ಕೇಂದ್ರ ಮಧ್ಯೆ ಪ್ರವೇಶಿಸಲಿ ಸಂಬಂಧಗಳು ಕೆಟ್ಟುಹೋದಾಗ ನೀರು ಕೂಡಾ ದ್ವೇಷ ಹುಟ್ಟಿಸುವ ಬೆಂಕಿಯಾಗುತ್ತದೆ. ಮುಲ್ಲಪೆರಿಯಾರ್ ಅಣೆಕಟ್ಟು ವಿವಾದದಿಂದಾಗಿ ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವಿನ ಸಂಬಂಧ ಕದಡಿಹೋಗಿ ಇಂತಹ ದ್ವೇಷದ ವಾತಾವರಣ ಸೃಷ್ಟಿಯಾಗಿದೆ. 116 ವರ್ಷಗಳ ಹಿಂದೆ, ಎರಡೂ ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧವಿದ್ದ ದಿನಗಳಲ್ಲಿ ತಮಿಳುನಾಡಿಗೆ ನೀರು ಪೂರೈಸಲು ಕೇರಳದ ಗಡಿಯಲ್ಲಿ ನಿರ್ಮಾಣಗೊಂಡ ಅಣೆಕಟ್ಟು ಇದು. 1970ರಲ್ಲಿ ಎಂ.ಜಿ.ರಾಮಚಂದ್ರನ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದಾಗ ಎರಡೂ ರಾಜ್ಯಗಳ ನಡುವಿನ 1886ರ ಹಳೆಯ ಒಪ್ಪಂದವನ್ನು ನವೀಕರಿಸಿದ್ದರು. ಆಗಲೂ ಅದು ವಿವಾದಕ್ಕೆಡೆ ಮಾಡಿರಲಿಲ್ಲ. ಆದರೆ ಕೇರಳ ರಾಜ್ಯ, ಈಗ, 116 ವರ್ಷಗಳಷ್ಟು ಹಳೆಯದಾದ ಅಣೆಕಟ್ಟಿನ ಸುಭದ್ರತೆಯ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. `ಹಳೆಯ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ಅಣೆಕಟ್ಟು ಶಿಥಿಲಗೊಂಡಿರುವುದು ಮಾತ್ರವಲ್ಲ, ಭೂಕಂಪ ಸಂಭವಿಸುವ ಪ್ರದೇಶದಲ್ಲಿರುವುದರಿಂದ ಅಪಾಯಕಾರಿಯಾಗಿದೆ. ಅಕಸ್ಮಾತ್ ಅಣೆಕಟ್ಟು ಒಡೆದುಹೋದರೆ ನಮ್ಮ ರಾಜ್ಯದ ಲಕ್ಷಾಂತರ ಜನ ಸಾವು-ನೋವಿಗೀಡಾಗಲಿದ್ದಾರೆ. ಆದ್ದರಿಂದ ಅದನ್ನು ಪುನರ್‌ನಿರ್ಮಿಸಬೇಕು~ ಎನ್ನುವುದು ಕೇರಳದ ಬೇಡಿಕೆ. ಇತ್ತೀಚೆಗೆ ಆ ಪ್ರದೇಶದಲ್ಲಿ ಹಲವಾರು ಬಾರಿ ಭೂಕಂಪ ಸಂಭವಿಸಿರುವುದನ್ನು ತಮ್ಮ ಆತಂಕದ ಸಮರ್ಥನೆಗೆ ಕೇರಳ ಉಲ್ಲೇಖಿಸುತ್ತಾ ಬಂದಿದೆ. ಸುಪ್ರೀಂ ಕೋರ್ಟ್ ಕೂಡಾ ವಿವಾದದ ವಿಚಾರಣೆ ನಡೆಸುತ್ತಿದೆ. ಕೇಂದ್ರ ಜಲ ಆಯೋಗ ಅಣೆಕಟ್ಟಿನ ಅಧ್ಯಯನ ನಡೆಸಿ ಅದರ ಎತ್ತರವನ್ನು ಕಡಿಮೆಮಾಡಿ, ಬಲವರ್ಧನೆ ಮಾಡುವಂತೆ ಸೂಚಿಸಿದೆ. ಮೇಲ್ನೋಟಕ್ಕೆ ಅಣೆಕಟ್ಟಿನ ಸುಭದ್ರತೆಯೊಂದೇ ವಿವಾದದ ಕೇಂದ್ರವಾಗಿರುವಂತೆ ಕಂಡರೂ ಅದರ ಹಿಂದೆ ನೀರು ಬಳಕೆಯ ತಕರಾರು ಕೂಡಾ ಇರುವುದು ಸ್ಪಷ್ಟ. ಮುಲ್ಲಪೆರಿಯಾರ್ ಅಣೆಕಟ್ಟು ಕೇರಳದ ಗಡಿಯಲ್ಲಿದ್ದರೂ ಅದರ ನೀರನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಿರುವುದು ತಮಿಳುನಾಡು. ಆ ರಾಜ್ಯದ 2.17 ಲಕ್ಷ ಎಕರೆ ಭೂಮಿಗೆ ಈ ಅಣೆಕಟ್ಟಿನ ನೀರು ಹರಿಯುತ್ತಿದೆ. `ಅಣೆಕಟ್ಟನ್ನು ಪುನರ್‌ನಿರ್ಮಾಣ ಮಾಡಿದರೂ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ~ ಎಂದು ಕೇರಳ ಸರ್ಕಾರ ಆಶ್ವಾಸನೆ ನೀಡಿದರೂ ತಮಿಳುನಾಡು ಅದನ್ನು ನಂಬದ ಸ್ಥಿತಿಯಲ್ಲಿದೆ. ಹೊಸ ಅಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹಿಸಿ ಅದನ್ನು ತಮ್ಮ ರಾಜ್ಯಕ್ಕೂ ಬಳಸಿಕೊಳ್ಳುವ ಗುಪ್ತಉದ್ದೇಶ ಕೇರಳ ಸರ್ಕಾರಕ್ಕೂ ಇದ್ದಂತಿದೆ. ಪರಸ್ಪರ ಅಪನಂಬಿಕೆಯ ಈ ಸ್ಥಿತಿಯೇ ವಿವಾದ ಉಲ್ಬಣಗೊಳ್ಳಲು ಮುಖ್ಯ ಕಾರಣ. ಯುಪಿಎ ಸರ್ಕಾರ ಕೂಡಾ ಮಿತ್ರಪಕ್ಷವಾದ ಡಿಎಂಕೆಯ ಒತ್ತಡಕ್ಕೆ ಸಿಲುಕಿದಂತೆ ವರ್ತಿಸುತ್ತಿದೆ. ಹಾಗಾಗಬಾರದು, ಕೇಂದ್ರ ಸರ್ಕಾರ ನಿಷ್ಪಕ್ಷಪಾತತನದಿಂದ ವಿವಾದವನ್ನು ಬಗೆಹರಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೆ ತಮಿಳುನಾಡು ಪಡೆಯುತ್ತಾ ಬಂದ ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕು, ಇದೇ ವೇಳೆ ಕೇರಳ ರಾಜ್ಯ ವ್ಯಕ್ತಪಡಿಸುತ್ತಿರುವ ಅಣೆಕಟ್ಟಿನ ಸುಭದ್ರತೆಯ ಬಗೆಗಿನ ಆತಂಕವನ್ನು ಕೂಡಾ ದೂರಮಾಡಬೇಕು. ಇದಕ್ಕಾಗಿ ಹೊಸದಾಗಿ ಅಣೆಕಟ್ಟನ್ನು ನಿರ್ಮಾಣ ಮಾಡಬೇಕೇ ಇಲ್ಲವೇ ಈಗ ಇರುವ ಅಣೆಕಟ್ಟನ್ನು ದುರಸ್ತಿಗೊಳಿಸಿ ಅದರ ಬಲವರ್ಧನೆ ಮಾಡಬೇಕೇ ಎನ್ನುವುದನ್ನು ತಜ್ಞರಿಂದ ಅಧ್ಯಯನ ನಡೆಸಿ ಕೇಂದ್ರ ನಿರ್ಧಾರ ಕೈಗೊಳ್ಳಬೇಕು. ಜನಹಿತಕ್ಕೆ ಸಂಬಂಧಿಸಿದ ಇಂತಹ ಸೂಕ್ಷ್ಮ ವಿಷಯಗಳಲ್ಲಿ ರಾಜಕಾರಣ ಸಲ್ಲದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.