ಅನಿವಾರ್ಯ ಕ್ರಮ ಬೆಳಗಾವಿ ಮಹಾನಗರಪಾಲಿಕೆಯ ವಿಸರ್ಜನೆ ಅನಿವಾರ್ಯವಾಗಿದ್ದ ಆಡಳಿತಾತ್ಮಕ ಕ್ರಮ. ಚುನಾಯಿತ ಮಂಡಲಿಯಾಗಿ, ಮೂಲಸೌಕರ್ಯಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಸ್ಥಳೀಯ ಜನರನ್ನು ಭಾಷಿಕ ನೆಲೆಯಲ್ಲಿ ವಿಭಜಿಸುವ ಕ್ಷುಲ್ಲಕ ರಾಜಕೀಯ ನಡೆಸುತ್ತ ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಪುಂಡಾಟಿಕೆಗೆ, ಸರ್ಕಾರ ಆಡಳಿತಾತ್ಮಕ ಕ್ರಮದ ಮೂಲಕ ಎಚ್ಚರಿಕೆ ನೀಡಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಇತ್ಯರ್ಥವಾಗಿರುವ ಸಂಗತಿ. ಆದರೂ, ಅದನ್ನು ವಿವಾದದ ಪ್ರಶ್ನೆಯಾಗಿ ಉಳಿಸಿಕೊಂಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ, ಮಹಾನಗರಪಾಲಿಕೆಯ ಆಡಳಿತವನ್ನು ತನ್ನ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ಇದು ತಕ್ಕ ಪಾಠವಾಗಿದೆ. ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿದ ಪಾಲಿಕೆಯ ಚುನಾಯಿತ ಮಂಡಲಿಯನ್ನು ಕಾನೂನು ಪ್ರಕಾರ ರದ್ದುಪಡಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ವ್ಯಕ್ತವಾಗಿರುವುದು ಅತಿರೇಕದ ಕ್ರಮ. ಎಂಇಎಸ್ ಮುಖಂಡರ ತಾಳಕ್ಕೆ ಮಹಾರಾಷ್ಟ್ರದ ರಾಜಕೀಯ ಪಕ್ಷಗಳ ಧುರೀಣರು ಕುಣಿಯುತ್ತಿರುವುದು ಆತಂಕದ ಸಂಗತಿ. ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ವೈಷಮ್ಯ ಹುಟ್ಟುಹಾಕುವ ಇಂಥ ಚಿಲ್ಲರೆ ರಾಜಕೀಯಕ್ಕೆ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಇಳಿಯಬಾರದು. ಈ ವಿಷಯವನ್ನು ಮುಂದೆ ಮಾಡಿ ಸಂಸತ್ತಿನಲ್ಲಿ ಗಲಾಟೆ ಮಾಡಿದ ಶಿವಸೇನೆ ಸದಸ್ಯರಿಗೆ ತಕ್ಕ ಉತ್ತರ ನೀಡಲಾಗದ ರಾಜ್ಯದ ಸಂಸದರ ನಿಷ್ಕ್ರಿಯತೆಯನ್ನು ರಾಜ್ಯದ ಜನತೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗಡಿ ವಿವಾದವನ್ನು ಜೀವಂತ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಎಂಇಎಸ್‌ನ ಸಂಕುಚಿತ ನಡವಳಿಕೆಯ ಪರಿಣಾಮ ಬೆಳಗಾವಿ ಮಹಾನಗರ ಮತ್ತು ಗಡಿಭಾಗದ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಇದು