ಎಂಇಎಸ್ ಪಾಠ ಕಲಿಯಲಿ ಬೆಳಗಾವಿಯ ಎಂಇಎಸ್ ಮುಖಂಡರು ಮತ್ತು ಮರಾಠಿ ಭಾಷಿಕರಿಗೆ ಮಹಾರಾಷ್ಟ್ರದ ಧುರೀಣ ರಾಜ್ ಠಾಕ್ರೆ ಹೇಳಿರುವ ಬುದ್ಧಿ ಮಾತುಗಳು ಬೆಳಗಾವಿ -ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ ಎಂಬುದರ ಸಂಕೇತ. ಮುಂಬೈಯಲ್ಲಿ ನೆಲೆಸಿರುವ ರಾಜ್ ಠಾಕ್ರೆ ಅವರಿಗೆ ಬೆಳಗಾವಿಯ ಪರಿಸ್ಥಿತಿ ಚೆನ್ನಾಗಿ ಅರ್ಥವಾದಂತಿದೆ. `ಹಿಂಸಾಚಾರದ ಮೂಲಕ ಬೆಳಗಾವಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ~ ಎಂಬ ಧೋರಣೆಯನ್ನು ಬಿಟ್ಟು, ಕನ್ನಡ ಕಲಿತು ಕರ್ನಾಟಕದಲ್ಲಿಯೇ ಸೌಹಾರ್ದದಿಂದ ಬದುಕುವಂತೆ ಅವರು ಮರಾಠಿ ಭಾಷಿಕರಿಗೆ ಕಿವಿಮಾತು ಹೇಳಿದ್ದಾರೆ. ರಾಜ್ ಠಾಕ್ರೆ ಅವರ ಮಾತುಗಳಲ್ಲಿರುವ ಕಳಕಳಿಯನ್ನು ಬೆಳಗಾವಿಯ ಎಂಇಎಸ್ ಧುರೀಣರು ಮತ್ತು ಮರಾಠಿ ಭಾಷಿಕರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಕಳೆದ 55ವರ್ಷಗಳಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಒತ್ತಾಯಿಸುತ್ತ ಬಂದಿರುವ ಎಂಇಎಸ್ ಧುರೀಣರಿಗೆ ಠಾಕ್ರೆ ಅವರ ಮಾತುಗಳು ಅಪಥ್ಯವಾಗಿ ಕಂಡರೂ ಅವರು ಬೆಳಗಾವಿಯ ವಸ್ತುಸ್ಥಿತಿಯನ್ನು ಸರಿಯಾಗಿಯೇ ಗ್ರಹಿಸಿ ಮರಾಠಿ ಭಾಷಿಕರಿಗೆ ಬುದ್ಧಿ ಹೇಳಿದ್ದಾರೆ. ಬೆಳಗಾವಿಯ ಮರಾಠಿ ಭಾಷಿಕರನ್ನು ಪ್ರಚೋದಿಸುವ ಮೂಲಕ ಕೆಲವರು ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಎಂಬ ರಾಜ್ ಠಾಕ್ರೆ ಅವರ ಮಾತುಗಳ ಹಿಂದಿನ ಕಾಳಜಿಯನ್ನು ಸರಿಯಾದ ಅರ್ಥದಲ್ಲಿ ಗ್ರಹಿಸಬೇಕು. ಮಹಾರಾಷ್ಟ್ರ ಸರ್ಕಾರ ಮತ್ತು ಆ ರಾಜ್ಯದ ಯಾವ ಧುರೀಣರೂ ಬೆಳಗಾವಿಯ ಸಮಸ್ಯೆಯನ್ನು ಬಗೆಹರಿಲು ಉತ್ಸುಕವಾಗಿಲ್ಲ ಎಂಬ ರಾಜ್ ಠಾಕ್ರೆ ಅಭಿಪ್ರಾಯ ಕಟು ಸತ್ಯ. ಹಿಂಸೆಗೆ ಪ್ರಚೋದಿಸುವ ಮಹಾರಾಷ್ಟ್ರದ ನಾಯಕರ ಮಾತುಗಳಿಗೆ ಮರುಳಾಗದಂತೆ ಬೆಳಗಾವಿಯ ಮರಾಠಿ ಭಾಷಿಕರನ್ನು ಎಚ್ಚರಿಸುವ ಕೆಲಸವನ್ನು ರಾಜ್ ಠಾಕ್ರೆ ಮಾಡಿದ್ದಾರೆ. ಅವರ ಪ್ರಯತ್ನ ಸ್ವಾಗತಾರ್ಹ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರ ಪದೇ ಪದೇ ಹೇಳಬೇಕಾಗಿಲ್ಲ. ಮಹಾಜನ್ ಆಯೋಗದ ವರದಿಯೇ ಅಂತಿಮ ಎನ್ನುವುದು ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಧುರೀಣರಿಗೆ ಚೆನ್ನಾಗಿ ಗೊತ್ತಿದೆ. ಬೆಳಗಾವಿಯ ಬಹುತೇಕ ಮರಾಠಿ ಭಾಷಿಕರಿಗೂ ಗೊತ್ತಿದೆ. ಆದರೆ ಮಹಾರಾಷ್ಟ್ರದ ಕೆಲ ಧುರೀಣರು ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳದಂತೆ ಬೆಳಗಾವಿಯ ಎಂಇಎಸ್ ಮುಖಂಡರನ್ನು ಪ್ರಚೋದಿಸುತ್ತಿದ್ದಾರೆ. ಪ್ರಚೋದನೆಗೆ ಒಳಗಾದವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಒತ್ತಾಯಿಸುತ್ತ ಬೆಳಗಾವಿ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇದೇ ಗಡಿ ಜಿಲ್ಲೆಯ ದುರಂತ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಧೋರಣೆಯನ್ನು ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ವಿರೋಧಿಸುತ್ತಾರೆಯೇ ವಿನಃ ಮರಾಠಿ ಭಾಷಿಕರನ್ನಲ್ಲ ಎಂಬ ರಾಜ್ ಠಾಕ್ರೆ ಅವರ ಮಾತನ್ನು ಬೆಳಗಾವಿಯ ಮರಾಠಿ ಭಾಷಿಕರು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಸಹಕರಿಸಬೇಕು. ಸಣ್ಣ ಪುಟ್ಟ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯ. ರಾಜ್ಯದ ಮುಖ್ಯವಾಹಿನಿಯೊಂದಿಗೆ ಬದುಕುವ ಪ್ರಯತ್ನಕ್ಕೆ ಬೆಳಗಾವಿಯ ಮರಾಠಿ ಭಾಷಿಕರು ಮುಂದಾದರೆ ಎಲ್ಲ ಸಮಸ್ಯೆಗಳೂ ಇತ್ಯರ್ಥವಾಗುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.