ಭಾರತಕ್ಕೆ ಆಸ್ಕರ್ ಹೆಮ್ಮೆ ಈ ಬಾರಿಯ ಆಸ್ಕರ್ ಪ್ರಶಸ್ತಿಗಳಲ್ಲಿ ಭಾರತದ ಪಾಲು ಇರುವುದು ವಿಶೇಷ. ಭಾರತದಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲಾದ ಹಾಗೂ ಭಾರತೀಯ ತಾರಾಗಣವಿರುವ `ಲೈಫ್ ಆಫ್ ಪೈ' ನಾಲ್ಕು ವಿವಿಧ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಘಟಾನುಘಟಿ ನಿರ್ದೇಶಕರುಗಳಾದ ಸ್ಟೀವನ್ ಸ್ಪೀಲ್‌ಬರ್ಗ್ ಹಾಗೂ ಮೈಕೆಲ್ ಹನೆಕೆಯಂತಹವರನ್ನು ಹಿಮ್ಮೆಟ್ಟಿಸಿ ತೈವಾನ್ ಮೂಲದ ಹೆಲ್ಮರ್ ಆಂಗ್ ಲೀ ಅವರು `ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲೀ ಅವರು ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಧನ್ಯವಾದಗಳನ್ನರ್ಪಿಸುತ್ತಾ `ನಮಸ್ತೆ' ಎಂದು ಹೇಳಿ ಭಾರತೀಯತೆಯ ಭಾವವನ್ನು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಸಂಜೆಯಲ್ಲಿ ತುಂಬಿದ್ದೂ ವಿಶೇಷವಾಗಿದೆ. ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಬದುಕಿನ ಕಡೆಯ ಕೆಲವು ತಿಂಗಳುಗಳನ್ನು ಚಿತ್ರಿಸುವ ಐತಿಹಾಸಿಕ ಸಿನಿಮಾ `ಲಿಂಕನ್' ಚಿತ್ರಕ್ಕೂ ಭಾರತದ ಕೊಂಡಿ ಇದೆ. ಭಾರತೀಯ ಉದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಎಂಟರ್‌ಟೇನ್‌ಮೆಂಟ್ ಅಂಡ್ ಡ್ರೀಮ್ ವರ್ಕ್ಸ್, ಈ ಚಿತ್ರದ ಸಹನಿರ್ಮಾಪಕರು. ಯಾವುದೇ ಪ್ರಶಸ್ತಿಯೂ ಗುಣಾತ್ಮಕವಾಗಿ ಪರಿಪೂರ್ಣವಲ್ಲ ಸರಿ. ಹೀಗಿದ್ದೂ ಏಷ್ಯಾ ಸಂವೇದನೆ ಆಸ್ಕರ್ ಅಂಗಳದಲ್ಲಿ ಅರಳುತ್ತಿರುವುದು ಸಂತಸದಾಯಕ ಸಂಗತಿ. ಆದರೆ ಇದರಲ್ಲಿ ಜಾಗತಿಕ ವ್ಯವಹಾರ ಚಾಣಾಕ್ಷತನವೂ ಇರಬಹುದೆ ಎಂಬಂತಹ ಪ್ರಜ್ಞೆಯನ್ನು ಹೊಂದುವ ಆಲೋಚನಾಮುಕ್ತತೆಯೂ ಇರುವುದು ಅವಶ್ಯ. ಕೆನಡಾದ ಲೇಖಕಿ ಯ್ಯಾನ್ ಮಾರ್ಟೆಲ್ ಅವರ ಕಾದಂಬರಿಯನ್ನು `ಲೈಫ್ ಆಪ್ ಪೈ' ಚಿತ್ರ ಆಧರಿಸಿದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡ ಇನ್ನೂ ಮೂರು ಚಿತ್ರಗಳೂ ಸಾಹಿತ್ಯ ಕೃತಿಗಳನ್ನಾಧರಿಸಿರುವುದು ಮತ್ತೊಂದು ವಿಶೇಷ. `ಲೆಸ್ ಮಿಸರೆಬಲ್ಸ್', ವಿಕ್ಟರ್ ಹ್ಯೂಗೊನ ಫ್ರೆಂಚ್ ಕಾದಂಬರಿ ಆಧರಿಸಿದೆ. `ಸಿಲ್ವರ್ ಲೈನಿಂಗ್ ಪ್ಲೇ ಬುಕ್', ಮ್ಯಾಥ್ಯೂ ಕ್ವಿಕ್ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಚಿತ್ರ. `ಬೀಸ್ಟ್ಸ್ ಆಫ್ ದಿ ಸದರ್ನ್ ವರ್ಲ್ಡ್' ನಾಟಕವನ್ನಾಧರಿಸಿದ ಚಿತ್ರ. ಮನರಂಜನೆ ಎನ್ನುವುದು ಬರೀ ಕಾಲ ಕಳೆಯುವ ಸಾಧನವಷ್ಟೇ ಅಲ್ಲ. ನಾವು ಬದುಕುವ ಸಮಾಜ, ಇತಿಹಾಸ ಹಾಗೂ ಪರಂಪರೆಗಳ ಪ್ರಜ್ಞೆಯನ್ನೂ ಕಟ್ಟಿಕೊಡುತ್ತಾ ಅಭಿರುಚಿಯನ್ನು ಬೆಳೆಸುವಂತಿರಬೇಕು. ಇದಕ್ಕೆ ಪೂರಕವೆನಿಸುವಂತೆ ಈ ಬಾರಿ ಆಸ್ಕರ್ ಪ್ರಶಸ್ತಿ ಗೆದ್ದ ಅನೇಕ ಚಿತ್ರಗಳು ಅಮೆರಿಕದ ಇತಿಹಾಸವನ್ನು ವಿವಿಧ ಆಯಾಮಗಳಲ್ಲಿ ಅಭಿವ್ಯಕ್ತಿಸಿವೆ ಎಂಬುದೂ ವಿಶಿಷ್ಟವೇ. ಅತ್ಯುತ್ತಮ ಕಥಾವಸ್ತುವಿಗಾಗಿ ಪ್ರಶಸ್ತಿ ಗೆದ್ದುಕೊಂಡ `ಡಿಜ್ಯಾಂಗೊ ಅನ್‌ಚೈನ್ಡ್' ಚಿತ್ರ ಅಮೆರಿಕದ ಅಂತರ್ಯುದ್ಧದ ಹಿಂದಿನ ಕಾಲದ ಕಥೆ ಹೇಳುತ್ತದೆ. `ಝೀರೊ ಡಾರ್ಕ್ ಥರ್ಟಿ'ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ನ ಬೇಟೆ ಹಾಗೂ ಹತ್ಯೆಯ ಕಾರ್ಯಾಚರಣೆಯ ಕಥೆ ನಿರೂಪಿಸುತ್ತದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ `ಆರ್ಗೊ' 1979ರಲ್ಲಿ ನಡೆದಿದ್ದ ಇರಾನ್ ಒತ್ತೆಯಾಳು ಬಿಕ್ಕಟ್ಟು ಪ್ರಕರಣವನ್ನಾಧರಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.