ಅರ್ಥವ್ಯವಸ್ಥೆಯ ಬೇಗುದಿ ದೇಶದ ಅರ್ಥ ವ್ಯವಸ್ಥೆಯ ಆರೋಗ್ಯ ಅಷ್ಟೇನೂ ಸರಿ ಇಲ್ಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಅಕ್ಟೋಬರ್ ತಿಂಗಳ ಕೈಗಾರಿಕಾ ಉತ್ಪಾದನೆಯು ಶೇ 5.1ರಷ್ಟು ಕುಸಿದಿದ್ದರೆ, ಡಾಲರ್ ಎದುರು ರೂಪಾಯಿಯ ವಿನಿಮಯ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ (52.84) ಇಳಿದಿದೆ. ಇನ್ನೊಂದೆಡೆ ಬಂಡವಾಳ ಮಾರುಕಟ್ಟೆಯಲ್ಲಿಯೂ (ಷೇರುಪೇಟೆ) ನಿರುತ್ಸಾಹ ಮನೆ ಮಾಡಿದೆ. `ಆರ್ಥಿಕತೆಯ ಆರೋಗ್ಯ~ ಸರಿ ಇಲ್ಲದಿರುವುದು ಆತಂಕ ಮೂಡಿಸಿದೆ. ಕೈಗಾರಿಕಾ ಉತ್ಪಾದನೆಯು ಕಳೆದ 34 ತಿಂಗಳ್ಲ್ಲಲಿ ಇದೇ ಮೊದಲ ಬಾರಿಗೆ ತೀವ್ರ ಕುಸಿತ ದಾಖಲಿಸಿರುವುದಕ್ಕೆ, ಗ್ರಾಹಕರ ಬೇಡಿಕೆ ಮತ್ತು ಕಾರ್ಪೊರೇಟ್ ಹೂಡಿಕೆ ಕಡಿಮೆಯಾಗಿರುವುದೇ ಕಾರಣ. ಸರಕುಗಳ ತಯಾರಿಕೆಯು ಬಿಕ್ಕಟ್ಟಿನ ಹಂತಕ್ಕೆ ತಲುಪಿದೆ. ಭಾರಿ ಯಂತ್ರೋಪಕರಣಗಳ ಉತ್ಪಾದನೆಯು ಶೇ 25.5ರಷ್ಟಕ್ಕೆ ಕುಸಿದಿರುವುದು, ಉದ್ದಿಮೆ ವಲಯದಲ್ಲಿ ಬಂಡವಾಳ ಹೂಡಿಕೆ ಮತ್ತು ವಿಸ್ತರಣೆ ಸ್ಥಗಿತಗೊಳ್ಳುವ ಹಂತ ತಲುಪಿರುವುದರ ಸೂಚಕ. ಉದ್ದಿಮೆದಾರರು ವಹಿವಾಟು ವಿಸ್ತರಣೆ ಮತ್ತು ಉತ್ಪಾದನಾ ಘಟಕಗಳ ಸಾಮರ್ಥ್ಯ ಹೆಚ್ಚಳಕ್ಕೆ ಮನಸ್ಸು ಮಾಡುತ್ತಿಲ್ಲ. ಇದು ಅವರಲ್ಲಿ ಆತ್ಮವಿಶ್ವಾಸ ಕುಸಿದಿರುವುದನ್ನೂ ಸೂಚಿಸುತ್ತದೆ. ಬ್ಯಾಂಕ್ ಬಡ್ಡಿ ದರ ಹೆಚ್ಚಳ ಮತ್ತು ಜಾಗತಿಕ ಹಣಕಾಸು ಪರಿಸ್ಥಿತಿಯ ಅನಿಶ್ಚಿತತೆ ಹಿನ್ನೆಲೆಯಲ್ಲಿ, ಬಂಡವಾಳ ಹೂಡಿಕೆ ನಿಧಾನಗೊಂಡಿರುವುದು ನಿಜ. ಆದರೆ, ಈ ನಿರಾಶಾದಾಯಕ ಬೆಳವಣಿಗೆಗಳಿಗೆ ಐರೋಪ್ಯ ಒಕ್ಕೂಟದ ಸಾಲದ ಬಿಕ್ಕಟ್ಟು, ಅಮೆರಿಕದ ಆರ್ಥಿಕ ಚಟುವಟಿಕೆಗಳ ಜಡತ್ವವೇ ಕಾರಣ ಎಂದು ದೂರಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ಸರಿಯಲ್ಲ. ಈ ಪರಿಸ್ಥಿತಿ ಉದ್ಭವಗೊಳ್ಳಲು ದೇಶಿ ವಿದ್ಯಮಾನಗಳ ಪಾತ್ರವೂ ಸಾಕಷ್ಟಿದೆ. ಹಣದುಬ್ಬರಕ್ಕೆ ಮೂಗುದಾರ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಸರಿಸುತ್ತಿರುವ ಬಡ್ಡಿ ದರ ಹೆಚ್ಚಳ ಕ್ರಮಗಳು, ಬಂಡವಾಳ ಹೂಡಿಕೆ ಮತ್ತು ಉತ್ಪಾದನೆ ಹೆಚ್ಚಿಸಲು ಉದ್ದಿಮೆದಾರರು ಹಿಂದೇಟು ಹಾಕುವಂತೆ ಮಾಡಿವೆ. 2010ರ ಮಾರ್ಚ್ ತಿಂಗಳಿನಿಂದೀಚೆಗೆ ಆರ್‌ಬಿಐ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 3.75ರಷ್ಟು ಹೆಚ್ಚಿಸಿರುವುದು ಕೈಗಾರಿಕಾ ರಂಗಕ್ಕೆ ಪ್ರತಿಕೂಲವಾಗಿರುವುದು ಸಾಬೀತಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವೂ ಶೇ 7.5ರಷ್ಟು ಇರಲಿದೆ ಎಂದು ಕೇಂದ್ರ ಸರ್ಕಾರ ಮೊನ್ನೆಯಷ್ಟೇ ತನ್ನ ಅಂದಾಜನ್ನು ಪರಿಷ್ಕರಿಸಿದೆ. ಕೈಗಾರಿಕಾ ಉತ್ಪಾದನೆಯಲ್ಲಿನ ಹಿನ್ನಡೆಯ ಕಾರಣಕ್ಕೆ ಈ ಹೊಸ ಗುರಿ ತಲುಪುವುದೂ ಈಗ ಅನುಮಾನಾಸ್ಪದ. ತಯಾರಿಕೆ, ಗಣಿಗಾರಿಕೆ ಮತ್ತು ವಿದ್ಯುತ್ ಶಕ್ತಿ ಉತ್ಪಾದನೆ ಒಳಗೊಂಡ ಕೈಗಾರಿಕಾ ವಲಯವು ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 24ರಷ್ಟು ಪಾಲು ಹೊಂದಿರುವುದರಿಂದ ಈ ಆತಂಕವನ್ನು ಗಂಭೀರವಾಗಿಯೇ ಪರಿಗಣಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಇಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಈಗ ಒತ್ತಡ ಹೆಚ್ಚಿದೆ. ಸರ್ಕಾರ ತಡಮಾಡದೇ ಎಚ್ಚೆತ್ತುಕೊಂಡು ಹಳಿ ತಪ್ಪುತ್ತಿರುವ ಅರ್ಥವ್ಯವಸ್ಥೆಯನ್ನು ಸರಿ ದಾರಿಗೆ ತರಲು ಅಗತ್ಯವಾದ ಆರ್ಥಿಕ ಉತ್ತೇಜನದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.