ಪುಂಡಾಟಿಕೆ ಸಲ್ಲದು ಶ್ರೀರಾಮಸೇನೆಯ ಕಾರ್ಯಕರ್ತರ ಪುಂಡಾಟ ಮಿತಿಮೀರಿದೆ. ಅದರ ಮುಖಂಡ ಪ್ರಮೋದ್ ಮುತಾಲಿಕ್ ಕಳೆದ ಶುಕ್ರವಾರ ತಮ್ಮ ಕೆಲ ಬೆಂಬಲಿಗರೊಂದಿಗೆ ಬೆಂಗಳೂರು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ನಿರ್ದೇಶಕರ ಡಾ. ನಿರಂಜನ ಅವರ ಮೇಲೆ ಹಲ್ಲೆ ಮಾಡಿ, ಫ್ಯಾಕ್ಸ್ ಯಂತ್ರ ಮತ್ತು ದೂರವಾಣಿ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ಕಳೆದ ಆಗಸ್ಟ್- ಸೆಪ್ಟಂಬರ್ ಅವಧಿಯಲ್ಲಿ ದೂರಶಿಕ್ಷಣ ವಿಭಾಗ ನಡೆಸಿದ ಪರೀಕ್ಷೆಗಳಲ್ಲಿ ದಾವಣಗೆರೆ, ಬಳ್ಳಾರಿ, ಕೊಪ್ಪಳ ಮತ್ತಿತರ ಕಡೆ ನಕಲು ನಡೆದಿದೆ ಎಂದು ಆರೋಪಿಸಿ ಮರುಪರೀಕ್ಷೆ ನಡೆಸುವಂತೆ ಅವರು ಒತ್ತಾಯಿಸಿದ್ದರು. ಪರೀಕ್ಷಾ ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಮತ್ತು ಮರುಪರೀಕ್ಷೆಗೆ ಒತ್ತಾಯಿಸುವ ಹಕ್ಕು ಅವರಿಗೆ ಇದೆ. ಆದರೆ ನಿರ್ದೇಶಕರ ಮೇಲೆ ಹಲ್ಲೆ ಮಾಡಿದ್ದು ಅಕ್ಷಮ್ಯ ಮತ್ತು ಖಂಡನೀಯ. ದೂರಶಿಕ್ಷಣ ನಿರ್ದೇಶಕರು ತಮ್ಮ ಆದೇಶದಂತೆ ಕಾರ್ಯ ನಿರ್ವಹಿಸಬೇಕು ಎಂಬ ಮುತಾಲಿಕ್ ಅವರ ಧೋರಣೆ ಪಾಳೇಗಾರಿಕೆ ಮನಸ್ಥಿತಿಯ ಸಂಕೇತ. ಮರು ಪರೀಕ್ಷೆಗೆ ವಿಶ್ವವಿದ್ಯಾಲಯದ ಅಥವಾ ಸರ್ಕಾರದ ಮೇಲೆ ಕಾನೂನು ಚೌಕಟ್ಟಿನೊಳಗೆ ಒತ್ತಾಯ ತರುವ ಕೆಲಸ ಮಾಡದೆ ದೌರ್ಜನ್ಯ ಮಾಡಿ ಬೇಡಿಕೆ ಈಡೇರಿಸಿಕೊಳ್ಳುವ ಈ ಧೋರಣೆಯನ್ನು ಒಪ್ಪಲಾಗದು. ಶ್ರೀರಾಮಸೇನೆ ಕಾರ್ಯಕರ್ತರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಇದುವರೆಗೆ ಅವರು ನಡೆಸಿದ ಪುಂಡಾಟಿಕೆಗಳಿಗೆ ಶಿಕ್ಷೆಯಾಗಿಲ್ಲ. ಅವರಿಗೆ ಶಿಕ್ಷೆ ಆಗುವವರೆಗೆ ಅವರು ಹೀಗೇ ವರ್ತಿಸುತ್ತಾರೆ. ಅವರ ಪುಂಡಾಟಿಕೆಯನ್ನು ಸರ್ಕಾರ ಎಷ್ಟು ದಿನ ಸಹಿಸಿಕೊಳ್ಳಬೇಕು? ಪ್ರಮೋದ್ ಮುತಾಲಿಕ್ ಮತ್ತು ಅವರ ಬೆಂಬಲಿಗರು ತಮಗೆ ಯಾವ ಕಾನೂನುಗಳೂ ಅನ್ವಯವಾಗುವುದಿಲ್ಲ ಎಂಬಂತೆ ವರ್ತಿಸುವುದನ್ನು ನೋಡಿದರೆ ಅವರಿಗೆ ರಾಜ್ಯ ಸರ್ಕಾರದ ಕುಮ್ಮಕ್ಕು ಇದೆ ಎಂಬ ಅನುಮಾನ ಬರುತ್ತದೆ. ಇದೇ ಸೇನೆಯ ಕಾರ್ಯಕರ್ತರು 2009ರ ಜನವರಿಯಲ್ಲಿ ಮಂಗಳೂರಿನ `ಅಮ್ನೇಶಿಯಾ~ ಹೆಸರಿನ ಪಬ್ ಮೇಲೆ ದಾಳಿ ಮಾಡಿ ಅಲ್ಲಿದ್ದ ಯುವತಿಯರನ್ನು ಓಡಾಡಿಸಿಕೊಂಡು ಹೊಡೆದಿದ್ದರು. 2010ರ ಆಗಸ್ಟ್‌ನಲ್ಲಿ ಮೈಸೂರಿನ ಪಬ್ ಮೇಲೂ ದಾಳಿ ಮಾಡಿ ಅಲ್ಲಿದ್ದ ಯುವಕ-ಯುವತಿಯರ ಮೇಲೆ ಹಲ್ಲೆ ಮಾಡಿದ್ದರು. ಈ ದಾಳಿಗಳು ಇಡೀ ದೇಶದ ಗಮನಕ್ಕೆ ಬಂದು ರಾಜ್ಯದ ವರ್ಚಸ್ಸಿಗೆ ಹಾನಿಯಾಗಿತ್ತು. ಇಂಥ ಕಾರ್ಯಕರ್ತರ ಪುಂಡಾಟಿಕೆ ಬಗ್ಗೆ ಪೊಲೀಸರು ಉದಾರವಾಗಿ ವರ್ತಿಸುತ್ತ ಬಂದಿದ್ದರಿಂದ ಅವರ ಹಾವಳಿ ಮಿತಿಮೀರಿದೆ. ಹಿಂದೊಮ್ಮೆ ಬೆಂಗಳೂರಿನಲ್ಲಿ ಕೆಲವು ವ್ಯಕ್ತಿಗಳು ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದು ಅವಮಾನಿಸಿದ್ದರು. ಈ ಘಟನೆಯ ನಂತರವಾದರೂ ಅವರು ಬದಲಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ರಾಮಸೇನೆ ಕಾರ್ಯಕರ್ತರಿಂದ ಅವಮಾನಕ್ಕೆ ಒಳಗಾದವರು ಪ್ರತೀಕಾರದ ಮನಃಸ್ಥಿತಿ ಬೆಳೆಸಿಕೊಂಡರೆ ಅದು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಅದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮಕೈಗೊಂಡಿದ್ದಾರೆ ಎಂಬುದೇ ಸಮಾಧಾನದ ವಿಷಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.