ತಾಪಮಾನ ನಿಯಂತ್ರಣ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಸೇರ್ಪಡೆಯಿಂದ ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತಂತೆ ವಿಶ್ವದ 194 ರಾಷ್ಟ್ರಗಳ ನಡುವೆ ಸಹಮತ ವ್ಯಕ್ತವಾಗಿದೆ. ದಕ್ಷಿಣ ಆಫ್ರಿಕಾದ ಡರ್ಬಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ವಿಶ್ವ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಶೃಂಗಸಭೆಯಲ್ಲಿ ಈ ಒಮ್ಮತ ಮೂಡಿದೆ. ಇದು ಆಶಾದಾಯಕ ಬೆಳವಣಿಗೆ. ಜಾಗತಿಕ ತಾಪಮಾನ ತಗ್ಗಿಸುವ ವಿಷಯದಲ್ಲಿ ಭಾರತವೂ ಸೇರಿದಂತೆ ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳು ಹಾಗೂ ಐರೋಪ್ಯ ಸಮುದಾಯದ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅದರಿಂದಾಗಿ ಭಾರತ ಕ್ಯೂಟೊ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಹಸಿರು ಮನೆಗಳು ಹೊರಸೂಸುವ ಅನಿಲಗಳನ್ನು ನಿಯಂತ್ರಿಸುವ ವಿಷಯದಲ್ಲಿ ಹೊಸ ಒಪ್ಪಂದಕ್ಕೆ ಸಂಬಂಧಿಸಿದ ಚರ್ಚೆ ಮುಂದಿನ ವರ್ಷ ಆರಂಭವಾಗಿ 2015ರ ವೇಳೆ ಪೂರ್ಣಗೊಳ್ಳಲಿದೆ. ಆನಂತರ ಹಸಿರು ಮನೆಗಳು ಹೊರಸೂಸುವ ಅನಿಲ ಪ್ರಮಾಣವನ್ನು ಕಡಿಮೆ ಮಾಡುವ ಕ್ರಮಗಳನ್ನು ಭಾರತ, ಚೀನಾ ಮತ್ತಿತರ ದೇಶಗಳೂ ಅಳವಡಿಸಿಕೊಳ್ಳಬೇಕಾಗುತ್ತದೆ. ಹಸಿರು ಮನೆಗಳ ಅನಿಲ ಪ್ರಮಾಣವನ್ನು ಕಡಿಮೆ ಮಾಡುವಂತೆ ಐರೋಪ್ಯ ದೇಶಗಳು ಭಾರತದ ಮೇಲೆ ಹೆಚ್ಚು ಒತ್ತಡ ಹೇರುವುದರಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಮತ್ತು ತಾಪಮಾನ ತಗ್ಗಿಸುವ ವಿಷಯದಲ್ಲಿ ಮುಂದುವರಿದ ರಾಷ್ಟ್ರಗಳು ಅನುಸರಿಸುವ ಕ್ರಮಗಳನ್ನೇ ಭಾರತವೂ ಕೈಗೊಳ್ಳಬೇಕು ಎಂದು ಒತ್ತಾಯಿಸಬಾರದು ಎಂಬ ನಿಲುವನ್ನು ಭಾರತ ಪ್ರತಿಪಾದಿಸುತ್ತ ಬಂದಿತ್ತು. ಆರ್ಥಿಕ ಅಭಿವೃದ್ಧಿಗಾಗಿ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಭಾರತದ ಪ್ರಯತ್ನವನ್ನು ಗೌರವಿಸುವುದಾಗಿ ಐರೋಪ್ಯ ರಾಷ್ಟ್ರಗಳು ಭರವಸೆ ನೀಡಿವೆ. 2020ರಿಂದ ಜಗತ್ತಿನ 194 ದೇಶಗಳು ಹೊಸ ಒಪ್ಪಂದದ ಅನ್ವಯ ಜಾಗತಿಕ ತಾಪಮಾನ ನಿಯಂತ್ರಣ ಕ್ರಮಗಳನ್ನು ಕೈಗೊಂಡರೆ ಪರಿಸ್ಥಿತಿಯಲ್ಲಿ ಸುಧಾರಣೆ ಆದೀತು. ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಹವಾಮಾನದಲ್ಲಿ ಏರುಪೇರುಗಳಾಗಿವೆ. ಅದು ಜಗತ್ತಿನಾದ್ಯಂತ ಜನರ ಅನುಭವಕ್ಕೆ ಬಂದಿದೆ. ಋತುಮಾನಗಳ ಏರುಪೇರಿನಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆ ಪ್ರಮಾಣ ಕುಸಿದಿದೆ. ಅತಿವೃಷ್ಟಿ, ಅನಾವೃಷ್ಟಿ, ಬಿರುಬಿಸಿಲು, ಅತಿಯಾದ ಚಳಿ ಇತ್ಯಾದಿ ಏರುಪೇರುಗಳಿಂದ ಪ್ರತಿಕೂಲ ಪರಿಣಾಮಗಳಾಗುತ್ತಿವೆ. ತಾಪಮಾನ ಹೆಚ್ಚಳದಿಂದ ಧ್ರುವ ಪ್ರದೇಶಗಳಲ್ಲಿ ಸಂಗ್ರಹವಾಗಿದ್ದ ನೀರ್ಗಲ್ಲು ಕರುಗುವ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಸಮುದ್ರ ತೀರದ ಭೂಮಿ ಮತ್ತು ದ್ವೀಪಗಳು ಮುಳುಗಡೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನು ತಡೆಯುವ ವಿಷಯದಲ್ಲಿ ಸರ್ಕಾರದ ಜತೆಯಲ್ಲಿ ಜನರೂ ಕೈಜೋಡಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಹೆಚ್ಚಿಸಲು ಹಸಿರು ಮನೆಗಳನ್ನು ನಿರ್ಮಿಸಿಕೊಳ್ಳುವ ಪ್ರಯತ್ನ ಭಾರತದಲ್ಲಿ ಹೆಚ್ಚಾಗಿದೆ. ಹಸಿರು ಮನೆಗಳ ಅನಿಲ ಸೋರಿಕೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸ ಸಾಮೂಹಿಕವಾಗಿ ಆಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.