ಗಡಿಭಾಗದ ಮರಾಠಿಗರಿಗೂ ಮನವರಿಕೆ ಆಗಿದೆ. ಆದ್ದರಿಂದ ಈಚಿನ ವರ್ಷಗಳಲ್ಲಿ ಎಂಇಎಸ್ ಅಭ್ಯರ್ಥಿಗಳು ದಯನೀಯವಾಗಿ ಸೋಲುತ್ತಿದ್ದಾರೆ. ಆದ್ದರಿಂದಲೇ ಜನರನ್ನು ಭಾವನಾತ್ಮಕವಾಗಿ ಉದ್ರೇಕಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕೆ ಪ್ರತಿ ಸಂದರ್ಭದಲ್ಲಿಯೂ ಅವರು ಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯೋತ್ಸವದ ದಿನ ~ಕರಾಳ ದಿನ ಆಚರಣೆ~ ಇಂಥ ಕಿಡಿಗೇಡಿತನದ ಯತ್ನ. ಇದುವರೆಗೆ ಮರಾಠಿಗರ ಪುಂಡಾಟಿಕೆಯನ್ನು ನಿರ್ಲಕ್ಷಿಸುತ್ತಿದ್ದ ಕನ್ನಡ ಸಂಘಟನೆಗಳು ಈಚಿನ ವರ್ಷಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಲು ಆರಂಭಿಸಿವೆ. ಇದಕ್ಕೆ ಎಂಇಎಸ್ ಪ್ರಚೋದನೆಯೇ ಕಾರಣ. ಭಾಷೆ ಮತ್ತು ಧರ್ಮವನ್ನು ಮುಂದಿಟ್ಟುಕೊಂಡು ಜನರನ್ನು ಪ್ರಚೋದಿಸುವುದರಿಂದ ಕೆಲವೇ ರಾಜಕೀಯ ವ್ಯಕ್ತಿಗಳಿಗೆ ಲಾಭವೇ ವಿನಾ ಜನತೆಗೆ ಯಾವ ಪ್ರಯೋಜನವೂ ಇಲ್ಲ. ನಿಯಮಬಾಹಿರವಾಗಿ ನಡೆದುಕೊಂಡ ಪಾಲಿಕೆ ಚುನಾಯಿತ ಮಂಡಲಿಯನ್ನು ವಿಸರ್ಜಿಸಿರುವ ಸರ್ಕಾರ ಅಲ್ಲಿ ಹಿಂದೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು. ಆದಷ್ಟು ಬೇಗ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಕೈಗೆ ಅಧಿಕಾರ ನೀಡಬೇಕು. ವಿಧಾನಸಭೆ ಅಧಿವೇಶನ ನಡೆಸುವಷ್ಟು ಪ್ರಾಮುಖ್ಯತೆಯನ್ನು ಬೆಳಗಾವಿ ನಗರಕ್ಕೆ ನೀಡಿರುವ ರಾಜ್ಯ ಸರ್ಕಾರದ ಸದ್ಭಾವನೆಯನ್ನು ಸ್ಥಳೀಯ ಮರಾಠಿ ಭಾಷಿಕರೂ ಅರ್ಥ ಮಾಡಿಕೊಳ್ಳಬೇಕು. ಎಂಇಎಸ್ ಮುಖಂಡರ ಪ್ರಚೋದನೆಯ ನಡುವೆಯೂ ಕನ್ನಡಿಗರು ಮತ್ತು ಮರಾಠಿಗರ ನಡುವಣ ಬಾಂಧವ್ಯಕ್ಕೆ ಧಕ್ಕೆಯಾಗಿಲ್ಲ. ಆದ್ದರಿಂದ ಅಭಿವೃದ್ಧಿಯೊಂದನ್ನೇ ಗುರಿಯಾಗಿಟ್ಟುಕೊಂಡ ಯೋಗ್ಯ ವ್ಯಕ್ತಿಗಳನ್ನು ಪಾಲಿಕೆ ಸದಸ್ಯರನ್ನಾಗಿ ಚುನಾಯಿಸುವ ವಿವೇಕವನ್ನು ಕನ್ನಡಿಗರೂ, ಮರಾಠಿಗರೂ ಪ್ರದರ್ಶಿಸಬೇಕು. ರಾಜಕೀಯ ಪಕ್ಷಗಳ ಸಿದ್ಧಾಂತಕ್ಕಿಂತ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಿಕೊಡುವ ಬದ್ಧತೆ ಸ್ಥಳೀಯ ಸಂಸ್ಥೆಗಳಲ್ಲಿ ಅವಶ್ಯಕ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.