ಇರಾಕನ್ನು ವಿನಾಶದತ್ತ ತಳ್ಳಿದ ಅಮೆರಿಕ ಇರಾಕ್‌ನಿಂದ ಅಮೆರಿಕದ ಸೇನೆ ವಾಪಸಾಗಿದೆ. ಇದರೊಂದಿಗೆ ಅಮೆರಿಕದ ಒಂಬತ್ತು ವರ್ಷಗಳ ಸೇನಾ ಅತಿಕ್ರಮಣದ ಕ್ರೂರ ಅಧ್ಯಾಯವೊಂದು ಅಂತ್ಯವಾಗಿದೆ. ಅಮೆರಿಕ ಮಾಡಿದ ಈ ದುಸ್ಸಾಹಸದಿಂದಾಗಿ ಇರಾಕ್‌ನ ಮೂರು ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದಾರೆ, ಆರು ಲಕ್ಷಕ್ಕೂ ಹೆಚ್ಚು ಜನರು ಅನಾಥರಾಗಿದ್ದಾರೆ, ಹತ್ತು ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಶಾಲೆ, ಆಸ್ಪತ್ರೆ ಮತ್ತಿತರ ಮೂಲ ಸೌಲಭ್ಯಗಳ ನಾಶ ಕಲ್ಪನೆಗೆ ನಿಲುಕದ್ದು. ಈ ಯುದ್ಧಕ್ಕಾಗಿ ಅಮೆರಿಕ ಒಂದು ಟ್ರಿಲಿಯನ್ ಡಾಲರ್ ವೆಚ್ಚ ಮಾಡಿದೆ. ಸುಮಾರು 4,500 ಮಂದಿ ತನ್ನ ಸೈನಿಕರನ್ನೂ ಕಳೆದುಕೊಂಡಿದೆ. ಇರಾಕಿನಲ್ಲಿ ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿಸಿ ಜನರನ್ನು ಸ್ವಾವಲಂಬಿಯನ್ನಾಗಿ ಮಾಡುವುದೇ ಆ ಅತಿಕ್ರಮಣದ ಗುರಿಯಾಗಿತ್ತು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಇರಾಕ್‌ನ ಇಂದಿನ ಸ್ಥಿತಿ ನೋಡಿದರೆ ಅವರ ಮಾತು ದೊಡ್ಡ ತಮಾಷೆಯಾಗಿ ಕಾಣುತ್ತದೆ. ಹಾಗೆ ನೋಡಿದರೆ ಇರಾಕ್, ಈಗ ಸದ್ದಾಂ ಹುಸೇನ್ ಅಧಿಕಾರಾವಧಿಯಲ್ಲಿ ಇದ್ದುದಕ್ಕಿಂತ ಹೆಚ್ಚು ದುರ್ಬಲ ಮತ್ತು ಅಸ್ಥಿರವಾಗಿದೆ. ಅಮೆರಿಕ ನಡೆಸಿದ ಯುದ್ಧ ದೇಶದಲ್ಲಿ ಪ್ರಜಾತಂತ್ರ ಶಕ್ತಿಗಳನ್ನು ಬಲಗೊಳಿಸುವುದಕ್ಕೆ ಬದಲಾಗಿ ಮೂಲಭೂತವಾದಿ ಶಕ್ತಿಗಳನ್ನು ಬಲಗೊಳಿಸಿದೆ. ಷಿಯಾ, ಸುನ್ನಿ ಮತ್ತು ಖರ್ದ್ ಜನರ ನಡುವಣ ಜನಾಂಗ ದ್ವೇಷ ಹಿಂದೆಂದಿಗಿಂತ ಹೆಚ್ಚಾಗಿದೆ. ಸದ್ದಾಂ ಹುಸೇನ್ ಸಾವಿನೊಂದಿಗೆ ಸುನ್ನಿ ದಬ್ಬಾಳಿಕೆ ಅಡಗಿದರೂ ಪ್ರಸ್ತುತ ಪ್ರಧಾನಿ ನೂರಿ ಕಮಾಲ್ ಅಲ್ ಮಾಲಿಕಿ ನಾಯಕತ್ವದ ಷಿಯಾಗಳ ಸರ್ವಾಧಿಕಾರ ತಲೆ ಎತ್ತುವ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇರಾಕ್ ಯುದ್ಧದಲ್ಲಿ ಯಶಸ್ಸು ಸಾಧಿಸಿರುವುದಾಗಿ ಈಗ ಅಮೆರಿಕ ಹೇಳುತ್ತಿರುವುದು ದೊಡ್ಡ ಸುಳ್ಳು. ಇರಾಕ್‌ನಲ್ಲಿ ಮಾರಕಾಸ್ತ್ರಗಳಿವೆ, ಅವುಗಳಿಂದ ಮನುಕುಲಕ್ಕೆ ಮಾರಕ ಎಂದು ಹೇಳಿ ಅಮೆರಿಕ ಮತ್ತು ಬ್ರಿಟನ್ ಆ ದೇಶದ ಮೇಲೆ ಸೇನಾ ಅತಿಕ್ರಮಣ ನಡೆಸಿದವು. ಮಾರಕಾಸ್ತ್ರಗಳು ಕೊನೆಗೂ ಅಲ್ಲಿ ಸಿಗಲೇ ಇಲ್ಲ. ಆದ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಆ ಎರಡೂ ದೇಶಗಳ ನಾಯಕರು ಈಗಲಾದರೂ ಪ್ರದರ್ಶಿಸುವರೆಂದು ನಿರೀಕ್ಷಿಸಲಾಗಿತ್ತು. ಆದರೆ ಮತ್ತೆ ಸುಳ್ಳು ಹೇಳುತ್ತಿರುವುದನ್ನು ನೋಡಿದರೆ ಆ ಎರಡೂ ದೇಶಗಳು ಇರಾಕ್ ಯುದ್ಧದಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಇರಾಕ್‌ನ ನಂತರ ಮುಂದಿನ ಸರದಿ ಆಫ್ಘಾನಿಸ್ತಾನದ್ದು. ಅಲ್ಲಿಯೂ ಅಮೆರಿಕ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿಂದ ಹೊರ ಬರಲು ಅಮೆರಿಕ ನಾನಾ ರೀತಿಯ ಕಸರತ್ತು ಮಾಡುತ್ತಿದೆ. ಆದರೂ ಅಮೆರಿಕ ತನ್ನ ರೌಡಿ ಬುದ್ಧಿ ಬಿಟ್ಟಿಲ್ಲ. ಅನುಭವಗಳಿಂದ ಪಾಠವನ್ನೂ ಕಲಿಯುತ್ತಿಲ್ಲ. ಇದೀಗ ಇರಾನ್ ಮತ್ತು ಸಿರಿಯಾಕ್ಕೆ ಬೆದರಿಕೆ ಹಾಕಲು ಆರಂಭಿಸಿದೆ. ಸೋವಿಯತ್ ಒಕ್ಕೂಟದ ಪತನದ ನಂತರ ವಿಶ್ವದ ಏಕೈಕ ಬಲಿಷ್ಠ ರಾಷ್ಟ್ರವಾಗಿ ಮೆರೆದ ಅಮೆರಿಕ ವಿಶ್ವ ಪೊಲೀಸು ಆಗಲು ಹೋಗಿ ದುರ್ಬಲವಾಗುತ್ತಿರುವುದು ಇತಿಹಾಸದ ದೊಡ್ಡ ವ್ಯಂಗ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.