆ ಆದ್ಯತೆ ನೀಡುವ ಮೂಲಕ ಈವರೆಗಿನ ಅಧ್ಯಕ್ಷರ ಭಾಷಣಗಳಿಗಿಂತ ಭಿನ್ನತೆಯನ್ನು ವೆುರೆದಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರವಲ್ಲದೆ, ಉನ್ನತ ತಾಂತ್ರಿಕ ಶಿಕ್ಷಣವನ್ನು ಕೂಡ ಕನ್ನಡದಲ್ಲಿಯೇ ನೀಡುವ ಸಂಭಾವ್ಯತೆಯನ್ನು ಸೂಚಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಉದ್ಯೋಗ ಪಡೆಯುವುದು ಕಷ್ಟವಲ್ಲ ಎಂಬ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಿಸಬೇಕು ಎಂಬ ಸಲಹೆ ತತ್ಕಾಲದ ಅವಶ್ಯಕತೆಯನ್ನು ನೀಗಿಸುತ್ತದೆಯೇ ವಿನಾ ಇಂಗ್ಲಿಷ್ ಮಾಧ್ಯಮ ಕುರಿತಾಗಿ ಜನತೆಯಲ್ಲಿ ಹುದುಗಿರುವ ನಂಬಿಕೆಯನ್ನು ನಿವಾರಿಸಲಾರದು. ಇದು ಈಗ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಚೀನ, ಜಪಾನ್, ಕೊರಿಯಾ ದೇಶಗಳಲ್ಲಿ ಆಯಾ ಸ್ಥಳೀಯ ಭಾಷೆಗಳ ಮೂಲಕವೇ ಆಗಿರುವ ತಾಂತ್ರಿಕ ಪ್ರಗತಿಯನ್ನು ತುಲನಾತ್ಮಕವಾಗಿ ನೋಡುವುದಕ್ಕೆ ಪ್ರೇರಕವಾಗಿದೆ. ಕವಿರಾಜಮಾರ್ಗದ ಕಾಲದಲ್ಲಿಯೇ ಕನ್ನಡಿಗರನ್ನು `ಅಭಿಮಾನಿಗಳ್, ಅತ್ಯುಗ್ರರ್~ ಎಂದು ಗುರುತಿಸಲಾಗಿತ್ತು. ಇದಕ್ಕೆ ವಿಪರ್ಯಾಸವೆಂಬಂತೆ ಇಂದಿನ ಸಮಾಜ ಜಾತಿ, ಮತಗಳಿಂದ ಜರ್ಜರಿತವಾಗಿದೆ. ಇವನ್ನೂ, ಮಡೆಸ್ನಾನದಂಥ ಮೌಢ್ಯ ಮತ್ತಿತರ ಜಾಡ್ಯಗಳನ್ನೂ ನಿವಾರಿಸುವ ಕೆಲಸವನ್ನು ಸಾಹಿತ್ಯ ಮಾಡಬೇಕಿದೆ ಎಂಬ ಆಶಯವನ್ನು ವ್ಯಕ್ತಪಡಿಸುವ ಮೂಲಕ ಸಾಮಾಜಿಕ ಸ್ಥಿತಿಗತಿಗಳಿಗೂ ಸ್ಪಂದಿಸಿದ್ದಾರೆ. ನಾಡಿನ ಜನತೆ `ಸಾಧು~ಗಳಾಗದೆ, ಸಾತ್ವಿಕ ಎನ್ನಬಹುದಾದ ಉಗ್ರತೆಯನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡರೆ ನೆಲ-ಜಲ, ನುಡಿ ಗಡಿಗಳನ್ನು ರಕ್ಷಣೆಗೆ ತಕ್ಕ ಮಾನಸಿಕ ವೇದಿಕೆ ಕನ್ನಡ ಜನಪದದಲ್ಲಿ ನಿರ್ಮಾಣವಾಗಬಹುದೆಂಬ ಆಶಯ ವ್ಯಕ್ತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.