ಔಪಚಾರಿಕತೆ ಬೇಡ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸುವ ಸಾಹಿತ್ಯ ಸಮ್ಮೇಳನಕ್ಕೆ ಉದಾರವಾಗಿ ಅನುದಾನ ನೀಡುತ್ತಿರುವುದು ರಾಜ್ಯ ಸರ್ಕಾರದ ಸಾಂಸ್ಕೃತಿಕ ಬದ್ಧತೆಯ ಪ್ರತೀಕವಾದರೂ ಸಮ್ಮೇಳನ ಅಂಗೀಕರಿಸುವ ನಿರ್ಣಯಗಳ ವಿಚಾರದಲ್ಲಿ ಉದಾಸೀನ ತಾಳುತ್ತಿರುವುದು ಸರಿಯಲ್ಲ. ನಾಡು ನುಡಿಗೆ ಸಂಬಂಧಪಟ್ಟಂತೆ ಪ್ರತಿ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಕಾಗದದ ಮೇಲೆ ಉಳಿಯುವ ದಾಖಲೆಗಳಷ್ಟೇ ಆಗುತ್ತಿರುವುದು ಇದುವರೆಗಿನ ಅನುಭವ. ಪ್ರತಿ ಸಮ್ಮೇಳನದಲ್ಲಿಯೂ ಹಲವು ಹತ್ತು ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಅವು ಅನುಷ್ಠಾನಗೊಳ್ಳುವುದೇ ಇಲ್ಲ. ನಿರ್ಣಯಗಳ ಬಗ್ಗೆ ರಾಜ್ಯ ಸರ್ಕಾರ ತೋರುತ್ತಿರುವ ನಿರಾಸಕ್ತಿಯನ್ನು ಗಮನಿಸಿಯೇ ಮೂಡುಬಿದಿರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹಿಂದೆ ಅಂಗೀಕರಿಸಿದ ಎಲ್ಲ ನಿರ್ಣಯಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುವ ಒಂದೇ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಅಂದಂದಿನ ಬೆಳವಣಿಗೆಗಳಿಗೆ ನಾಡಿನ ಸಾಂಸ್ಕೃತಿಕ ಜಗತ್ತು ತೋರಿಸುವ ಪ್ರತಿಕ್ರಿಯೆ ರೂಪದಲ್ಲಿ, ಈ ನಿರ್ಣಯಗಳನ್ನು ಸಾಹಿತ್ಯ ಸಮ್ಮೇಳನದ ಪ್ರಮುಖ ಅಂಗವಾದ ಬಹಿರಂಗ ವೇದಿಕೆಯಲ್ಲಿ ಮಂಡಿಸಿ ಚರ್ಚಿಸಿ ಅಂಗೀಕರಿಸಲಾಗುತ್ತದೆ. ಅಷ್ಟರಮಟ್ಟಿಗೆ ನಿರ್ಣಯಗಳಿಗೆ ಪ್ರಜಾಸತ್ತಾತ್ಮಕ ಮನ್ನಣೆ ಇರುತ್ತದೆ. ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಜಾರಿಗೊಳಿಸುವುದರ ಉಸ್ತುವಾರಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದಾದರೂ ನಿರ್ಣಯಗಳ ಅನುಷ್ಠಾನದ ಖಾತರಿ ಇರುವುದಿಲ್ಲ. ಇದಕ್ಕೆ ಸ್ಪಷ್ಟವಾದ ಕಾರಣ ರಾಜ್ಯ ಸರ್ಕಾರಕ್ಕೆ ಕನ್ನಡಕ್ಕೆ ಸಂಬಂಧಿಸಿದ ಬದ್ಧತೆಯ ಕೊರತೆ. ಕನ್ನಡ ಸಾಹಿತ್ಯ ಪರಿಷತ್ತು ನೊಂದಾಯಿತ ಸಂಸ್ಥೆ. ಪ್ರಜಾಸತ್ತಾತ್ಮಕ ವಿಧಾನಗಳಿಂದಲೇ ಅದರ ಪದಾಧಿಕಾರಿಗಳ ಆಯ್ಕೆಯಾಗುವಂತೆ ಸರ್ಕಾರ ನಿಗಾ ವಹಿಸುತ್ತದೆ. ಸಮ್ಮೇಳನಗಳನ್ನು ನಡೆಸುವುದಕ್ಕೆ ಜನತೆಯ ತೆರಿಗೆಯ ಹಣವನ್ನೇ ಸರ್ಕಾರ ನೀಡುತ್ತದೆ. ನಾಡು ನುಡಿಗೆ ಸಂಬಂಧ ಪಟ್ಟಂತೆ ನಾಡಿನ ಸಾಂಸ್ಕೃತಿಕ ಲೋಕದ ಗಣ್ಯರು ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ವ್ಯಕ್ತಪಡಿಸುವ ಭಾವನೆಗಳನ್ನಾಗಲೀ, ಅಂಗೀಕರಿಸುವ ನಿರ್ಣಯಗಳನ್ನಾಗಲೀ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಅದನ್ನು ನಾಡಿನ ಸಾಂಸ್ಕೃತಿಕ ಮನಃಸ್ಥಿತಿಗೆ ಎಸಗುವ ಅಪಚಾರವೆಂದೇ ಪರಿಗಣಿಸಬೇಕಾಗುತ್ತದೆ. ಪ್ರಜಾಸತ್ತಾತ್ಮಕ ವಿಧಾನದಿಂದ ಆಯ್ಕೆಯಾಗುವ ಪರಿಷತ್ ಅಧ್ಯಕ್ಷರು ಮತ್ತು ತಮ್ಮ ಸಾಹಿತ್ಯ ಕೃಷಿ ಹಾಗೂ ಪರಿಷತ್ತಿನ ಚುನಾಯಿತ ಪದಾಧಿಕಾರಿಗಳ ಬಹುಮತದ ಮೇರೆಗೆ ಆಯ್ಕೆಯಾಗುವ ಸಮ್ಮೇಳನಾಧ್ಯಕ್ಷರ ಸೇವೆಯನ್ನು ರಾಜ್ಯ ಸರ್ಕಾರ ಗೌರವಪೂರ್ವಕವಾಗಿ ಬಳಸಿಕೊಳ್ಳುವುದು ಸಾಂಸ್ಕೃತಿಕ ಹೊಣೆಗಾರಿಕೆಯಾಗಿದೆ. ಸಮ್ಮೇಳನದ ಅಧ್ಯಕ್ಷಸ್ಥಾನದ ಗೌರವ ಪಡೆದವರನ್ನು ಮುಂದಿನ ಸಮ್ಮೇಳನದವರೆಗೆ ರಾಜ್ಯದ ಅತಿಥಿಯಂತೆ ನೋಡಿಕೊಳ್ಳುವ ಪದ್ಧತಿಯನ್ನು ಮಂಡ್ಯ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಆರಂಭಿಸಲಾಗಿತ್ತು. ಸಮ್ಮೇಳನಾಧ್ಯಕ್ಷರಾಗಿದ್ದ ಚದುರಂಗ ಅವರ ಪ್ರವಾಸಕ್ಕೆ ವಾಹನ ಒದಗಿಸುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿತ್ತು. ಆ ಪದ್ಧತಿ ಮುಂದುವರಿಯಲಿಲ್ಲ. ಸಮ್ಮೇಳನಾಧ್ಯಕ್ಷರ ವಿದ್ವತ್ತು ಮತ್ತು ಅನುಭವವನ್ನು ಸರ್ಕಾರ ಜನತೆಯ ಹಿತಕ್ಕಾಗಿ ಬಳಸಿಕೊಳ್ಳುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕೆಲವು ಅವಕಾಶಗಳನ್ನು ನೀಡಬೇಕೆಂದು ಗಂಗಾವತಿ ಸಮ್ಮೇಳನದ ಅಧ್ಯಕ್ಷ ಸಿಪಿಕೆ ಅವರು ಸಲಹೆ ಮಾಡಿದ್ದಾರೆ. ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಸರ್ಕಾರದಲ್ಲಿ ಕೈಗೊಳ್ಳುವ ನಡವಳಿಕೆಗಳ (ಪ್ರೊಸೀಡಿಂಗ್ಸ್) ಸ್ಥಾನವನ್ನೂ, ಸಮ್ಮೇಳನಾಧ್ಯಕ್ಷರಿಗೆ ಮುಂದಿನ ಸಮ್ಮೇಳನದವರೆಗೆ ಗೌರವಯುತ ಸ್ಥಾನಮಾನವನ್ನೂ ನೀಡುವಂಥ ಸಾಂಸ್ಕೃತಿಕ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು. ಆಗ ಮಾತ್ರ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವುದು ಸರ್ಕಾರದ ಕರ್ತವ್ಯವಾಗುತ್ತದೆ. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳಿಗೂ ಬೆಲೆ ಬರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.