ವಿದ್ಯುತ್ ಬಳಕೆ ದುಂದು ತಪ್ಪಿಸಿ ಈ ಸಲದ ಬೇಸಿಗೆ ವೇಳೆಗೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಇನ್ನಷ್ಟು ಹೆಚ್ಚಲಿದೆ. ಈಗ ನಿತ್ಯ 20 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಿ ಎಲ್ಲ ಮೂಲಗಳಿಂದ ಲಭ್ಯವಾಗುವ ಒಟ್ಟು 160 ದಶಲಕ್ಷ ಯೂನಿಟ್ ವಿದ್ಯುತ್ತನ್ನು ಗ್ರಾಹಕರಿಗೆ ಪೂರೈಸಲು ಸರ್ಕಾರ ಕ್ರಮಕೈಗೊಂಡಿದ್ದರೂ ಈಗಲೇ ಕೊರತೆ ಗ್ರಾಹಕರ ಅನುಭವಕ್ಕೆ ಬರುತ್ತಿದೆ. ವಿದ್ಯುತ್ ಬಳಕೆಗೆ ಕಡಿವಾಣ ಹಾಕಲು ಸರ್ಕಾರ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಗೆ ತಂದಿದೆ. ಇದರಿಂದಾಗಿ ಗ್ರಾಮೀಣ ಹಾಗೂ ಅರೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಡಿಸೆಂಬರ್ ತಿಂಗಳಲ್ಲೇ ಈ ಪರಿಸ್ಥಿತಿ ಇರುವಾಗ ಬೇಸಿಗೆಯ ಮೂರು ತಿಂಗಳಲ್ಲಿ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ. ಸರ್ಕಾರ ಎಷ್ಟೇ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದರೂ ಅದು ಒಟ್ಟಾರೆ ಜನಜೀವನ ಮತ್ತು ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ. ರಾಜಧಾನಿ ಬೆಂಗಳೂರು ಹಾಗೂ ಕೆಲವು ದೊಡ್ಡ ನಗರಗಳನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಈಗ ಆರು ಗಂಟೆ ತ್ರೀ ಫೇಸ್ ಮತ್ತು ಹನ್ನೆರಡು ತಾಸು ಸಿಂಗಲ್ ಫೇಸ್ ವಿದ್ಯುತ್ ಪೂರೈಸುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ ನಾಲ್ಕೈದು ತಾಸು ತ್ರೀ ಫೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ಬಹುತೇಕ ಹಳ್ಳಿಗಳಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ವಿದ್ಯುತ್ ಕೊರತೆಯಿಂದ ಕೃಷಿ, ತೋಟಗಾರಿಕೆ ಮತ್ತು ಕೈಗಾರಿಕಾ ಉತ್ಪಾದನೆ ಕುಸಿಯಲಿದೆ. ವಿದ್ಯುತ್ತನ್ನೇ ಅವಲಂಬಿಸಿರುವ ಸೇವಾವಲಯದ ಚಟುವಟಿಕೆಗಳು ಹಾಗೂ ದೈನಂದಿನ ಜನಜೀವನ ಮೇಲೆ ಕೆಟ್ಟ ಪರಿಣಾಮಗಳಾಗುವುದಲ್ಲದೆ ಬೆಲೆ ಏರಿಕೆಗೆ ಕಾರಣವಾಗುತ್ತದೆ. `ವಿದ್ಯುತ್ ಖರೀದಿಸಿ ಪರಿಸ್ಥಿತಿಯನ್ನು ನಿಭಾಯಿಸುತ್ತೇವೆ~ ಎಂದು ಸರ್ಕಾರ ಹೇಳಬಹುದು. ಆದರೆ ಬೇಸಿಗೆಯಲ್ಲಿ ಎಲ್ಲ ರಾಜ್ಯಗಳಲ್ಲೂ ವಿದ್ಯುತ್ತಿಗೆ ಬೇಡಿಕೆ ಹೆಚ್ಚುತ್ತದೆ. ಹಣ ಕೊಟ್ಟರೂ ವಿದ್ಯುತ್ ಲಭ್ಯತೆ ಸಾಧ್ಯವಾಗದೇ ಹೋಗಬಹುದು. ವಿದ್ಯುತ್ ಉತ್ಪಾದನೆ ಸಾಧ್ಯವಿರುವ ರಾಜ್ಯದ ಜಲಾಶಯಗಳಲ್ಲಿರುವ ನೀರನ್ನು ಮಿತವಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದರ ಜತೆಗೆ ರಾಜ್ಯದ ಶಾಖೋತ್ಪನ್ನ ಸ್ಥಾವರಗಳ ನಿರ್ವಹಣೆಯ ಕಡೆಗೂ ಸರ್ಕಾರ ಗಮನ ಕೊಡಬೇಕು. ರಾಯಚೂರು ಶಾಖೋತ್ಪನ್ನ ಸ್ಥಾವರಗಳು ಹೆಚ್ಚಾಗಿ ಬೇಸಿಗೆಯಲ್ಲಿ ಕೈಕೊಡುತ್ತವೆ. ಕಲ್ಲಿದ್ದಲಿನ ಅಭಾವದಿಂದಲೂ ಈ ಘಟಕಗಳು ಉತ್ಪಾದನೆ ನಿಲ್ಲಿಸಿದ ಉದಾಹರಣೆಗಳಿವೆ. ಹಿಂದಿನ ಅನುಭವಗಳ ಆಧಾರದ ಮೇಲೆ ಪರಿಸ್ಥಿತಿಯನ್ನು ನಿಭಾಯಿಸುವ ಕಡೆಗೆ ಸರ್ಕಾರ ಗಮನ ಕೊಡಬೇಕು. ವಿದ್ಯುತ್ ಕೊರತೆಯ ವಾಸ್ತವ ಸ್ಥಿತಿಯನ್ನು ಸರ್ಕಾರ ರಾಜ್ಯದ ಜನರ ಗಮನಕ್ಕೆ ತರಬೇಕು. ಮಹಾನಗರಗಳಲ್ಲಿ ಅಗತ್ಯ ಇಲ್ಲದಿದ್ದರೂ ವಿದ್ಯುತ್ ಹೆಚ್ಚು ಬಳಸಿ ಪೋಲು ಮಾಡುವವರಿದ್ದಾರೆ. ಉತ್ಸವ, ಸಮ್ಮೇಳನ ಇತ್ಯಾದಿ ಸಾರ್ವಜನಿಕ ಸಮಾರಂಭಗಳು, ಅದ್ಧೂರಿ ಸಮಾರಂಭಗಳ ನೆಪದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಬಳಸುವ ಮತ್ತು ಕಟ್ಟಡಗಳು, ರಸ್ತೆಗಳಿಗೆ ದೀಪಾಲಂಕಾರ ಮಾಡುವ ಪ್ರವೃತ್ತಿ ಬೆಳೆದುಬಂದಿದೆ. `ಹಣ ಕೊಟ್ಟು ವಿದ್ಯುತ್ ಖರೀದಿಸಿ ಬಳಸುತ್ತೇವೆ~ ಎಂಬ ಧೋರಣೆಯನ್ನು ಬಿಟ್ಟು ಮಿತಬಳಕೆ ಮಾಡುವ ಮೂಲಕ ಜನರೂ ಸರ್ಕಾರದ ಜತೆ ಸಹಕರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.