ಖರ್ಚು ಕಡಿಮೆ ಮಾಡಿ ರಾಜ್ಯದ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹಣಕಾಸು ಇಲಾಖೆಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಯವರು ಮಂಗಳವಾರ ವಿಧಾನ ಸಭೆಯಲ್ಲಿ ಮಂಡಿಸಿದ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ರಾಜ್ಯದ ಆರ್ಥಿಕ ಸ್ಥಿತಿಗೆ ಕನ್ನಡಿ ಹಿಡಿದಿದೆ. ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಶೇ.21ರಷ್ಟು ತೆರಿಗೆ ಹೆಚ್ಚುವರಿಯಾಗಿ ಸಂಗ್ರಹವಾಗಿದ್ದರೂ ಸರ್ಕಾರಕ್ಕೆ ಬರಬೇಕಾದ ಆದಾಯ ಕಡಿಮೆಯಾಗಿದೆ. ಗಣಿಗಾರಿಕೆ ನಿಷೇಧದಿಂದ ಆ ಬಾಬಿನಿಂದ ಆದಾಯ ಬರುತ್ತಿಲ್ಲ. ಭೂಮಿ ಮಾರಾಟದಿಂದ ಬರುತ್ತಿದ್ದ ಆದಾಯವೂ ಕುಸಿದಿದೆ. ಮಿತವ್ಯಯ ಕ್ರಮಗಳನ್ನು ತೆಗೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುವಂತೆ ವಿತ್ತೀಯ ನಿರ್ವಹಣಾ ಸಮಿತಿ ಸಲಹೆ ಮಾಡಿದೆ. ಆರ್ಥಿಕ ಕೊರತೆಯನ್ನು ತುಂಬಿಕೊಳ್ಳಲು ಅನುತ್ಪಾದಕ ಹಾಗೂ ಯೋಜನೇತರ ವೆಚ್ಚಗಳಿಗೆ ಕಡಿವಾಣ ಹಾಕುವಂತಹ ಕ್ರಮಗಳಿಗೆ ಸರ್ಕಾರ ಮುಂದಾಗಬೇಕಿತ್ತು. ಆದರೆ ಹಣಕಾಸಿನ ನಿರ್ವಹಣೆಯ ಅನುಭವ ಇಲ್ಲದ ಸದಾನಂದಗೌಡರು ಸರ್ಕಾರಿ ನೇಮಕಾತಿಗಳಿಗೆ ಕಡಿವಾಣ ಹಾಕಲು ಹೊರಟಿದ್ದಾರೆ! ತುರ್ತು ಸೇವೆ ಒದಗಿಸುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳ ನೇಮಕಾತಿಗಳಿಗೆ ಕಡಿವಾಣ ಹಾಕಲು ಹೊರಟಿದ್ದಾರೆ. ಇದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆ ಆದೀತೇ? ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಅನುತ್ಪಾದಕ ಚಟುವಟಿಕೆಗಳಿಗೆ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದೆ. ಸಚಿವರು, ಅಧಿಕಾರಿಗಳು, ಸರ್ಕಾರೇತರ ಸಿಬ್ಬಂದಿಯ ಪ್ರವಾಸ, ಭತ್ಯೆ ಇತ್ಯಾದಿಗಳಿಗೆ ಮತ್ತು ಹಲವಾರು ಬಗೆಯ ಉತ್ಸವ, ಸಮ್ಮೇಳನಗಳಿಗೆ ಅಪಾರ ಹಣ ಖರ್ಚು ಮಾಡುತ್ತಿದೆ. ಹಣಕಾಸಿನ ಕೊರತೆ ಇದ್ದಾಗಲೂ ಇಂತಹ ಖರ್ಚು- ವೆಚ್ಚಗಳ ಅಗತ್ಯವಿದೆಯೇ? ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಖಾಲಿಯಾದ ಹುದ್ದೆಗಳಿಗೆ ನೇಮಕಾತಿ ಆಗಿಲ್ಲ. ಸಿಬ್ಬಂದಿ ಕೊರತೆಯಿಂದ ಅನೇಕ ಇಲಾಖೆಗಳು ಯೋಜನೆ, ಕಾರ್ಯಕ್ರಮಗಳಿಗೆ ಸರ್ಕಾರ ನೀಡಿದ ಹಣವನ್ನು ವೆಚ್ಚ ಮಾಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರದ ಅನುದಾನವನ್ನೂ ಬಳಸಿಕೊಳ್ಳುತ್ತಿಲ್ಲ. ನೇಮಕಾತಿಗಳಿಗೆ ಕಡಿವಾಣ ಹಾಕಿದರೆ ಒಟ್ಟಾರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎನ್ನುವುದನ್ನು ಸರ್ಕಾರ ಮರೆತಿದೆ. ಹಣಕಾಸು ವರ್ಷದ ಎರಡನೇ ಅವಧಿಯೇ ಮುಖ್ಯವಾದದ್ದು. ಎಲ್ಲ ಇಲಾಖೆಗಳಿಗೆ ಹೆಚ್ಚು ಹಣ ಬಿಡುಗಡೆಯಾಗುವುದು ಮತ್ತು ವೆಚ್ಚವಾಗುವುದು ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಎನ್ನುವುದನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ, ಈ ವರ್ಷ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬರಗಾಲವಿದೆ. ಜನರಿಗೆ ಉದ್ಯೋಗ, ಕುಡಿಯುವ ನೀರು ಇತ್ಯಾದಿಗಳನ್ನು ಪೂರೈಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅನುತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕು. ಮಿತವ್ಯಯ ಕ್ರಮಗಳು ಮುಖ್ಯಮಂತ್ರಿಯವರ ಕಚೇರಿಯಿಂದ ಆರಂಭವಾಗಬೇಕು. ಮುಕ್ತ ಮಾರುಕಟ್ಟೆಯ ಮೂಲಕ 10,827 ಕೋಟಿ ರೂ ಸಾಲ ಮಾಡುವ ಸರ್ಕಾರದ ನಿರ್ಧಾರ ಸಮರ್ಥನೀಯವಲ್ಲ. ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. `ಸಾಲ ಮಾಡಿಯಾದರೂ ತುಪ್ಪ ತಿನ್ನುವ~ ಧೋರಣೆಯನ್ನು ಕೈಬಿಟ್ಟು ಕಟ್ಟುನಿಟ್ಟಿನ ಮಿತವ್ಯಯ ಕ್ರಮಗಳನ್ನು ಅಳವಡಿಸಿಕೊಂಡು ಪರಿಸ್ಥಿತಿ ನಿಭಾಯಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.